ಮುಂಬಯಿ : 2018-19ರ ಸಾಲಿನ ಹಣಕಾಸು ವರ್ಷದ ಮೊದಲ ದಿನವಾದ ಇಂದಿನ ಸೋಮವಾರದ ವಹಿವಾಟನ್ನು ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ 287 ಅಂಕಗಳ ಏರಿಕೆಯೊಂದಿಗೆ ಭರ್ಜರಿಯಾಗಿ ಆರಂಭಿಸಿದೆ.
ಉತ್ತಮ ತೇಜಿ ಕಂಡ ಇಂದಿನ ರಾಲಿಯಲ್ಲಿ ಸೆನ್ಸೆಕ್ಸ್ 33,000 ಅಂಕಗಳ ಮನೋ ಪ್ರಾಬಲ್ಯದ ಮಟ್ಟವನ್ನು ದಾಟಿ ಮುನ್ನುಗ್ಗಿದ್ದು ರಿಲಯನ್ಸ್, ಟಾಟಾ ಮೋಟರ್, ಮಾರುತಿ ಶೇರುಗಳು ಇದಕ್ಕೆ ಸಾಥ್ ನೀಡಿದವು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಕೂಡ ಇಂದು 10,200 ಅಂಕಗಳ ಮನೋ ಪ್ರಾಬಲ್ಯದ ಮಟ್ಟವನ್ನು ದಾಟಿ ಮುನ್ನುಗ್ಗಿರುವುದು ಹೂಡಿಕೆದಾರರಲ್ಲಿ ಹೊಸ ಭರವಸೆ ಹುಟ್ಟಿಸಿದೆ.
ದಿನಾಂತ್ಯಕ್ಕೆ ಸೆನ್ಸೆಕ್ಸ್ 286.68 ಅಂಕಗಳ ಏರಿಕೆಯನ್ನು ಸಾಧಿಸಿ 33,255.36 ಅಂಕಗಳ ಮಟ್ಟದಲ್ಲೂ ನಿಫ್ಟಿ 98.10 ಅಂಕಗಳ ಏರಿಕೆಯನ್ನು ದಾಖಲಿಸಿ 10,211.80 ಅಂಕಗಳ ಮಟ್ಟದಲ್ಲೂ ದಿನದ ವಹಿವಟನ್ನು ಮುಗಿಸಿದವು.
ಮುಂಬಯಿ ಶೇರುಪೇಟೆಯಲ್ಲಿ ಇಂದು 2,811 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು. 2,104 ಶೇರುಗಳು ಮುನ್ನಡೆ ಸಾಧಿಸಿದವು. 532 ಶೇರುಗಳು ಹಿನ್ನಡೆಗೆ ಗುರಿಯಾದವು; 175 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.