ಯಲ್ಲಾಪುರ: ಸಮಯ ಸದುಪಯೋಗ ಪಡಿಸಿಕೊಂಡರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಇಲ್ಲೊಬ್ಬ ಮಹಿಳೆ ನಿದರ್ಶನವಾಗಿದ್ದಾಳೆ.
ತಾಲೂಕಿನ ಇಡಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರ್ತಿಬೈಲ್ ಗ್ರಾಮದ ಪ್ರೇಮಾ ರಾಮಚಂದ್ರ ಜೋಶಿ ಬೇಸಿಗೆಯಲ್ಲಿ ಖಾಲಿ ಬಿಡುವ ಗದ್ದೆ ಪ್ರದೇಶವನ್ನು ತರಕಾರಿಗೆ ಬಳಸಿ ಮಿಶ್ರ ತರಕಾರಿ ಬೆಳೆ ಬೆಳೆದಿದ್ದಾರೆ.
ಸಾಮಾಜಿಕ ಚಟುವಟಿಕೆಯಲ್ಲಿ ಮಂಚೂಣಿಯಲ್ಲಿದ್ದ ಇವರು ಕೃಷಿಯಲ್ಲಿ ಒಲವನ್ನು ಹೊಂದಿ ತರಕಾರಿ, ಮೇವು, ಧಾನ್ಯ ಬೆಳೆದು ತಮ್ಮ ಅವಶ್ಯಕತೆಯನ್ನು ಪೂರೈಸಿಕೊಂಡಿದ್ದಾರೆ.
ಇರುವ ಮೂರೂವರೆ ಎಕರೆ ಗದ್ದೆಯಲ್ಲಿ ಮೊಗೆ, ಸವತೆ, ಗೋವೆಕಾಯಿ, ಗೆಣಸು, ಬೆಂಡೆ, ಟೊಮೆಟೋ, ಹೀರೆಕಾಯಿ, ಹಾಗಲಕಾಯಿ, ಎರೆಸವತೆ, ಪಾಲಕ್ ತರಕಾರಿಯನ್ನು ಬೆಳೆಸಿದ್ದಾರೆ. ಇನ್ನು ಕೆಲ ಭಾಗದಲ್ಲಿ ಉದ್ದು, ಜೋಳ, ಮೇವಿಗಾಗಿ ಸನ್ನೆಂಪು ಇದನ್ನೂ ಪ್ರತಿವರ್ಷ ಈ ಅವಧಿಯಲ್ಲಿ ಬೆಳೆಸುತ್ತ ಬಂದಿದ್ದಾರೆ. ಹೀಗೆ ಬೆಳೆದ ತರಕಾರಿಗೆ ಮಾರುಕಟ್ಟೆ ಹುಡುಕಿಕೊಂಡು ಹೋಗುತ್ತಿಲ್ಲ. ಮನೆಬಾಗಿಲಿಗೆ ಬಂದು ತಾಜಾ ತರಕಾರಿ ಒಯ್ಯುತ್ತಾರೆ. ಇದನ್ನು ಇವರು ರೂಢಿಸಿಕೊಂಡು ಬಂದಿದ್ದಾರೆ.
ಸಾವಯವದಲ್ಲಿ ರೂಢಿಸಿಕೊಂಡ ಬಂದ ಇವರು ಈಗ ತೋಟಗಾರಿಕೆ ಕೃಷಿ ಇಲಾಖೆಯ ಮಾರ್ಗದರ್ಶನ ಪಡೆದು ಸ್ವಲ್ಪ ವೈಜ್ಞಾನಿಕವಾಗಿಯೂ ಮಾರ್ಪಡಿಸಿಕೊಂಡು ಹೊಸತನವನ್ನು ಕೈಗೊಂಡಿದ್ದಾರೆ. ಇತ್ತೀಚಿನ ವರ್ಷದಲ್ಲಿ ಅಕಾಲಿಕ ಮಳೆಯಿಂದಾಗಿ ತೊಂದರೆ ಅನುಭವಿಸಿದ್ದಾರೆ. ಕಳೆದ ಹಾಗೂ ಈ ವರ್ಷ ಲಾಕ್ ಡೌನ್ ವೇಳೆ ಸದುಪಯೋಗಮಾಡಿಕೊಂಡು ಊರಲ್ಲಿ ಜನರಿಗೆ ತರಕಾರಿ ನೀಡಿ ನೆರವಾಗಿದ್ದಾರೆ. ಈಗಿರುವ ಮಂಗಗಳ ಉಪಟಳಕ್ಕೂ ಪರಿಹಾರ ಕಂಡುಕೊಂಡಿರುವ ಇವರು ಫಸಲಿಗೆ ಬಲೆ ಮತ್ತು ಪ್ಲಾಸ್ಟಿಕ್ ಹೊದಿಕೆ ಬಳಸುವ ಮೂಲಕ ಗಿಡ ಬೆಳಸಿ ವಿಶಿಷ್ಟ ಪದ್ಧತಿಯಿಂದ ಫಲ ತೆಗೆಯುತ್ತಿದ್ದಾರೆ. ಮಂಗಗಳ ನಿಯಂತ್ರಣವೊಂದು ಮಾಡಿಕೊಂಡು ತರಕಾರಿ ಬೆಳೆ ಬೆಳೆಯಿಸಿದ್ದು ದೊಡ್ಡ ಸಾಧನೆಯೇ ಸರಿ. ಜೊತೆಗೆ ಪತಿ ರಾಮಚಂದ್ರ ಜೋಶಿಯೊಡಗೂಡಿ ಜೇನುಕೃಷಿಯನ್ನೂ ಕೈಗೊಂಡಿದ್ದಾರೆ.
ಹೋಂ ಪ್ರಾಡಕ್ಟ್ : ಇವರ ಕೆಲಸ ಇದೊಂದೇ ಅಲ್ಲ. ಸ್ವ ಸಹಾಯ ಸಂಘ ಕಟ್ಟಿಕೊಂಡು ಮಸಾಲೆಪುಡಿ, ಹಲಸಿನ ಹಪ್ಪಳ, ಚಿಪ್ಸ್ ಮಾಡಿ ಕಾರವಾರ, ಹುಬ್ಬಳ್ಳಿಗೂ ಪೂರೈಸುತ್ತಾರೆ. ಆರ್ಡರ್ ಸ್ವೀಕರಿಸಿ ಹೋಳಿಗೆ, ಚಕ್ಕುಲಿ ವಿವಿಧ ಸಿಹಿತಿಂಡಿಗಳನ್ನೂ ಸಂಘದ ಮಹಿಳೆಯರು ಸೇರಿ ಮಾಡಿಕೊಡುತ್ತಾರೆ. ಇವರೇ ಕಟ್ಟಿಬೆಳೆಸಿದ ಸೀತಾರಾಮ ಸಂಜೀವಿನಿ ಗ್ರಾಮಮಟ್ಟದ ಸ್ವಸಹಾಯ ಒಕ್ಕೂಟ ರಚಿಸಿಕೊಂಡಿದ್ದಾರೆ.
ಕೃಷಿ ಇಲಾಖೆಯ ಆತ್ಮ ಯೋಜನೆಯಲ್ಲಿ ಕೆಲಸ ಮಾಡಿದ ಇವರಿಗೆ ಒಂದಷ್ಟು ಕೃಷಿ ಸಂಬಂಧಿತ ಅನುಭವ ದೊರೆತಿದೆ. ಸದ್ಯ ಇವರು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಶೈಕ್ಷಣಿಕ ಪರಿಷತ್ ಸದಸ್ಯೆಯೂ ಆಗಿದ್ದಾರೆ.