ಅಬುಧಾಬಿ: ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ಸೋಲನುಭವಿಸಿದೆ. ಈ ಮೂಲಕ ವಾರ್ನರ್ ಪಡೆಗೆ ಮತ್ತೊಂದು ಫೈನಲ್ ತಲುಪುವ ಆಸೆ ಕಮರಿದೆ. ಹೈದರಾಬಾದ್ ಸೋಲಿನೊಂದಿಗೆ ಕೆಲ ದಿನಗಳಿಂದ ಇಂಟರ್ನೆಟ್ ನಲ್ಲಿ ಸೆನ್ಸೇಶನ್ ಹುಟ್ಟುಹಾಕಿದ್ದ ಯುವಕ ‘ಮಿತುಲ್’ ಗೂ ಸೋಲಾಗಿತ್ತು.
ಯಾರು ಈ ಮಿತುಲ್?
ಈತ ಅಹಮದಾಬಾದ್ ನ 26 ವರ್ಷದ ಯುವಕ. ಕ್ರಿಕೆಟ್ ಅಭಿಮಾನಿಯಾಗಿರುವ ಈತ ಕ್ರಿಕೆಟ್ ಪಂದ್ಯಗಳ ತನ್ನ ಊಹೆಗಳನ್ನು ಟ್ವಿಟ್ಟರ್ ನಲ್ಲಿ ಬರೆದುಕೊಳ್ಳುವ ಹವ್ಯಾಸ ಹೊಂದಿರುವಾತ. ಕೆಲ ದಿನಗಳ ಹಿಂದೆ ಈತ ಬಹುತೇಕರಿಗೆ ಪರಿಚಯವಿರಲಿಲ್ಲ. ಆದರೆ ಮಿತುಲ್ ಮಾಡಿದ ಒಂದು ಟ್ವೀಟ್ ವೈರಲ್ ಆಗಿತ್ತು. ಇದರಿಂದ ಸದ್ಯ ಈತನಿಗೆ ಟ್ವೀಟರ್ ನಲ್ಲಿ 20 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.
ಇದನ್ನೂ ಓದಿ:ಆಸ್ಟ್ರೇಲಿಯ ಪ್ರವಾಸ: ಸಂಜಯ್ ಮಾಂಜ್ರೇಕರ್ ಮತ್ತೆ ಕಮೆಂಟೇಟರ್?
ಏನದು ಟ್ವೀಟ್?
ಕಳೆದ ಜುಲೈ 27ರಂದು ಈ ಬಾರಿಯ ಐಪಿಎಲ್ ನ ಫಲಿತಾಂಶದ ಬಗ್ಗೆ ಒಂದು ಟ್ವೀಟ್ ಮಾಡಿದ್ದರು. ಅದೇನೆಂದರೆ ವಿರಾಟ್ ಕೊಹ್ಲಿ ಪ್ರದರ್ಶನ ಸಾಧಾರಣವಾಗಿರುತ್ತದೆ, ಚೆನ್ನೈ ಪ್ಲೇಆಫ್ ತಲುಪಲ್ಲ, ರಾಜಸ್ಥಾನ್ ಅಂಕಪಟ್ಟಿಯ ಕೊನೆಯಲ್ಲಿರುತ್ತದೆ, ಪಂಜಾಬ್ ಪ್ಲೇಆಫ್ ತಲುಪಲ್ಲ, ಆರ್ ಸಿಬಿ ಯು ಮುಂಬಯಿ ಮತ್ತು ಡೆಲ್ಲಿಯೊಂದಿಗೆ ಪ್ಲೇಆಫ್ ತಲುಪುತ್ತದೆ, ಮತ್ತು ಹೈದರಾಬಾದ್ ತಂಡ ಕಪ್ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದ.
ಮಿತುಲ್ ಭವಿಷ್ಯವಾಣಿ ಬಹುತೇಕ ನಿಜವಾಗುತ್ತಿದ್ದಂತೆ ಆತನ ಪೋಸ್ಟ್ ವೈರಲ್ ಆಗಿತ್ತು. ಬಹಳಷ್ಟು ಮಂದಿ ಪಂದ್ಯಕ್ಕೂ ಮೊದಲು ಆತನಿಗೆ ಟ್ವೀಟ್ ಮಾಡಿ ಪಂದ್ಯದ ಫಲಿತಾಂಶ ಕೇಳುತ್ತಿದ್ದರು. ಆದರೆ ಇದೀಗ ಆತನ ಒಂದು ಊಹೆ ತಪ್ಪಾಗಿದೆ.
ಸನ್ ರೈಸರ್ಸ್ ಹೈದರಾಬಾದ್ ತಂಡ ಕಪ್ ಗೆಲ್ಲಲಿದೆ ಎಂದು ಮಿತುಲ್ ಹೇಳಿದ್ದ. ಆದರೆ ಹೈದರಾಬಾದ್ ತಂಡ ಸೋತು ಫೈನಲ್ ರೇಸ್ ನಿಂದ ಹೊರಬಿದ್ದಿದೆ. ಫೈನಲ್ ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ.