ಚೆನ್ನೈ: ಇತ್ತೀಚೆಗಷ್ಟೇ ತಮಿಳುನಾಡು ಸರ್ಕಾರ ನೀಡಿದ್ದ ಜಾಹೀರಾತಿನಲ್ಲಿ ಚೀನಿ ರಾಕೆಟ್ ನ ಚಿತ್ರವನ್ನು ಬಳಸಿದ್ದಕ್ಕೆ ಭಾರೀ ಟೀಕೆಗೆ ಗುರಿಯಾಗಿದ್ದ ಘಟನೆಯ ಬೆನ್ನಲ್ಲೇ ಇದೀಗ ತನ್ನದೇ ಸರ್ಕಾರದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕುರಿತು ಹಾಕಲಾಗಿದ್ದ ಬೃಹತ್ ಕಟೌಟ್ ನಲ್ಲಿನ ಸ್ಪೆಲ್ಲಿಂಗ್ (ಕಾಗುಣಿತ) ದೋಷ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ಮತ್ತೊಮ್ಮೆ ಪೇಚಿಗೆ ಸಿಲುಕುವಂತಾಗಿದೆ.
ಇದನ್ನೂ ಓದಿ:Army Plane: ಬಿಹಾರದ ಗಯಾದಲ್ಲಿ ತರಬೇತಿ ವಿಮಾನ ಪತನ… ಇಬ್ಬರು ಪೈಲಟ್‌ಗಳಿಗೆ ಗಾಯ
ಬೃಹತ್ ಪೋಸ್ಟರ್ ನಲ್ಲಿ “ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ತಮಿಳುನಾಡಿನ ವಧು” ಎಂಬುದಾಗಿ ಬರೆಯಲಾಗಿದ್ದು, ಈ ಸ್ಪೆಲ್ಲಿಂಗ್ ದೋಷದ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ವರದಿಯ ಪ್ರಕಾರ, ಎಂಕೆ ಸ್ಟಾಲಿನ್ ಫೋಟೋದ ಜತೆ “ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ತಮಿಳುನಾಡಿನ ಹೆಮ್ಮೆ” ಎಂಬ ಕ್ಯಾಪ್ಶನ್ ಬರೆಯಲು ನಿರ್ಧರಿಸಲಾಗಿತ್ತು. ಆದರೆ ಸ್ಪೆಲ್ಲಿಂಗ್ ದೋಷದಿಂದಾಗಿ ಅದು “Bride of Tamilnadu” ಅಂತ ಬರೆಯಲಾಗಿದೆ.! ಆದರೆ ಈ ಪೋಸ್ಟರ್ ಅನ್ನು ಯಾರು, ಯಾವ ಸ್ಥಳದಲ್ಲಿ ಪ್ರದರ್ಶಿಸಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ ಎಂದು ವರದಿ ವಿವರಿಸಿದೆ.
ಕಾಗುಣಿತ ದೋಷದ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಮೆಮೆಗಳ ವ್ಯಂಗ್ಯದ ಮಹಾಪೂರವೇ ಹರಿದುಬಂದಿದೆ. ಸ್ಪೆಲ್ಲಿಂಗ್ ದೋಷಕ್ಕೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು, ಇದು Bribe of Tamilnadu ಅಂತ ಉಲ್ಲೇಖಿಸಿದ್ದಾರೆ. ಮತ್ತೊಬ್ಬ ಎಕ್ಸ್ ಬಳಕೆದಾರ ವರ ಯಾರು ಎಂದು ಪ್ರಶ್ನಿಸಿದ್ದಾರೆ.
ಮೂರನೇ ಬಳಕೆದಾರ, ವ್ಹಾ…ಇದೊಂದು ಅದ್ಭುತ…ಆದರೆ ಈ ವಧುವನ್ನು ಯಾರು ವರಿಸುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. ಇತ್ತೀಚೆಗೆ ಇಸ್ರೋದ 2ನೇ ಉಡಾವಣಾ ಕೇಂದ್ರದ ಉದ್ಘಾಟನೆ ವೇಲೆ ತಮಿಳುನಾಡು ಸರ್ಕಾರ ನೀಡಿದ್ದ ಜಾಹೀರಾತಿನಲ್ಲಿ ಚೀನಿ ರಾಕೆಟ್ ಚಿತ್ರ ಬಳಸಿ ಟೀಕೆಗೆ ಗುರಿಯಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.