ನಿರ್ದೇಶಕ ಮಂಜು ಸ್ವರಾಜ್, “ಪಟಾಕಿ’ ಬಳಿಕ ಯಾವ ಚಿತ್ರ ಕೈಗೆತ್ತಿಕೊಳ್ಳುತ್ತಾರೆ ಎಂಬ ಪ್ರಶ್ನೆ ಗಾಂಧಿನರದಲ್ಲೆಡೆ ಕೇಳಿಬರುತ್ತಿತ್ತು. ಅವರೀಗ ಹೊಸದೊಂದು ಸಿನಿಮಾ ಮಾಡೋಕೆ ಹೊರಟಿದ್ದಾರೆ. ಈ ಚಿತ್ರಕ್ಕೆ ಮಿತ್ರ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿಕೊಂಡಿರುವ ಮಂಜು, ಚಿತ್ರಕ್ಕೆ “ಸಣ್ಣಕ್ಕಿ ರಾಮೇಗೌಡ’ ಎಂದು ಹೆಸರಿಟ್ಟಿದ್ದಾರೆ.
ಶೀರ್ಷಿಕೆ ಕೇಳಿದರೆ, ಅದೊಂದು ವಿಭಿನ್ನ ಸಿನಿಮಾ ಅನಿಸೋದು ದಿಟ. ಅದರಲ್ಲೂ ಹಳ್ಳಿ ಕಥೆ ಅಂದುಕೊಳ್ಳುವುದು ಸಹಜ. ಆದರೆ, ನಿರ್ದೇಶಕ ಮಂಜು ಸ್ವರಾಜ್ ಹೇಳುವಂತೆ, ಶೇ.20 ರಷ್ಟು ಮಾತ್ರ ಹಳ್ಳಿಗಾಡಿನಲ್ಲಿ ಕಥೆ ಸಾಗಲಿದ್ದು, ಉಳಿದ ಶೇ.80 ರಷ್ಟು ಚಿತ್ರ ಸ್ವೀಡನ್ ಅಥವಾ ಆಸ್ಟ್ರೇಲಿಯಾದಲ್ಲಿ ಚಿತ್ರೀಕರಿಸುವ ಯೋಜನೆ ಹಾಕಿಕೊಂಡಿದ್ದಾರೆ ಮಂಜು ಸ್ವರಾಜ್.
ಇದೊಂದು ಹಾಸ್ಯ ಚಿತ್ರವಾ? ಎಂಬ ಪ್ರಶ್ನೆ ಬರಬಹುದು. “ಖಂಡಿತ ಅಲ್ಲ, ಹೊಸ ಪ್ರಯೋಗ ಎನ್ನಬಹುದು. ಎಲ್ಲರಿಗೂ ಮಿತ್ರ ಇದ್ದಾರೆ ಅಂದರೆ, ಅದೊಂದು ಹಾಸ್ಯ ಚಿತ್ರ ಇರಬಹುದಾ? ಎಂಬ ಪ್ರಶ್ನೆ ಬರುತ್ತೆ. ಇಲ್ಲಿ ಹಾಸ್ಯಕ್ಕೂ ಜಾಗವಿದೆ. ಆದರೆ, ಕಥೆ ಕನ್ನಡದ ಮಟ್ಟಿಗೆ ಬೇರೆ ರೀತಿ ಸಾಗಲಿದೆ. ಮಿತ್ರ ಹಾಗೂ ನನಗೆ ಈ ಸಿನಿಮಾ ಹೊಸ ಇಮೇಜ್ ಕೊಡುವಷ್ಟರ ಮಟ್ಟಿಗೆ ಮೂಡಿಬರುತ್ತೆ ಎಂಬ ನಂಬಿಕೆ ನನಗಿದೆ.
ಈಗ ಸ್ಕ್ರಿಪ್ಟ್ ಕೆಲಸ ಮುಗಿದಿದೆ. ಇನ್ನು ಸಾಕಷ್ಟು ಕೆಲಸಗಳು ಬಾಕಿ ಇದೆ. ಹೊಸಬಗೆಯ ಸಿನಿಮಾ ಆಗಿದ್ದರಿಂದ ಸಾಕಷ್ಟು ತಯಾರಿ ಮಾಡಿಕೊಳ್ಳಬೇಕಿದೆ. ಮಿತ್ರ ಅವರಿಗೆ ಸರಿಹೊಂದುವ ಕಥೆ, ಪಾತ್ರ ಇಲ್ಲಿದೆ. ಸದ್ಯಕ್ಕೆ “ಸಣ್ಣಕ್ಕಿ ರಾಮೇಗೌಡ’ ಬಗ್ಗೆ ಗಮನಕೊಟ್ಟಿದ್ದೇನೆ. ಯಾವಾಗ ಶುರುವಾಗಬಹುದು ಎಂಬುದಕ್ಕೆ ಇನ್ನು ಎರಡು ವಾರಗಳ ಕಾಲ ಸಮಯ ಬೇಕು’ ಎನ್ನುತ್ತಾರೆ ಮಂಜು ಸ್ವರಾಜ್.
ಇನ್ನು, ಮಿತ್ರ ಅವರು ಮತ್ತೂಂದು ಸಿನಿಮಾ ಒಪ್ಪಿದ್ದಾರೆ. “ರಾಗ’ ಬಳಿಕ ಮಾನಸಿಕವಾಗಿ ಕುಗ್ಗಿದ್ದ ಅವರಿಗೆ ಒಂದೊಂದೇ ಕಥೆಗಳು ಹುಡುಕಿ ಬರುತ್ತಿವೆ. “ಪರಸಂಗ’ ಸಿನಿಮಾ ಒಪ್ಪಿದ ಮೇಲೆ ನಾಲ್ಕೈದು ಕಥೆ ಕೇಳಿರುವ ಮಿತ್ರ, “45′ ಎಂಬ ಸಿನಿಮಾವನ್ನು ಒಪ್ಪಿದ್ದಾರೆ. ಆ ಚಿತ್ರಕ್ಕೆ ಚಂದ್ರಶೇಖರ್ ನಿರ್ದೇಶಕರು. ಅವರು ಮಂಜು ಸ್ವರಾಜ್ ಅವರ ಜತೆ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದರು. ಅವರಿಗೆ “45′ ಮೊದಲ ಸಿನಿಮಾ.
ಶೀರ್ಷಿಕೆಯೇ ಹೇಳುವಂತೆ, ಅದೊಂದು ಯೌವ್ವನ ಕುರಿತಾದ ಸಿನಿಮಾ. 45 ವರ್ಷ ವಯಸ್ಸಿನ ವ್ಯಕ್ತಿಯ ಕುರಿತಾದ ಕಥೆ ಇಲ್ಲಿದೆಯಂತೆ. ಮಿತ್ರ ಅವರ ಮ್ಯಾನರಿಸಂಗೆ ತಕ್ಕದಾದ ಕಥೆ ಆಗಿರುವುದರಿಂದ ಚಂದ್ರಶೇಖರ್, ಹೊಸ ಜಾನರ್‌ನಲ್ಲಿ ಸಿನಿಮಾ ಮಾಡುವ ಯೋಚನೆ ಮಾಡಿದ್ದಾರೆ. ಹಾಗಾದರೆ, ಈ ಎರಡು ಚಿತ್ರಗಳಲ್ಲಿ ಯಾವುದು ಮೊದಲು? ಸದ್ಯಕ್ಕೆ “45′ ಬೇಗ ಶುರುವಾಗಬಹುದು. ಅದಾದ ಬಳಿಕ “ಸಣ್ಣಕ್ಕಿ ರಾಮೇಗೌಡ’ ಸೆಟ್ಟೇರುವ ಸಾಧ್ಯತೆ ಇದೆ.