ಮುಂಬೈ: ಪುರುಷ ಕ್ರಿಕೆಟರ್ ಗಳ ಗುತ್ತಿಗೆಯಂತೆ ವನಿತಾ ಆಟಗಾರರ ಗುತ್ತಿಗೆಯನ್ನೂ ಬಿಸಿಸಿಐ ಪ್ರಕಟಿಸಿದೆ. ಅಚ್ಚರಿಯೆಂಬಂತೆ ನಾಯಕಿ ಮಿಥಾಲಿ ರಾಜ್ ಹಿಂಭಡ್ತಿ ಪಡೆದಿದ್ದಾರೆ.
ಟಿ ಟ್ವೆಂಟಿ ನಾಯಕಿ ಹರ್ಮನ್ ಪ್ರೀತ್ ಕೌರ್, ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ ಮತ್ತು ಬೌಲರ್ ಪೂನಮ್ ಯಾದವ್ ಗೆ ಅತ್ಯುನ್ನತ ‘ಎ’ ಗುತ್ತಿಗೆ ನೀಡಲಾಗಿದೆ.
ಒಟ್ಟು ಎಂಟು ಆಟಗಾರರು ‘ಬಿ ಗ್ರೇಡ್’ ನಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ ಬಾರಿ ‘ಎ’ ಗ್ರೇಡ್ ನಲ್ಲಿದ್ದ ಮಿಥಾಲಿ ರಾಜ್ ಈ ಬಾರಿ ‘ಬಿ’ ಗ್ರೇಡ್ ನಲ್ಲಿ ಸ್ಥಾನ ಪಡೆದಿದ್ದಾರೆ. ಉಳಿದಂತೆ ಜೂಲನ್ ಗೋಸ್ವಾಮಿ, ಜೆಮಿಮಾ ರೋಡ್ರಿಗಸ್, ಏಕ್ತಾ ಬಿಷ್ಟ್, ರಾಧಾ ಯಾದವ್, ಶಿಖಾ ಪಾಂಡೆ, ದೀಪ್ತಿ ಶರ್ಮಾ ಮತ್ತು ತಾನ್ಯಾ ಭಾಟಿಯಾ ‘ಬಿ’ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
‘ಸಿ’ ಪಟ್ಟಿಯಲ್ಲಿ ಕನ್ನಡತಿ ವೇದಾ ಕೃಷ್ಣಮೂರ್ತಿ, ಪೂನಂ ರಾವತ್, ಅನುಜಾ ಪಾಟೀಲ್, ಮಾನ್ಸಿ ಜೋಶಿ, ಡಿ. ಹೇಮಲತಾ, ಅರುಂಧತಿ ರೆಡ್ಡಿ, ರಾಜೇಶ್ವರಿ ಗಾಯಕ್ವಾಡ್, ಪೂಜಾ ವಸ್ತ್ರಾಕರ್, ಹರ್ಲೀನ್ ಡಿಯೋಲ್, ಪ್ರಿಯಾ ಪೂನಿಯಾ ಮತ್ತು ಶಿಫಾಲಿ ವರ್ಮಾ.
‘ಎ’ ಗ್ರೇಡ್ ಆಟಗಾರರು ವಾರ್ಷಿಕ 50 ಲಕ್ಷ ವೇತನ ಪಡೆದರೆ, ‘ಬಿ’ ಗ್ರೇಡ್ ನಲ್ಲಿ 30 ಲಕ್ಷ ಮತ್ತು ಸಿ ಗ್ರೇಡ್ ನಲ್ಲಿ 10 ಲಕ್ಷ ಸಂಭಾವನೆ ಪಡೆಯಲಿದ್ದಾರೆ.