Advertisement
ನಾನು ಆ್ಯಂಕರಿಂಗ್ ಮಾಡುತ್ತಾ ಕುಳಿತಿದ್ದೆ. ಕಣ್ಣೆದುರಿಗೆ ಮಹಿಳಾ ಕ್ರಿಕೆಟ್‌ನ ಸ್ಕೋರ್‌ಕಾರ್ಡ್ ಎದುರಾಯಿತು. ಅದನ್ನು ನೋಡಿದ್ದೇ ನನ್ನ ಬಾಯಿಂದ ಆಂಗ್ಲ ಪದವೊಂದು ಹೊರಬಿತ್ತು. ಕೂಡಲೇ ಆ ಪದವನ್ನು ಸರಿಯಾಗಿ ಬಳಸಿದ್ದೇನಾ ಎನ್ನುವ ಸಂಶಯವೂ ಆರಂಭವಾಯಿತು…
Related Articles
Advertisement
ನನ್ನ ಪಾಲಿಗಂತೂ ಈ ಬಾರಿಯ ಟೂರ್ನಮೆಂಟ್ ಅಧಿಕೃತವಾಗಿ ಆರಂಭವಾಗಿದ್ದು ಮಿಥಾಲಿ ರಾಜ್ ಅವರ ಹೇಳಿಕೆಯೊಂದಿಗೆ. ಒಂದೇ ಒಂದು ಹೇಳಿಕೆಯ ಮೂಲಕ ಮಿಥಾಲಿ ನಮ್ಮ ಯೋಚನಾ ಕ್ರಮಕ್ಕೆ ಎಷ್ಟು ದೊಡ್ಡ ಪೆಟ್ಟುಕೊಟ್ಟರೆಂದರೆ, ಎಲ್ಲರೂ ಸ್ತಂಭಿತರಾಗುವಂತಾಯಿತು. ರಿಪೋರ್ಟರ್ ಒಬ್ಬರು ಮಿಥಾಲಿ ರಾಜ್‌ಗೆ “”ನಿಮ್ಮ ಫೇವರೆಟ್ ಪುರುಷ ಕ್ರಿಕೆಟರ್ ಯಾರು?” ಎಂಬ ಪ್ರಶ್ನೆ ಎದುರಿಟ್ಟರು. ಆಗ ಮಿಥಾಲಿ “”ನೀವು ಪುರುಷ ಕ್ರಿಕೆಟರ್‌ಗಳಿಗೆ ಇಂಥದ್ದೇ ಪ್ರಶ್ನೆ ಕೇಳುತ್ತೀರಾ?” ಎಂದು ತಟಕ್ಕನೆ ಮರುಪ್ರಶ್ನೆ ಹಾಕಿದರು. ಈ ಸರಳ ಪ್ರಶ್ನೆ ಬಹಳಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.
ನಮ್ಮೆಲ್ಲರೊಳಗಿನ ಪುರುಷವಾದಿ ಯೋಚನೆಗೆ ಅದು ಕನ್ನಡಿ ತೋರಿಸಿದೆ. ಮಹಿಳಾ ಕ್ರೀಡಾಪಟುಗಳನ್ನು ಮಾತನಾಡಿಸುವಾಗಲೆಲ್ಲ ವರದಿಗಾರರಿಗೆ ಇದೊಂದು ಅಭ್ಯಾಸವಾಗಿಬಿಟ್ಟಿದೆ. ಆ ಆಟಗಾರರು ನಾಚಿಕೊಂಡು ತಮಗೆ “ಇಂತಿಪ್ಪ ಪುರುಷ ಆಟಗಾರ ಅಥವಾ ಫಿಲಂ ಸ್ಟಾರ್ ಬಹಳ ಇಷ್ಟ’ ಎಂದು ಹೇಳಬೇಕು! ಹಾಗೆ ಹೇಳಿದ ತಕ್ಷಣ “ಈ ಆಟಗಾರ್ತಿಗೆ ಆ ಆಟಗಾರನ ಮೇಲೆ ಮನಸ್ಸು’ ಎಂದು ಹೆಡ್‌ಲೈನ್ ಮಾಡಬಹುದಲ್ಲ!
ಮಿಥಾಲಿ ರಾಜ್ ಬಗ್ಗೆ ಬಂದ ಈ ಸುದ್ದಿಯ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಲು ನಾನು ಗೂಗಲ್‌ನಲ್ಲಿ ಅವರ ಹೆಸರು ಬರೆದೆ. ಆಗ ಟ್ರೆಂಡ್ ಆಗುತ್ತಿದ್ದ ಮೊದಲ ಸರ್ಚ್ ರಿಸಲ್ಟ್ ಏನು ಗೊತ್ತೇ? “”ಮಿಥಾಲಿ ರಾಜ್ ಪತಿ ಯಾರು?”. ಅಂದರೆ ಮಿಥಾಲಿ ರಾಜ್‌ರ ಪತಿಯ ಬಗ್ಗೆಯೂ ಜನರು ಹೆಚ್ಚು ಸರ್ಚ್ ಮಾಡಿದ್ದಾರೆ ಎಂದಾಯಿತು. ಈ ರೀತಿ ಬಹಳ ಬಾರಿ ಆಗುತ್ತಿರುತ್ತದೆ. ಒಬ್ಬ ಮಹಿಳೆಯ ಗುರುತನ್ನು ಪುರುಷಾಕೃತಿಯೊಂದಕ್ಕೆ ಜೋಡಿಸಿಯೇ ನೋಡುವ ಗುಣ ನಮ್ಮಲ್ಲಿದೆ. ಕನಿಷ್ಠಪಕ್ಷ ಸುಪ್ತಮನಸ್ಸಿನಲ್ಲಾದರೂ ಇರುವ ಈ ಗುಣ ನಮ್ಮ ಯೋಚನೆಯ ಮೇಲೆ ಪರಿಣಾಮ ಬೀರುತ್ತಿದೆ. ಈ ಸರ್ಚ್ ನೋಡಿ ನನಗೆ ಆಶ್ಚರ್ಯವೇನೂ ಆಗಲಿಲ್ಲ. ಸಾನಿಯಾ ಮಿರ್ಜಾರ ವಿಚಾರದಲ್ಲೂ ನಾವು ಈ ಸಂಗತಿಯನ್ನು ಗಮನಿಸಿದ್ದೇವೆ. ಸಾನಿಯಾ ಮಿರ್ಜಾ ವಿಷಯ ಬಂದಾಗಲೆಲ್ಲ ಅವರ ಪತಿಯ ಹೆಸರೂ ತೂರಿಕೊಂಡು ಬರುತ್ತದೆ. ಹಾಗೆ ನೋಡಿದರೆ ನನಗೆ ಕ್ರಿಕೆಟ್‌ನಲ್ಲಿ ಅಷ್ಟೇನು ಜ್ಞಾನವಿಲ್ಲ. ಆದರೆ ಒಂದಂತೂ ತಿಳಿದಿದೆ. ಸಾನಿಯಾ ಮಿರ್ಜಾರ ಹೆಸರು ಬಂದಾಗಲೆಲ್ಲ ಚರ್ಚೆಯಾಗುವಷ್ಟು ದೊಡ್ಡ ಕ್ರಿಕೆಟರ್ ಏನೂ ಅಲ್ಲ ಈ ಶೋಯೆಬ್ ಮಲಿಕ್. ಒಟ್ಟಲ್ಲಿ ಸಾನಿಯಾ ಎಂದಾಕ್ಷಣ ಶೋಯೆಬ್ ಮಲಿಕ್ ಹೆಸರು ಇಣುಕುವುದರ ಹಿಂದೆ ಭಾರತ-ಪಾಕಿಸ್ತಾನದ ಆಯಾಮ ಕಡಿಮೆಯಿದೆ, ಪುರುಷವಾದಿ ಯೋಚನೆಯೇ ಅಧಿಕವಿದೆ ಎಂದೆನಿಸುತ್ತದೆ.
ಮಿಥಾಲಿ ರಾಜ್‌ರನ್ನು ಹೊಗಳುವಾಗ ಅವರನ್ನು “ಲೇಡಿ ವಿರಾಟ್’ ಎನ್ನಲಾಗುತ್ತಿರುವುದು ಈ ಮನಸ್ಥಿತಿಗೆ ಇನ್ನೊಂದು ಉದಾಹರಣೆ, ಹಾಗೆಂದು ಈ ಲೇಖನ ಬರೆಯುತ್ತಿದ್ದೇನೆ ಎಂದಾಕ್ಷಣ ನಾನು ಈ ಮನಸ್ಥಿತಿಯಿಂದ ಮುಕ್ತನಾಗಿದ್ದೇನೆ ಎಂದೇನೂ ಅರ್ಥವಲ್ಲ. ಹೌದು ಒಪ್ಪಿಕೊಳ್ಳುತ್ತೇನೆ. ಸೂಕ್ಷ್ಮವಾಗಿ ನಮ್ಮೆಲ್ಲರಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಈ ಪುರುಷವಾದಿ ಮನಸ್ಥಿತಿ ಅಡಗಿ ಕುಳಿತಿದೆ. ಏಕೆಂದರೆ ಮಿಥಾಲಿ ರಾಜ್ ವರದಿಗಾರರಿಗೆ ಕೊಟ್ಟ ಉತ್ತರವನ್ನು ಹೊಗಳುವುದಕ್ಕೂ ಮುನ್ನ ನಾನೂ ಕೂಡ ಆಶ್ಚರ್ಯಚಕಿತನಾಗಿದ್ದೆ. ನನ್ನಂಥ ಅನೇಕರಿಗೆ ಮಿಥಾಲಿ ಉತ್ತರ ಪೆಟ್ಟು ಕೊಟ್ಟು ಎಚ್ಚರಿಸಿದೆ. ಮಿಥಾಲಿ ಆ ರಿಪೋರ್ಟರ್‌ಗೆ ಮರುಪ್ರಶ್ನೆ ಹಾಕದಿದ್ದರೆ, ನಾವು ಆತ್ಮವಿಮರ್ಶೆ ಮಾಡಿಕೊಳ್ಳುತ್ತಿದ್ದೆವಾ? ಕಪಿಲ್ ಶರ್ಮಾ ಶೋದಲ್ಲಿ ಫೋಗಟ್ ಸಹೋದರಿಯರು ಇಂಥದ್ದೇ ಸನ್ನಿವೇಶ ಎದುರಿಸಿದ್ದನ್ನು ನೋಡಿ ನಾನು ನಕ್ಕಿದ್ದೇನೆ. ವಿರಾಟ್ ಕೊಹ್ಲಿ ವೈಫಲ್ಯ ಅನುಭವಿಸಿದ್ದಾಗ ಅನುಷ್ಕಾ ಶರ್ಮಾ ಕುರಿತು ಬಂದ ಜೋಕುಗಳನ್ನು ಓದಿದ್ದೇನೆ. ದೇಶಕ್ಕಾಗಿ ಮೆಡಲ್ ಗಳಿಸಿದ ಮಹಿಳಾ ಸಾಧಕಿಯರ ಸಂಘರ್ಷದ ಕಥೆಗಳನ್ನು ಓದುವ ಬದಲಾಗಿ, ಅವರ ಫೇವರೆಟ್ ಬಾಲಿವುಡ್ ಹೀರೋ ಯಾರು ಎಂಬ ಸುದ್ದಿಗಳ ಮೇಲೆ ಕ್ಲಿಕ್ ಮಾಡಿದ್ದೇನೆ. ಹೀಗೆ ಮಾಡಿದವನು ನಾನೊಬ್ಬನೇ ಅಲ್ಲ ಎನ್ನುವುದು ನನಗೆ ಗೊತ್ತು. ನಾವೆಲ್ಲ ನಮ್ಮ ಯೋಚನೆಗಳನ್ನು ಬದಲಿಸಿಕೊಳ್ಳುವ ಕೆಲಸ ಆರಂಭಿಸಲೇಬೇಕಿದೆ. “”ಮಹಿಳಾ ತಂಡವೇನಾದರೂ ಗೆದ್ದರೆ ಅವರು ಸೌರವ್ ಗಂಗೂಲಿಯಂತೆ ಸೆಲೆಬ್ರೇಷನ್ ಮಾಡುತ್ತಾರಾ ಇಲ್ಲವಾ? (ಟೀ ಶರ್ಟ್‌ತೆಗೆದು)” ಎಂದು ರಿಷಿ ಕಪೂರ್ ಟ್ವೀಟ್ ಮಾಡಿದ್ದರಲ್ಲ, ಖಂಡಿತ ಈ ಆಲೋಚನೆ ಅಂಥದ್ದಂತೂ ಅಲ್ಲ. ಬದಲಾಗಿ ಸಾವಿರಾರು ವರ್ಷಗಳಿಂದ ಧೂಳು ತಿನ್ನುತ್ತಾ ಕುಳಿತಿರುವ ಯೋಚನೆಯಿದು. ಆ ಧೂಳನ್ನು ಜಾಡಿಸಿ ಸ್ವತ್ಛಗೊಳಿಸಬೇಕೋ ಬೇಡವೋ ಎಂಬ ಗೊಂದಲಮೂಡುತ್ತದಲ್ಲ ಅಂಥ ಯೋಚನೆಯಿದು. ಈ ಯೋಚನೆ ಬದಲಾಗಲೇಬೇಕು. ಏಕೆಂದರೆ ಭವಿಷ್ಯವೆನ್ನುವುದು “ಅರ್ಧಾಂಗಿಣಿ’, “ಬೆಟರ್‌ಹಾಫ್’ ಅಥವಾ “ದೇವಿ’ ಎನ್ನುವ ನಾಟಕೀಯ ಹೇಳಿಕೆಗಳಲ್ಲಿ ಇಲ್ಲ, ಬದಲಾಗಿ ಅದು ಸೃಷ್ಟಿಯಾಗಬೇಕಿರುವುದು ನಿಜವಾದ ಸಮಾನತೆಯ ಮೂಲಕ. ಸಮಾನತೆಯೆನ್ನುವುದು ಕೇವಲ ಮಹಿಳಾ ಕ್ರೀಡಾಪಟುಗಳಿಗಷ್ಟೇ ಅಲ್ಲದೇ, ಮನೆಯಲ್ಲಿರುವ, ಬೋರ್ಡ್ ಆಫ್ ಡೈರೆಕ್ಟರ್ಸ್‌ಗಳಲ್ಲಿರುವ, ಆಸ್ಪತ್ರೆಗಳಲ್ಲಿ ಮತ್ತು ರಾಜಕೀಯದಲ್ಲಿರುವ ಮಹಿಳೆಯರೆಲ್ಲರಿಗೂ ಸಿಗಬೇಕು. ಅಂದಹಾಗೆ, ಈ ಜಗತ್ತನ್ನು ಮುನ್ನಡೆಸುವ ಪ್ರಯತ್ನದಲ್ಲಿ ಪುರುಷರು ಅದನ್ನು(ಜಗತ್ತನ್ನು) ಎಷ್ಟು ಹಾಳು ಮಾಡಿಟ್ಟಿದ್ದಾರೆ ಎನ್ನುವುದನ್ನು ನಾವು ನೋಡುತ್ತಲೇ ಇದ್ದೇವೆ. ಹೀಗಾಗಿ, “ಸೋತರೂ ಹೃದಯಗೆದ್ದ ವನಿತೆಯರು’ ಎಂಬ ಪಂಚ್‌ಲೈನ್ ತನ್ನ ಕಾವು ಕಳೆದುಕೊಂಡ ಮೇಲೂ ನಾವು ಈ ವಿಷಯದ ಬಗ್ಗೆ ಯೋಚಿಸುತ್ತಲೇ ಇರಬೇಕು. ಹೊಸ ಶಬ್ದಾವಳಿಗಳನ್ನು ಹುಡಕುತ್ತಲೇ ಇರಬೇಕು. (ಲೇಖಕರು ಹಿಂದಿ ಸುದ್ದಿ ವಾಚಕರು)
ಕ್ರಾಂತಿ ಸಂಭವ್