ತೆಲಂಗಾಣ: 119 ಸ್ಥಾನ ಬಲದ ತೆಲಂಗಾಣ ವಿಧಾನಸಭೆಯಲ್ಲಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್ ಎಸ್) 89 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಮತ್ತೆ ಅಧಿಕಾರಕ್ಕೇರಲು ಸಜ್ಜಾಗಿದೆ. ಮತ್ತೊಂದೆಡೆ ಶತಾಯಗತಾಯ ಅಧಿಕಾರಕ್ಕೆ ಏರಬೇಕೆಂಬ ಇಚ್ಚೆಯೊಂದಿಗೆ ಅಖಾಡಕ್ಕಿಳಿದಿದ್ದ ಕಾಂಗ್ರೆಸ್, ಟಿಡಿಪಿ ಮಹಾಮೈತ್ರಿ ಕೂಟಕ್ಕೆ ತೀವ್ರ ಮುಖಭಂಗವಾಗಿದೆ.
ತೆಲಂಗಾಣದಲ್ಲಿ ಆಡಳಿತಾರೂಢ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್ ಎಸ್ ಪಕ್ಷವನ್ನು ಸೋಲಿಸುವ ನಿಟ್ಟಿನಲ್ಲಿ ಕಾಂಗ್ರೆಸ್, ತೆಲುಗು ದೇಶಂ ಪಕ್ಷ, ತೆಲಂಗಾಣ ಜನ ಸಮಿತಿ, ಕಮ್ಯೂನಿಷ್ಟ್ ಪಾರ್ಟಿ ಆಫ್ ಇಂಡಿಯಾ ಮೈತ್ರಿ ಮಾಡಿಕೊಂಡಿದ್ದವು. ಆದರೆ ತೆಲಂಗಾಣದ ಮತದಾರರು ಕಾಂಗ್ರೆಸ್ ಮೈತ್ರಿಕೂಟವನ್ನು ಸಾರಸಗಟಾಗಿ ತಿರಸ್ಕರಿಸಿ ಮತ್ತೆ ಟಿಆರ್ ಎಸ್ ಕೈ ಹಿಡಿದಿದ್ದಾರೆ.
ಮೈತ್ರಿಕೂಟದ ಸೋಲಿನಿಂದಾಗಿ ಕಾಂಗ್ರೆಸ್ ಮತ್ತು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡುಗೆ ಭಾರೀ ಮುಖಭಂಗವಾದಂತಾಗಿದೆ. ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಕೆಸಿಆರ್ ಜಯಗಳಿಸುವುದಾಗಿ ತಿಳಿಸಿದ್ದವು. ಆದರೆ ಗೆಲುವಿನ ಸ್ಥಾನಗಳ ಅಂತರ ಕಡಿಮೆ ಇರಲಿದೆ ಎಂದು ತಿಳಿಸಿದ್ದವು. ಫಲಿತಾಂಶದಲ್ಲಿ ಟಿಆರ್ ಎಸ್ 89 ಸ್ಥಾನಗಳಲ್ಲಿ ಜಯ ಗಳಿಸಿತ್ತು.
ಮಿಜೋರಾಂನಲ್ಲಿ ಖಾತೆ ತೆರೆದ ಬಿಜೆಪಿ:
ಈಶಾನ್ಯ ರಾಜ್ಯದ ಮಿಜೋರಾಂನಲ್ಲಿ ಈವರೆಗೆ 1989ರಿಂದ ಈವರೆಗೆ ಆರು ಚುನಾವಣೆಗಳು ನಡೆದಿದ್ದವು. ಆದರೆ ಈ ಯಾವ ಚುನಾವಣೆಯಲ್ಲಿಯೂ ಭಾರತೀಯ ಜನತಾ ಪಕ್ಷಕ್ಕೆ ಇಲ್ಲಿ ನೆಲೆಯೂರಲು ಸಾಧ್ಯವಾಗಿಲ್ಲವಾಗಿತ್ತು. 2018ರ ವಿಧಾನಸಭಾ ಚುನಾವಣೆಯಲ್ಲಿ 40 ಸದಸ್ಯ ಬಲದಲ್ಲಿ ಭಾರತೀಯ ಜನತಾ ಪಕ್ಷ ಮೊದಲ ಬಾರಿಗೆ ಖಾತೆಯನ್ನು ತೆರೆದಿದೆ.