Advertisement

ಹೊಸ ಲುಕ್‍ನಲ್ಲಿ ಮಿತ್ರ

10:00 AM Nov 20, 2019 | Lakshmi GovindaRaj |

ನಟ ಮಿತ್ರ “ರಾಗ’ ನಂತರ ಸಾಕಷ್ಟು ಸಿನಿಮಾಗಳನ್ನು ಒಪ್ಪಿಕೊಳ್ಳುವುದರ ಜೊತೆಯಲ್ಲಿ ಪೋಷಕ ಪಾತ್ರಗಳಲ್ಲೂ ಕಾಣಿಸಿಕೊಂಡರು. ಅದರ ಜೊತೆ ಜೊತೆಯಲ್ಲೇ, ತಮಗೆ ಸರಿಹೊಂದುವ ಕಥೆಗಳನ್ನು ಒಪ್ಪುವ ಮೂಲಕ ಚಿತ್ರಗಳಲ್ಲೂ ಪ್ರಮುಖ ಪಾತ್ರ ನಿರ್ವಹಿಸಲು ಮುಂದಾದರು. ಕೈಯಲ್ಲಿ ಮೂರು ಚಿತ್ರಗಳು ಇರುವಾಗಲೇ ಅವರೀಗ ಮತ್ತೂಂದು ವಿಭಿನ್ನ ಕಥಾಹಂದರವಿರುವ ಚಿತ್ರ ಒಪ್ಪಿದ್ದಾರೆ. ಆ ಚಿತ್ರಕ್ಕೆ “ಕಥೆ ಬರೆದವ ನಾನಲ್ಲ’ ಎಂದು ಹೆಸರಿಡಲಾಗಿದೆ.

Advertisement

ಶೀರ್ಷಿಕೆಯಲ್ಲೇ ವಿಶೇಷ ಅರ್ಥವಿದೆ ಅಂದಮೇಲೆ, ಕಥೆ ಮತ್ತು ಪಾತ್ರದಲ್ಲೂ ಅಂಥದ್ದೇ ಗಟ್ಟಿ ಅಂಶಗಳು ಅಡಕವಾಗಿವೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ಚಿತ್ರಕ್ಕೆ ನಮ್‌ ಋಷಿ ನಿರ್ದೇಶಕರು. ಕಥೆ,ಚಿತ್ರಕಥೆ, ಸಂಭಾಷಣೆ ಜವಾಬ್ದಾರಿಯೂ ಅವರದೇ. ಡಿ.ಪಿ.ವೆಂಕಟೇಶ್‌ ಈ ಚಿತ್ರದ ನಿರ್ಮಾಪಕರು. ಈ ಹಿಂದೆ ಮಿತ್ರ ಅವರ “ರಾಗ’ ಮತ್ತು “ಪರಸಂಗ’ ಚಿತ್ರಗಳನ್ನು ನೋಡಿ ಇಷ್ಟಪಟ್ಟು, ಈಗ ಮಿತ್ರ ಅವರಿಗೊಂದು ಸಿನಿಮಾ ಮಾಡುವ ಸಲುವಾಗಿಯೇ “ಕಥೆ ಬರೆದವ ನಾನಲ್ಲ’ ಸ್ಟೋರಿ ಆಯ್ಕೆ ಮಾಡಿಕೊಂಡಿದ್ದಾರೆ ಎಂಬುದು ಚಿತ್ರತಂಡದ ಮಾತು.

ಚಿತ್ರದಲ್ಲಿ ಕಥೆ ಎಷ್ಟು ವಿಭಿನ್ನವಾಗಿದೆಯೋ, ಮಿತ್ರ ಅವರ ಪಾತ್ರವೂ ಅಷ್ಟೇ ವಿಶೇಷವಾಗಿರಲಿದೆ ಎಂಬುದು ನಿರ್ದೇಶಕರ ಮಾತು. ಸದ್ಯಕ್ಕೆ ಮಿತ್ರ ಸಿನಿಮಾದ ಹೈಲೈಟ್‌ ಆಗಿದ್ದು, ಉಳಿದ ತಾರಾಗಣದ ಆಯ್ಕೆ ಇನ್ನಷ್ಟೇ ನಡೆಯುತ್ತಿದೆ. ಕಥೆ ಕುರಿತು ಹೇಳುವ ನಿರ್ದೇಶಕರು, “ಸಾವಿನ ಮನೆಯಲ್ಲಿ ಹಾಡು ಹೇಳುವ, ತತ್ವ ಪದ ಹಾಡುವ, ಭಜನೆ ಮಾಡುವ ವ್ಯಕ್ತಿಯೊಬ್ಬನ ಕಥೆ ಹೇಳಲು ಹೊರಟಿದ್ದೇನೆ. ಜಗತ್ತಿನಲ್ಲಿ ಎಲ್ಲವನ್ನೂ ಅರಿತಂತಹ ಒಬ್ಬ ಸ್ವಾಭಿಮಾನಿ, ದ್ವೇಷದಿಂದ ಏನೂ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಮನಗಂಡು, ತನ್ನಷ್ಟಕ್ಕೆ ತಾನು ಮೌಲ್ಯಗಳನ್ನು ರೂಪಿಸಿಕೊಳ್ಳಲು ಹೊರಡುವ ವ್ಯಕ್ತಿ ಕುರಿತ ಚಿತ್ರಣ ಇಲ್ಲಿದೆ.

ದುಃಖವಿರಲಿ, ಸಂಭ್ರಮವೇ ಇರಲಿ ಅಲ್ಲಿ ಆಶುಕವಿಯ ಹಾಗೆ ಪದಗಳನ್ನು ಹಾಡುವ ಮೂಲಕ ಎಲ್ಲರ ಭಾವನೆಗಳಿಗೆ ಸ್ಪಂದಿಸುವಂತಹ ಪಾತ್ರ ಮಿತ್ರ ಅವರದ್ದು. ಅವರಿಲ್ಲಿ 50 ಪ್ಲಸ್‌ ವಯಸ್ಸಿನ ಪಾತ್ರ ನಿರ್ವಹಿಸುತ್ತಿದ್ದಾರೆ. ಇದೊಂದು ಅಪ್ಪ, ಮಗಳ ಭಾವುಕ ಪಯಣ ಹೊಂದಿದೆ. ಚಿತ್ರದಲ್ಲಿ ಆರು ಹಾಡುಗಳು ಇರಲಿದ್ದು, ಇದೊಂದು ಸಂಗೀತ ಪ್ರಧಾನ ಸಿನಿಮಾ ಆಗಲಿದೆ’ ಎಂಬ ವಿವರ ಕೊಡುತ್ತಾರೆ ನಿರ್ದೇಶಕರು. ಚಿತ್ರಕ್ಕೆ ಶ್ರೀಗುರು ಸಂಗೀತವಿದ್ದು, ಶಂಕರ್‌ ಛಾಯಾಗ್ರಹಣವಿದೆ. ಕೆ.ಪಿ.ಕುಮಾರ್‌ ಸಂಕಲನ ಮಾಡಲಿದ್ದಾರೆ. ಸುಮಾರು 40 ದಿನಗಳ ಕಾಲ ಮಡಿಕೇರಿ ಮತ್ತು ಬೆಂಗಳೂರಲ್ಲಿ ಚಿತ್ರೀಕರಣ ನಡೆಸುವ ಯೋಚನೆ ಚಿತ್ರತಂಡಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next