Advertisement

WPL 2024; ಪೆರ್ರಿ ದಾಳಿಗೆ ಮುಂಬೈ ಇಂಡಿಯನ್ಸ್‌ ಪಲ್ಟಿ; ಪ್ಲೇ ಆಫ್ ಗೆ ಆರ್‌ಸಿಬಿ

12:28 AM Mar 13, 2024 | Team Udayavani |

ಹೊಸದಿಲ್ಲಿ: ಆಸ್ಟ್ರೇಲಿಯದ ಸ್ಟಾರ್‌ ಆಲ್‌ರೌಂಡರ್‌ ಎಲ್ಲಿಸ್‌ ಪೆರ್ರಿ ಅವರ ಘಾತಕ ಬೌಲಿಂಗ್‌ ಹಾಗೂ ಉಪಯುಕ್ತ ಬ್ಯಾಟಿಂಗ್‌ ನೆರವಿನಿಂದ ಮುಂಬೈ ಇಂಡಿಯನ್ಸ್‌ಗೆ 7 ವಿಕೆಟ್‌ ಸೋಲುಣಿಸಿದ ಆರ್‌ಸಿಬಿ ವನಿತಾ ಪ್ರೀಮಿಯರ್‌ ಲೀಗ್‌ ಪಂದ್ಯಾವಳಿಯ ಪ್ಲೇ ಆಫ್ ಸುತ್ತನ್ನು ಪ್ರವೇಶಿಸಿದೆ. ಈ ಫ‌ಲಿತಾಂಶದೊಂದಿಗೆ ಯುಪಿ ವಾರಿಯರ್ ಮತ್ತು ಗುಜರಾತ್‌ ಜೈಂಟ್ಸ್‌ ಕೂಟದಿಂದ ನಿರ್ಗಮಿಸಿವೆ.

Advertisement

ಮುಂಬೈ 19 ಓವರ್‌ಗಳಲ್ಲಿ 113ಕ್ಕೆ ಕುಸಿದರೆ, ಆರ್‌ಸಿಬಿ 15 ಓವರ್‌ಗಳಲ್ಲಿ 3 ವಿಕೆಟಿಗೆ 115 ರನ್‌ ಬಾರಿಸಿತು. ಇದರೊಂದಿಗೆ ಮಂಧನಾ ಪಡೆ ಲೀಗ್‌ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆಯಿತು. ಎಲಿಮಿನೇಟರ್‌ ಪಂದ್ಯದಲ್ಲಿ ಮತ್ತೆ ಆರ್‌ಸಿಬಿ-ಮುಂಬೈ ಮುಖಾಮುಖೀಯಾಗುವ ಸಾಧ್ಯತೆ ಇದೆ.

ಪೆರ್ರಿ 6 ವಿಕೆಟ್‌ ಸಾಧನೆ
ಆರ್‌ಸಿಬಿಯ ಬೌಲಿಂಗ್‌ ಆಯ್ಕೆಯ ನಿರ್ಧಾರವನ್ನು ಎಲ್ಲಿಸ್‌ ಪೆರ್ರಿ ಭರ್ಜರಿಯಾಗಿ ಸಮರ್ಥಿಸಿದರು. 4 ಓವರ್‌ಗಳಲ್ಲಿ ಅವರು ಕೇವಲ 15 ರನ್‌ ನೀಡಿ 6 ವಿಕೆಟ್‌ ಉಡಾಯಿಸಿದರು. ಇದು ಡಬ್ಲ್ಯುಪಿಎಲ್‌ನಲ್ಲಿ ದಾಖಲಾದ ಸರ್ವಶ್ರೇಷ್ಠ ಬೌಲಿಂಗ್‌. ಡೆಲ್ಲಿಯ ಮರಿಜಾನ್‌ ಕಾಪ್‌ ಕಳೆದ ವರ್ಷ ಗುಜರಾತ್‌ ವಿರುದ್ಧ 15 ರನ್ನಿಗೆ 5 ವಿಕೆಟ್‌ ಕೆಡವಿದ್ದು ಹಿಂದಿನ ದಾಖಲೆ ಆಗಿತ್ತು. ಆಶಾ ಸೋಭನಾ, ಟಾರಾ ನೋರಿಸ್‌ ಮತ್ತು ಜೆನ್ನಿಫ‌ರ್‌ ಗಾರ್ತ್‌ ಕೂಡ 5 ವಿಕೆಟ್‌ ಕೆಡವಿದ್ದಾರೆ.

ಮುಂಬೈ ಪರ ಎಸ್‌. ಸಾಜನಾ ಸರ್ವಾಧಿಕ 30, ಹ್ಯಾಲಿ ಮ್ಯಾಥ್ಯೂಸ್‌ 26 ರನ್‌ ಮಾಡಿದರು. ಇವರ ಮೊದಲ ವಿಕೆಟ್‌ ಜತೆಯಾಟದಲ್ಲಿ 6 ಓವರ್‌ಗಳಿಂದ 43 ರನ್‌ ಒಟ್ಟುಗೂಡಿತು. ಒಂದು ಹಂತದಲ್ಲಿ ಮುಂಬೈ ಒಂದೇ ವಿಕೆಟಿಗೆ 65 ರನ್‌ ಮಾಡಿ ದೊಡ್ಡ ಮೊತ್ತದ ಸೂಚನೆ ನೀಡಿತ್ತು. ಆದರೆ 48 ರನ್‌ ಅಂತರದಲ್ಲಿ 9 ವಿಕೆಟ್‌ ಉರುಳಿತು.

ಆರ್‌ಸಿಬಿ ಚೇಸಿಂಗ್‌ ಆಶಾದಾಯಕವಾಗೇನೂ ಇರಲಿಲ್ಲ. ಸಣ್ಣ ಗುರಿ ಎದುರಿಗಿದ್ದರೂ ರನ್‌ ಗಳಿಸಲು ಪರದಾಡಿತು. ಆರಂಭಿಕರಾದ ಸೋಫಿ ಮೊಲಿನಾಕ್ಸ್‌ (9), ಸ್ಮತಿ ಮಂಧನಾ (11) 25 ರನ್‌ ಆಗುವಷ್ಟರಲ್ಲಿ ಪೆವಿಲಿಯನ್‌ ಸೇರಿಕೊಂಡರು. ಸೋಫಿ ಡಿವೈನ್‌ ಆಟ ನಾಲ್ಕೇ ರನ್ನಿಗೆ ಮುಗಿಯಿತು. 39 ರನ್ನಿಗೆ 3 ವಿಕೆಟ್‌ ಬಿತ್ತು.

Advertisement

ಆಲ್‌ರೌಂಡ್‌ ಶೋ
ಬೌಲಿಂಗ್‌ನಲ್ಲಿ ಮಿಂಚಿದ ಎಲ್ಲಿಸ್‌ ಪೆರ್ರಿಯೇ ಆರ್‌ಸಿಬಿಯ ಬ್ಯಾಟಿಂಗ್‌ ರಕ್ಷಣೆಗೆ ನಿಲ್ಲಬೇಕಾಯಿತು. ಇವರಿಗೆ ರಿಚಾ ಘೋಷ್‌ ಉತ್ತಮ ಬೆಂಬಲವಿತ್ತರು. ಇಬ್ಬರೂ ಮುಂಬೈ ಬೌಲಿಂಗ್‌ ದಾಳಿಯನ್ನು ಯಾವುದೇ ಒತ್ತಡವಿಲ್ಲದೆ ಎದುರಿಸಿ ತಂಡದ ಮೊತ್ತವನ್ನು ಏರಿಸುತ್ತ ಹೋದರು. ಈ ಜೋಡಿಯಿಂದ ಮುರಿಯದ 4ನೇ ವಿಕೆಟಿಗೆ 53 ಎಸೆತಗಳಿಂದ 76 ರನ್‌ ಒಟ್ಟುಗೂಡಿತು.

ಎಲ್ಲಿಸ್‌ ಪೆರ್ರಿ 38 ಎಸೆತಗಳಿಂದ ಅಜೇಯ 40 ರನ್‌ (5 ಬೌಂಡರಿ, 1 ಸಿಕ್ಸರ್‌) ಮತ್ತು ರಿಚಾ ಘೋಷ್‌ 28 ಎಸೆತಗಳಿಂದ ಅಜೇಯ 36 ರನ್‌ ಮಾಡಿದರು (4 ಬೌಂಡರಿ, 2 ಸಿಕ್ಸರ್‌).ಆಲ್‌ರೌಂಡ್‌ ಸಾಹಸಕ್ಕಾಗಿ ಎಲ್ಲಿಸ್‌ ಪೆರ್ರಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಡೆಲ್ಲಿ-ಗುಜರಾತ್‌: ಇಂದು ಕೊನೆಯ ಲೀಗ್‌ ಪಂದ್ಯ
ವನಿತಾ ಪ್ರೀಮಿಯರ್‌ ಲೀಗ್‌ನ ಕೊನೆಯ ಲೀಗ್‌ ಪಂದ್ಯ ಬುಧವಾರ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಗುಜರಾತ್‌ ಜೈಂಟ್ಸ್‌ ನಡುವೆ ನಡೆಯಲಿದೆ. ಅಂತಿಮ ಸ್ಥಾನದಲ್ಲಿರುವ ಗುಜರಾತ್‌ ತಂಡಕ್ಕೆ ಇದು ಕೇವಲ ಪ್ರತಿಷ್ಠೆಯ ಪಂದ್ಯ. ಲೆಕ್ಕಾಚಾರವಿಲ್ಲದೆ ಅಗ್ರಸ್ಥಾನಕ್ಕೇರಬೇಕಾದರೆ ಡೆಲ್ಲಿಗೆ ಗೆಲುವು ಅಗತ್ಯವಿದೆ. ಗೆದ್ದರೆ ಅದು ನೇರವಾಗಿ ಫೈನಲ್‌ ತಲುಪಲಿದೆ. 2ನೇ ಹಾಗೂ 3ನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್‌ ಸುತ್ತಿನಲ್ಲಿ ಆಡಲಿವೆ. ಇಲ್ಲಿ ಗೆದ್ದ ತಂಡ ಫೈನಲ್‌ ತಲುಪಲಿದೆ.

ಡೆಲ್ಲಿ 7 ಪಂದ್ಯಗಳನ್ನಾಡಿದ್ದು, ಐದನ್ನು ಗೆದ್ದು 2 ಪಂದ್ಯಗಳನ್ನು ಸೋತಿದೆ. ಗುಜರಾತ್‌ನದ್ದು ಡೆಲ್ಲಿಗೆ ತದ್ವಿರುದ್ಧ ಸಾಧನೆ. 7 ಪಂದ್ಯಗಳಲ್ಲಿ ಗೆದ್ದದ್ದು ಎರಡನ್ನು ಮಾತ್ರ. ಉಳಿದ ಐದನ್ನು ಸೋತಿದೆ.

ಶುಕ್ರವಾರ ಎಲಿಮಿನೇಟರ್‌ ಪಂದ್ಯ, ರವಿವಾರ ಫೈನಲ್‌ ಪಂದ್ಯ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next