Advertisement

ಆಸೀಸ್‌ ಸವಾಲನ್ನು ಮೀರಿಸಲಿ ಮಿಥಾಲಿ ಪಡೆ

03:45 AM Jul 12, 2017 | Team Udayavani |

ಬ್ರಿಸ್ಟಲ್‌: ಆರಂಭಿಕ ಪಂದ್ಯದಲ್ಲೇ ಆತಿಥೇಯ ಇಂಗ್ಲೆಂಡ್‌ ವಿರುದ್ಧ ಜಯಭೇರಿ, ಇಲ್ಲಿಂದ ಮೊದಲ್ಗೊಂಡು ಸತತ 4 ಪಂದ್ಯಗಳಲ್ಲಿ ವಿಜಯೋತ್ಸವ, ಅಂಕಪಟ್ಟಿಯಲ್ಲೂ ಸ್ವಲ್ಪ ಕಾಲ ಅಗ್ರಸ್ಥಾನದ ಗೌರವ… ಆದರೂ ಸೆಮಿಫೈನಲ್‌ ಟಿಕೆಟ್‌ ಇನ್ನೂ ಖಾತ್ರಿಯಾಗಿಲ್ಲ. ಇದು ವನಿತಾ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾರತದ ಸದ್ಯದ ಸ್ಥಿತಿ. 

Advertisement

ಉಳಿದೆರಡು ಪಂದ್ಯಗಳಲ್ಲಿ ಒಂದನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿರುವ ಮಿಥಾಲಿ ಪಡೆ ಬುಧವಾರ ಕಳೆದ ಬಾರಿಯ ಚಾಂಪಿಯನ್‌ ತಂಡವಾದ ಆಸ್ಟ್ರೇಲಿಯದ ಪ್ರಬಲ ಸವಾಲನ್ನು ಎದುರಿಸಲಿದೆ. ಭಾರತದಂತೆ ಅಜೇಯ ಅಭಿಯಾನ ಬೆಳೆಸಿದ್ದ ಆಸ್ಟ್ರೇಲಿಯ ಕೂಡ ತನ್ನ ಕಳೆದ ಲೀಗ್‌ ಪಂದ್ಯದಲ್ಲಿ ಸೋಲನುಭವಿಸಿತ್ತು. ಅದು ಬಲಿಷ್ಠ ಇಂಗ್ಲೆಂಡ್‌ ವಿರುದ್ಧ, ಅಂತರ ಕೇವಲ ಮೂರೇ ರನ್‌. ಆದರೆ ಭಾರತ ತಂಡ ದಕ್ಷಿಣ ಆಫ್ರಿಕಾದ ವಿರುದ್ಧ 115 ರನ್ನುಗಳ ಭಾರೀ ಸೋಲುಂಡು ಆಘಾತಕ್ಕೊಳಗಾಗಿದೆ. ಇದರಿಂದ ಹೊರಬರಲು ಮಿಥಾಲಿ ಬಳಗಕ್ಕೆ ಸಾಧ್ಯವೇ ಎಂಬುದು ಸದ್ಯದ ಪ್ರಶ್ನೆ.

ಇನ್ನು ದುರ್ಬಲ ಎದುರಾಳಿಗಳಿಲ್ಲ
ಸತತ 4 ಪಂದ್ಯ ಗೆದ್ದರೂ ಭಾರತದ ಮೇಲೆ “ಒತ್ತಡ’ ಏಕೆಂದರೆ, ಮಿಥಾಲಿ ರಾಜ್‌ ಬಳಗ ಈಗಾಗಲೇ ದುರ್ಬಲ ಎದುರಾಳಿಗಳ ವಿರುದ್ಧ ತನ್ನ ಸ್ಪರ್ಧೆಯನ್ನು ಮುಗಿಸಿದೆ. ಇಂಗ್ಲೆಂಡನ್ನು ಮಣಿಸಿದ್ದು ಅಮೋಘ ಸಾಧನೆಯಾದರೆ, ಪಾಕಿಸ್ಥಾನ, ವೆಸ್ಟ್‌ ಇಂಡೀಸ್‌ ಮತ್ತು ಶ್ರೀಲಂಕಾ ವಿರುದ್ಧದ ಗೆಲುವು ನಿರೀಕ್ಷಿತ. 
ಭಾರತಕ್ಕೆ ಲೀಗ್‌ ಹಂತದ ನಿಜವಾದ ಸವಾಲು ಎದುರಾಗಿರು ವುದೇ ಇಲ್ಲಿಂದ. ಭಾರತದ ಉಳಿದೆಲ್ಲ ಎದುರಾಳಿಗಳೂ ಕೂಟದ ಬಲಾಡ್ಯ ತಂಡಗಳಾಗಿರುವುದೇ ಇದಕ್ಕೆ ಕಾರಣ. 

ಈ ಮೂರರ ಪೈಕಿ ಮೊದಲ ಹರ್ಡಲ್ಸ್‌ನಲ್ಲಿ ಭಾರತ ವಿಫ‌ಲವಾಗಿದೆ. ದಕ್ಷಿಣ ಆಫ್ರಿಕಾ ಭಾರೀ ಅಂತರದಿಂದ ಭಾರತವನ್ನು ಬಗ್ಗುಬಡಿದಿದೆ. ಹರಿಣಗಳಿಗೆ ಹೋಲಿಸಿದರೆ ಆಸ್ಟ್ರೇಲಿಯ ಹೆಚ್ಚು ಬಲಿಷ್ಠ. ಕೊನೆಯ ಎದುರಾಳಿಯಾದ ನ್ಯೂಜಿ ಲ್ಯಾಂಡ್‌ ಬಹಳ ಅಪಾಯಕಾರಿ. ಹೀಗಾಗಿ ಸತತ ನಾಲ್ಕರಲ್ಲಿ ಗೆದ್ದರೂ ಸೆಮಿಫೈನಲ್‌ಗೆ ಅಗತ್ಯವಿರುವ ಒಂದೇ ಒಂದು ಗೆಲುವನ್ನು ಒಲಿಸಿಕೊಳ್ಳುವುದೇ ಮಿಥಾಲಿ ಪಡೆಗೆ ದೊಡ್ಡ ತಲೆನೋವಾಗಿ ಕಾಡುತ್ತಿದೆ. ಅಕಸ್ಮಾತ್‌ ಇವೆ ರಡರಲ್ಲೂ ಸೋತರೇ? ರನ್‌ರೇಟ್‌ನಲ್ಲಿ ಹಿಂದು ಳಿದಿರುವ ಭಾರತಕ್ಕೆ ಸೆಮಿಫೈನಲ್‌ ಪ್ರವೇಶ ಮರೀಚಿಕೆಯಾಗಲೂಬಹುದು!

ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಬೌಲಿಂಗ್‌, ಬ್ಯಾಟಿಂಗ್‌ ಎರಡೂ ಕೈಕೊಟ್ಟಿತ್ತು. 273 ರನ್‌ ಬಿಟ್ಟುಕೊಟ್ಟ ಭಾರತ, ಬಳಿಕ 158ಕ್ಕೆ ಕುಸಿದಿತ್ತು. ವನ್‌ಡೌನ್‌ ಆಟಗಾರ್ತಿ ದೀಪ್ತಿ ಶರ್ಮ (60), ಬೌಲರ್‌ ಜೂಲನ್‌ ಗೋಸ್ವಾಮಿ (ಔಟಾಗದೆ 43) ಹೊರತುಪಡಿಸಿ ಉಳಿದವರೆಲ್ಲರದೂ ಫ್ಲಾಪ್‌ ಶೋ. 17 ಓವರ್‌ ಆಗುವಷ್ಟರಲ್ಲಿ 56 ರನ್ನಿಗೆ 6 ವಿಕೆಟ್‌ ಉರುಳಿ ಹೋಗಿತ್ತು. ಮಿಥಾಲಿ, ಹರ್ಮನ್‌ಪ್ರೀತ್‌ ಖಾತೆಯನ್ನೇ ತೆರೆಯಲಿಲ್ಲ. ಸ್ಮತಿ ಮಂಧನಾ (4) ವೈಭವ ಮೊದಲೆರಡು ಪಂದ್ಯಕ್ಕಷ್ಟೇ ಸೀಮಿತಗೊಂಡಿದೆ. ಹೀಗಾಗಿ ಓಪ ನಿಂಗ್‌ ಸಮಸ್ಯೆ ಬಿಗಡಾಯಿಸಿದೆ. ಒಟ್ಟಾರೆ ಹೇಳು ವುದಾದರೆ, ಭಾರತದ ಬ್ಯಾಟಿಂಗ್‌ ಸರದಿಯಲ್ಲಿ ಈವರೆಗೆ ಯಾರಿಂದಲೂ ಸ್ಥಿರ ಪ್ರದರ್ಶನ ಕಂಡುಬಂದಿಲ್ಲ. 

Advertisement

ವೇಗಿ ಶಿಖಾ ಪಾಂಡೆ ತಂಡಕ್ಕೆ ಮರಳಿರುವುದು ಭಾರತದ ಪಾಲಿಗೊಂದು ಸಿಹಿ ಸುದ್ದಿ. ದಕ್ಷಿಣ ಆಫ್ರಿಕಾ ವಿರುದ್ಧ ಅವರು 40 ರನ್ನಿಗೆ 3 ವಿಕೆಟ್‌ ಉಡಾಯಿಸಿದ್ದರು. “ಪರಿಪೂರ್ಣ ಯೋಜನೆಯೊಂದಿಗೆ ಆಕ್ರಮಣಕಾರಿ ಆಟವನ್ನು ಆಡಬೇಕಿದೆ. ಉಳಿದ ತಂಡಗಳ ಸಾಮರ್ಥ್ಯ ಹೇಗೇ ಇರಲಿ, ನಾವು ಮಾತ್ರ ಸಾಮರ್ಥ್ಯಕ್ಕೂ ಮಿಗಿಲಾದ ಪ್ರದರ್ಶನ ನೀಡಬೇಕು ಎಂದು ವಿಶ್ವಕಪ್‌ ಪಂದ್ಯಾವಳಿಗೂ ಮೊದಲೇ ತೀರ್ಮಾ ನಿಸಿದ್ದೆವು. ಇಂಥ ಆಟ ಆಸ್ಟ್ರೇಲಿಯ ವಿರುದ್ಧ ಮೂಡಿಬರಬೇಕಿದೆ…’ ಎಂಬುದಾಗಿ ಪಾಂಡೆ ಹೇಳಿದ್ದಾರೆ.

ಗೆಲುವಿನ ಹಳಿ ಏರಬೇಕು
ಇಂಗ್ಲೆಂಡ್‌ ವಿರುದ್ಧ ಅಲ್ಪ ಅಂತರದ ಸೋಲನುಭವಿಸಿದ ಬ್ರಿಸ್ಟಲ್‌ ಅಂಗಳದಲ್ಲೇ ಆಸ್ಟ್ರೇಲಿಯ ಭಾರತವನ್ನು ಎದುರಿಸಲಿದೆ. ಇಲ್ಲಿಯೇ ಮರಳಿ ಗೆಲುವಿನ ಹಳಿ ಏರಬೇಕಿದೆ ಎಂದಿದ್ದಾರೆ ನಾಯಕಿ ಮೆಗ್‌ ಲ್ಯಾನಿಂಗ್‌.
ಬುಧವಾರದ ಉಳಿದೆರಡು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ-ಶ್ರೀಲಂಕಾ; ಇಂಗ್ಲೆಂಡ್‌-ನ್ಯೂಜಿಲ್ಯಾಂಡ್‌ ಮುಖಾಮುಖೀಯಾಗಲಿವೆ. ಇಲ್ಲಿ ದಕ್ಷಿಣ ಆಫ್ರಿಕಾ ಗೆಲುವಿನ ಬಗ್ಗೆ ಅನುಮಾನವಿಲ್ಲ. ನ್ಯೂಜಿಲ್ಯಾಂಡ್‌ ದೊಡ್ಡ ಬೇಟೆಯಾಡಿದರೆ ಅಚ್ಚರಿ ಇಲ್ಲ. ಆಗ ಇವೆರಡರ “ನೇರ ಪರಿಣಾಮ’ ಭಾರತದ ಮೇಲಾಗಲಿದೆ!

ಕಾಂಗರೂ ಮೇಲುಗೈ
6 ಬಾರಿಯ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯ ವಿರುದ್ಧ ಭಾರತದ ಸಾಧನೆ ತೀರಾ ನಿರಾಶಾದಾಯಕ. ಈವರೆಗೆ ಆಡಿದ 41 ಪಂದ್ಯಗಳಲ್ಲಿ ಎಂಟರಲ್ಲಷ್ಟೇ ಗೆಲುವು ಕೈಹಿಡಿದಿದೆ. ಆದರೆ ಕೊನೆಯ ಸಲ ಇತ್ತಂಡಗಳು ಮುಖಾಮುಖೀಯಾದಾಗ ಮಿಥಾಲಿ ರಾಜ್‌ ಅವರ 89 ರನ್‌ ಪರಾಕ್ರಮದಿಂದ ಭಾರತ 5 ವಿಕೆಟ್‌ ಗೆಲುವು ಸಾಧಿಸಿತ್ತು. ಬುಧವಾರವೂ ಮಿಥಾಲಿ ಟೀಮ್‌ನಿಂದ ಇಂಥದೇ ಪ್ರದರ್ಶನ ಮೂಡಿಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next