ನಟ ಮಿತ್ರ ಇದೀಗ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. “ರಾಗ’, “ಪರಸಂಗ’ ಚಿತ್ರಗಳಲ್ಲಿ ಕಥಾ ನಾಯಕನಾಗಿ ಗಮನಸೆಳೆದಿದ್ದ ಅವರು, ಕಥಾ ನಾಯಕನ ಪಾತ್ರಗಳಿಗೆ ಅಂಟಿಕೊಳ್ಳದೆ, ತಮ್ಮನ್ನು ಹುಡುಕಿ ಬಂದ ಒಂದಷ್ಟು ಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ಮಾಡುತ್ತಲೇ ಈಗ ಹೊಸ ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ಹೌದು, ಅವರ ಹೊಸ ಚಿತ್ರಕ್ಕೆ “ಮಿತ್ರಾವತಾರ’ ಎಂದು ಹೆಸರಿಡಲಾಗಿದೆ.
ಪ್ರವೀಣ್ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಕಥೆ, ಚಿತ್ರಕಥೆ ಜವಾಬ್ದಾರಿ ಜೊತೆಗೆ ಗೆಳೆಯರೊಂದಿಗೆ ಸೇರಿ ನಿರ್ಮಾಣವನ್ನೂ ಪ್ರವೀಣ್ ಮಾಡುತ್ತಿದ್ದಾರೆ. ಮಿತ್ರ ಅವರಿಗೆ ನಾಯಕಿಯಾಗಿ ಪ್ರಿಯಾಂಕ ಎಂ.ಜೈನ್ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದ “ಗೋಲಿಸೋಡ’ ಚಿತ್ರದಲ್ಲಿ ನಟಿಸಿದ್ದ ಪ್ರಿಯಾಂಕಗೆ ಇದು ಎರಡನೇ ಚಿತ್ರ.
“ಮಿತ್ರಾವತಾರ’ ಬಗ್ಗೆ ಹೇಳಿಕೊಳ್ಳುವ ನಿರ್ದೇಶಕ ಪ್ರವೀಣ್, “ಶೀರ್ಷಿಕೆಯೇ ಹೇಳುವಂತೆ, ಇದೊಂದು ಹಾಸ್ಯಪ್ರಧಾನ ಚಿತ್ರವಾದರೂ ಇಲ್ಲಿ ಪ್ರೀತಿ, ಜೊತೆಗೆ ಭಾವುಕತೆ ಮೂಡಿಸುವ ಅಂಶಗಳೂ ಇವೆ. ನಗಿಸುತ್ತಲೇ ಸಣ್ಣದ್ದೊಂದು ಸಂದೇಶ ಕೊಡುವುದರ ಮೂಲಕ ಇಡೀ ಸಿನಿಮಾ ಹೊಸ ಆಲೋಚನೆಗಳೊಂದಿಗೆ ಸಾಗುತ್ತದೆ’ ಎನ್ನುವುದು ಪ್ರವೀಣ್ ಮಾತು. ಚಿತ್ರದಲ್ಲಿ ಮಿತ್ರ ಅವರು ಮಿತ್ರ ಎಂಬ ಪಾತ್ರದಲ್ಲೇ ನಟಿಸುತ್ತಿದ್ದಾರೆ.
ಇಲ್ಲಿ ಅವರು ವೇಷಭೂಷಣಗಳಿಂದ ಅವತಾರಗಳನ್ನು ತಾಳುವುದಿಲ್ಲ. ಬದಲಾಗಿ, ಅವರ ಜೊತೆಗಿರುವ, ಎದುರು ಸಿಗುವ ವ್ಯಕ್ತಿಗಳಿಗೆ ಒಂದೊಂದು ರೀತಿಯ ವ್ಯಕ್ತಿತ್ವದ ಮೂಲಕ ಕಾಣಿಸಿಕೊಳ್ಳಲಿದ್ದಾರೆ. ಹಾಗಾಗಿ, ಇಲ್ಲಿ “ಮಿತ್ರಾವತಾರ’ ಎಂಬ ಹೆಸರಿಟ್ಟಿದ್ದನ್ನು ಸ್ಪಷ್ಟಪಡಿಸುವ ನಿರ್ದೇಶಕರು, ನಾಯಕಿ ಪ್ರಿಯಾಂಕ ಇಲ್ಲಿ ಮಧ್ಯಮ ವರ್ಗದ ಹುಡುಗಿಯಾಗಿ, ಚಿಕ್ಕವಯಸ್ಸಲ್ಲೇ ಹೆಚ್ಚು ತಿಳಿದುಕೊಂಡಿರುವ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂಬುದು ನಿರ್ದೇಶಕರ ಮಾತು.
ಚಿತ್ರದಲ್ಲಿ ಮಿತ್ರ ಮತ್ತು ಪ್ರಿಯಾಂಕ ಎಂ.ಜೈನ್ ಅವರೊಂದಿಗೆ ಸಾಧುಕೋಕಿಲ, ತಬಲಾನಾಣಿ, ಬಿರಾದಾರ್ ಸೇರಿದಂತೆ ರಂಗಭೂಮಿಯ ಅನೇಕ ಪ್ರತಿಭಾವಂತರು ನಟಿಸುತ್ತಿದ್ದಾರೆ. ಕಾರ್ತಿಕ್ ವೆಂಕಟೇಶ್ ಐದು ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ರವಿ ಸುವರ್ಣ ಅವರ ಛಾಯಾಗ್ರಹಣವಿದೆ. ಬಹುತೇಕ ಬೆಂಗಳೂರು ಸುತ್ತಮುತ್ತ ಸುಮಾರು 30 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.