ಕನ್ನಡದಲ್ಲಿ ಈಗ ಹೊಸ ಬಗೆಯ ಕಥೆಗಳೊಂದಿಗೆ ಚಿತ್ರಗಳು ಸೆಟ್ಟೇರುತ್ತಿವೆ. ಅದರಲ್ಲೂ ಕಂಟೆಂಟ್ ಸಿನಿಮಾಗಳದ್ದೇ ಕಾರುಬಾರು. ಆ ಸಾಲಿಗೆ ಈಗ “ಬೀದಿ ದೀಪ’ ಎಂಬ ಸಿನಿಮಾ ಕೂಡ ಸೇರಿದೆ. ಹೌದು, “ಬೀದಿ ದೀಪ’ ಚಿತ್ರ ಈಗಾಗಲೇ ಸದ್ದಿಲ್ಲದೆಯೇ ಶೇ.80 ರಷ್ಟು ಚಿತ್ರೀಕರಣಗೊಂಡಿದೆ. ಈ ಚಿತ್ರದ ಪ್ರಮು ಪಾತ್ರದಲ್ಲಿ ಹಾಸ್ಯ ನಟ ಮಿತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ “ದೂದ್ ಸಾಗರ್’ ಚಿತ್ರ ನಿರ್ದೇಶಿಸಿದ್ದ ಸ್ಯಾಮ್ಯುಯಲ್ ಟೋನಿ.
“ನೀವು ಕರೆ ಮಾಡಿದ ಚಂದದಾರರು’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಆ ಗ್ಯಾಪ್‌ನಲ್ಲೇ “ಬೀದಿ ದೀಪ’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ತಮ್ಮ “ಬೀದಿ ದೀಪ’ ಕುರಿತು ಹೇಳುವ ಸ್ಯಾಮ್ಯುಯಲ್ ಟೋನಿ, “ಇದೊಂದು ಬೀದಿ ದೀಪದ ಕೆಳಗೆ ನಡೆಯುವ ಕಥೆ. ಬೀದಿ ದೀಪ ಪಬ್ಲಿಕ್ ಪ್ರಾಪರ್ಟಿ. ರಾತ್ರಿ ಬೆಳಕಲ್ಲಿ ಅದೆಷ್ಟೋ ಮಹಾನ್ ವ್ಯಕ್ತಿಗಳು ಓದಿ, ಪ್ರಸಿದ್ಧರಾಗಿರುವ ಉದಾಹರಣೆಗಳಿವೆ.
ಬೀದಿ ದೀಪಕ್ಕೆ ಯಾವುದೇ ಜಾತಿ, ಧರ್ಮದ ಬೇಧವಿಲ್ಲ. ಆ ದೀಪದಡಿ ಎಲ್ಲಾ ವರ್ಗದ ಜನರೂ ನಿಲ್ಲುತ್ತಾರೆ, ಆಶ್ರಯ ಪಡೆಯುತ್ತಾರೆ. ಹಾಗೆಯೇ, ನಮ್ಮ “ಬೀದಿ ದೀಪ’ದ ಕೆಳಗೆ ನಿಲ್ಲುವ ಒಂದಷ್ಟು ಜನರ ಕಥೆ ಮತ್ತು ವ್ಯಥೆ ಚಿತ್ರದ ಹೈಲೈಟ್’ ಎಂದು ವಿವರಿಸುತ್ತಾರೆ ಸ್ಯಾಮ್ಯುಯಲ್ ಟೋನಿ. “ಬೀದಿ ದೀಪ’ದ ಕೆಳಗೆ ಒಂದು ಸಣ್ಣ ಘಟನೆ ನಡೆಯುತ್ತೆ. ಅಲ್ಲಿಂದ ಸಸ್ಪೆನ್ಸ್ ಥ್ರಿಲ್ಲರ್‌ನಲ್ಲೇ ಕಥೆ ಸಾಗುತ್ತೆ. ಮುಂದೆ ಏನಾಗುತ್ತೆ ಎಂಬುದು ಕಥೆ.
ಒಟ್ಟಾರೆ, ಬೀದಿ ದೀಪದ ಕೆಳಗಿರುವವರ ಬದುಕು ಅನಾವರಣಗೊಳಿಸುವ ಕಥೆ ಹೊಂದಿದೆ ಎಂದು ಹೇಳುವ ನಿರ್ದೇಶಕರು, ಚಿತ್ರದಲ್ಲಿ ಮಿತ್ರ ಅವರು ಹೈಲೆಟ್. ಇಡೀ ಕಥೆ ಅವರ ಸುತ್ತ ಸಾಗುತ್ತೆ. ಅವರಿಲ್ಲಿ ಲೋಕಲ್ ಲಾಡ್ಜ್ವೊಂದರ ಮಾಲೀಕರಾಗಿ ಕಾಣಿಸಿಕೊಂಡಿದ್ದಾರೆ. ಹಿಂದೆಂದೂ ಮಾಡದ ಪಾತ್ರವದು, ಅವರ ಪಾತ್ರದ ಗೆಟಪ್, ಭಾಷೆ ಎಲ್ಲವೂ ವಿಭಿನ್ನವಾಗಿರಲಿದೆ. ಅವರ ಲಾಡ್ಜ್ನಲ್ಲೊಂದು ಸಣ್ಣ ಘಟನೆ ನಡೆಯುತ್ತೆ. ಅದೇ ಚಿತ್ರದ ತಿರುವಿಗೆ ಕಾರಣವಾಗುತ್ತೆ. ಸದ್ಯಕ್ಕೆ ಶೇ.80 ರಷ್ಟು ಚಿತ್ರೀಕರಣ ನಡೆದಿದೆ.
ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸಿದ್ದು, ಬಹುತೇಕ ರಾತ್ರಿಯಲ್ಲೇ ಚಿತ್ರಿಸಲಾಗಿದೆ. ಚಿತ್ರದಲ್ಲಿ ರಾಮ್‌ಚೇತನ್ ಎಂಬ ಹೊಸ ಪ್ರತಿಭೆ, ಪೂಜಾ ಇತರರು ಇದ್ದಾರೆ. ಇನ್ನೊಂದು ವಿಶೇಷವೆಂದರೆ, ಚಿತ್ರದಲ್ಲಿ ನಟಿಯೊಬ್ಬರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು, ಅವರು ಯಾರೆಂಬುದು ಸಸ್ಪೆನ್ಸ್. ಆ ಪಾತ್ರ ಕೂಡ ಚಿತ್ರದ ಇನ್ನೊಂದು ಹೈಲೈಟ್’ ಎಂಬುದು ಸ್ಯಾಮ್ಯುಯಲ್ ಮಾತು. ಅಂದಹಾಗೆ, ವಾನರ ಸಿನಿ ವರ್ಲ್ಡ್ ಬ್ಯಾನರ್ ಮೂಲಕ ಈ ಚಿತ್ರ ನಿರ್ಮಾಣವಾಗುತ್ತಿದೆ. ನಾಗೇಶ್ ಆಚಾರ್ಯ ಛಾಯಾಗ್ರಹಣವಿದೆ. ಗೌತಮ್ ಶ್ರೀವತ್ಸ ಅವರ ಸಂಗೀತವಿದೆ.