ಅಸ್ಸಾಂ: ವಿಶ್ವದಲ್ಲಿಯೇ ಅತೀ ದೊಡ್ಡ ಸಂಸಾರವನ್ನು ಹೊಂದಿದ್ದ ಮಿಜೋರಾಂನ ಝಿಯೋನಾ ಚನಾ(76ವರ್ಷ) ಭಾನುವಾರ ಮಿಜೋರಾಂ ರಾಜಧಾನಿ ಐಜಾವ್ಲ್ ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕೋವಿಡ್ ಇಳಿಕೆ: ಜೂ.16ರಿಂದ ತಾಜ್ ಮಹಲ್, ಅಜಂತಾ ಸ್ಮಾರಕ ಭೇಟಿಗೆ ಪ್ರವಾಸಿಗರಿಗೆ ಅವಕಾಶ
76 ವರ್ಷದ ಜಿಯೋನ್ ಗಾಕಾ ಝಿಯೋನಾ ಚನಾ ಎಂದೇ ಜನಪ್ರಿಯರಾಗಿದ್ದರು, ಅದಕ್ಕೆ ಕಾರಣವಾಗಿದ್ದು ಚನಾ 38 ಪತ್ನಿಯರನ್ನು ಹೊಂದಿದ್ದು, 89 ಮಕ್ಕಳನ್ನು ಪಡೆದಿದ್ದರು. ಅಲ್ಲದೇ 33 ಮೊಮ್ಮಕ್ಕಳನ್ನು ಹೊಂದಿರುವುದು!
ಝಿಯೋನಾ ಕುಟುಂಬದಲ್ಲಿ ಸುಮಾರು 161 ಮಂದಿ ವಾಸವಾಗಿದ್ದರು, ಅಷ್ಟೇ ಅಲ್ಲ ನಾಲ್ಕು ಅಂತಸ್ತಿನ ಮನೆಯಲ್ಲಿ ವಾಸವಾಗಿದ್ದ ಚನಾ ಮನೆ ಹಾಗೂ ಕುಟುಂಬವನ್ನು ವೀಕ್ಷಿಸಲು ಪ್ರವಾಸಿಗರು ಈ ಹಳ್ಳಿಗೆ ಭೇಟಿ ನೀಡುತ್ತಿದ್ದರು ಎಂದು ವರದಿ ವಿವರಿಸಿದೆ.
ಝಿಯೋನಾ ಕುಟುಂಬ ಸದಸ್ಯರ ಮಾಹಿತಿ ಪ್ರಕಾರ, ಚನಾ ಅವರು ಜೂನ್ 7ರಿಂದ ಊಟ ಸೇರಿದಂತೆ ಯಾವುದೇ ಆಹಾರ ಸೇವಿಸಲು ಸಾಧ್ಯವಾಗುತ್ತಿರಲಿಲ್ಲವಂತೆ. ಡಯಾಬೀಟಿಸ್, ಅಧಿಕ ರಕ್ತದೊತ್ತಡ ಸೇರಿದಂತೆ ಕೆಲವು ಆರೋಗ್ಯ ಸಮಸ್ಯೆಯಿಂಚ ಚನಾ ಬಳಲುತ್ತಿದ್ದರು ಎಂದು ತಿಳಿಸಿದ್ದಾರೆ.
ಜೂನ್ 11ರಂದು ಝಿಯೋನಾ ಪ್ರಜ್ಞಾಹೀನಾರಾಗಿದ್ದರಿಂದ ವೈದ್ಯರು ಕೂಡಲೇ ರಕ್ತದ ಅವಶ್ಯಕತೆ ಇದೆ ಎಂದು ತಿಳಿಸಿದ್ದರು. ನಂತರ ಭಾನುವಾರ ಮಧ್ಯಾಹ್ನ ಟ್ರಿನಿಟಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ 3ಗಂಟೆಗೆ ನಿಧನರಾಗಿರುವುದಾಗಿ ವರದಿ ತಿಳಿಸಿದೆ.