ಹೂವಿನಹಿಪ್ಪರಗಿ: ಗ್ರಾಮೀಣ ಭಾಗದ ಜನರ ವಿವಿಧ ಯೋಜನೆಗಳಲ್ಲಿ ಒಂದಾದ ವಿದ್ಯುತ್‌ನ್ನು ಮಿತವಾಗಿ ಬಳಸಿ ನಾಳೆಗಾಗಿ ಉಳಿಸುವ ಜೊತೆಗೆ ವಿದ್ಯುತ್‌ನಲ್ಲಿ ಹಳ್ಳಿ ಜನರು ವಿವಿಧ ತೊಂದರೆಗಳನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ನಮ್ಮ ಸರಕಾರ ರೈತರ ಬೆನ್ನಿಗೆ ನಿಂತು ಅವರಿಗೆ ಅನುಕೂಲ ಮಾಡಿಕೊಡಲಾಗಿದೆ. ಅದರ ಸದುಪಯೋಗವನ್ನುಅನ್ನದಾತರು ಪಡೆಯಬೇಕೆಂದು ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಸಲಹೆ ನೀಡಿದರು.
ಬಸವನಬಾಗೇವಾಡಿ ತಾಲೂಕಿನ ಬ್ಯಾಕೋಡ ಗ್ರಾಮದ ವೀರಭದ್ರೇಶ್ವರ ದೇವಾಲಯದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿದ್ಯುತ್ ಅದಾಲತ್, ವಿದ್ಯುತ್ ಉಳಿಸಿ ನಾಡು ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈಗಾಗಲೆ ಕ್ಷೇತ್ರದಲ್ಲಿ ಹಲವು ಮಹತ್ತರ ಯೋಜನೆಗಳಿಗೆ ಭೂಮಿಪೂಜೆ ಮಾಡಿ ಈಗ ಕೆಲವೊಂದು ಕಾಮಗಾರಿ ಮುಗಿದು ಜನರ ಸೇವೆ ಸಿದ್ಧವಾಗಿವೆ. ಬಸವನಬಾಗೇವಾಡಿ ತಾಲೂಕಿನ ಕಣಕಾಲ ಹಾಗೂ ದಿಂಡವಾರ ಗ್ರಾಮದಲ್ಲಿ 110 ಕೆವಿ ವಿದ್ಯುತ್ ಘಟಕ ಸ್ಥಾಪಿಸುವ ಗುರಿ ಹೊಂದಿದ್ದು ಈಗ ಟೆಂಡರ್ ಹಂತದಲ್ಲಿದೆ ಎಂದು ಹೇಳಿದರು.
ಬಸವನಬಾಗೇವಾಡಿ ಹೆಸ್ಕಾಂ ಎಇಇ ಜಗದೀಶ ಜಾಧವ ಮಾತನಾಡಿ, ಸುಟ್ಟ ಟಿಸಿಗಳನ್ನು 24 ಗಂಟೆಯಲ್ಲಿ ಬದಲಾವಣೆ ಮಾಡಿಕೊಡುವ ಯೋಜನೆಯನ್ನು ಜಾರಿಗೆ ತರಲಾಗಿದೆ. ಶಾಲಾ ಕಾಲೇಜುಗಳ ಮೇಲಿದ್ದ ವಿದ್ಯುತ್ ತಂತಿಯನ್ನು ಬದಲಾವಣೆಯನ್ನು ಮಾಡಲಾಗಿದೆ. ವಿದ್ಯುತ್ ಅದಾಲತ್ ಕಾರ್ಯಕ್ರದಲ್ಲಿ ಜನರ ಸಣ್ಣ ಪುಟ್ಟ ವಿದ್ಯುತ್ ಸಮಸ್ಯೆಯನ್ನು ಗ್ರಾಪಂ ಮಟ್ಟದಲ್ಲಿ ಬಗೆಹರಿಸುವ ಕಾರ್ಯಕ್ರಮ ಇದಾಗಿದೆ ಎಂದರು.
ಹೂವಿನಹಿಪ್ಪರಗಿ ಶಾಖಾಧಿಕಾರಿ ಎಂ. ಎಲ್.ರಜಪೂತ, ಮುಖಂಡರಾದ ಸಿ.ಎನ್ .ಹಿರೇಮಠ, ಸಂಗನಗೌಡ ಧನ್ನೂರ, ಮಲ್ಲನಗೌಡ ಪಾಟೀಲ, ರಾಮನಗೌಡ ಬಿರಾದಾರ, ಮಂಜುನಾಥ ಹೊಸಗೌಡರ, ಬಸಲಿಂಗಪ್ಪಗೌಡ ಇಂಗಳಗಿ, ಮಲ್ಲು ತಳವಾರ ಸೇರಿದಂತೆ ಇತರರು ಭಾಗವಹಿಸಿದ್ದರು.