ಮುಂಬೈ: ಪ್ಲೇಆಫ್ ಹಾದಿಯನ್ನು ಸುಗಮವಾಗಿಟ್ಟುಕೊಳ್ಳಬೇಕಾದರೆ ಗೆಲ್ಲಲೇಬೇಕಾಗಿದ್ದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಯಶಸ್ಸು ಸಾಧಿಸಿದೆ. ಮತ್ತೊಂದು ಕಡೆ ರಾಜಸ್ಥಾನ್ ರಾಯಲ್ಸ್ 8 ವಿಕೆಟ್‌ಗಳಿಂದ ಸೋತು ಹೋಗಿ ತನ್ನ ಹಾದಿಯನ್ನು ತುಸು ಕಠಿಣ ಮಾಡಿಕೊಂಡಿದೆ. ಆದರೆ ಚಿಂತಿಸುವ ಅಗತ್ಯವಿಲ್ಲ.
ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು ಬುಧವಾರದ ಐಪಿಎಲ್ ಪಂದ್ಯದಲ್ಲಿ 20 ಓವರ್‌ಗಳಲ್ಲಿ 6 ವಿಕೆಟಿಗೆ 160 ರನ್ನುಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.ಇದನ್ನು ಬೆನ್ನತ್ತಿದ ಡೆಲ್ಲಿ ಕೇವಲ 18.1 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 161 ರನ್ ಗಳಿಸಿತು. ಡೆಲ್ಲಿ ಪರ ಮಿಚೆಲ್ ಮಾರ್ಷ್ (89 ರನ್, 62 ಎಸೆತ), ಡೇವಿಡ್ ವಾರ್ನರ್ (52 ರನ್, 41 ಎಸೆತ) ಸ್ಫೋಟಕ ಬ್ಯಾಟಿಂಗ್ ಮಾಡಿ ತಂಡವನ್ನು ಸುಲಭವಾಗಿ ಗೆಲ್ಲಿಸಿದರು.
ಅಶ್ವಿನ್ ಅರ್ಧಶತಕ: ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ಪರ ಒನ್‌ಡೌನ್‌ನಲ್ಲಿ ಬ್ಯಾಟಿಂಗ್‌ಗೆ ಬಂದ ಆರ್.ಅಶ್ವಿನ್ ಮಿಂಚಿದರು. ಆದರೆ ಆರಂಬಿಕರು ವೈಫಲ್ಯ ಅನುಭವಿಸಿದರು. ಈ ಐಪಿಎಲ್‌ನಲ್ಲಿ ಗರಿಷ್ಠ ರನ್ ಗಳಿಸಿರುವ ಜೋಸ್ ಬಟ್ಲರ್ 7 ರನ್ನಿಗೆ ಆಟ ಮುಗಿಸಿದರೆ ಈ ಹಿಂದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಆರಂಭಿಕ ಯಶಸ್ವಿ ಜೈಸ್ವಾಲ್ ಇಲ್ಲಿ ವಿಫಲರಾದರು.
ಅಶ್ವಿನ್ ಮತ್ತು ದೇವದತ್ತ ಪಡಿಕ್ಕಲ್ ತಾಳ್ಮೆಯ ಆಟವಾಡಿ ತಂಡದ ಮೊತ್ತವನ್ನು ಏರಿಸುವ ಪ್ರಯತ್ನ ಮಾಡಿದರು. ತಂಡದ ಮೊತ್ತ ಶತಕ ದಾಟುತ್ತಲೇ 50 ರನ್ ಗಳಿಸಿದ್ದ ಅಶ್ವಿನ್ ಔಟಾದರು. 38 ಎಸೆತ ಎದುರಿಸಿದ ಅವರು 4 ಬೌಂಡರಿ ಮತ್ತು 2 ಸಿಕ್ಸರ್ ಬಾರಿಸಿದರು.
ಅಶ್ವಿನ್ ಔಟಾದ ಬಳಿಕ ತಂಡ ಮತ್ತೆ ಕುಸಿತಕ್ಕೆ ಒಳಗಾಯಿತು. ದೇವದತ್ತ ಪಡಿಕ್ಕಲ್ ಮಾತ್ರ ಸ್ವಲ್ಪಮಟ್ಟಿಗೆ ಡೆಲ್ಲಿ ದಾಳಿಯನ್ನು ಎದುರಿಸಲು ಶಕ್ತರಾದರು. ಪಡಿಕ್ಕಲ್ 30 ಎಸೆತಗಳಿಂದ 6 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 48 ರನ್ ಗಳಿಸಿ ನೋರ್ಜೆ ಅವರಿಗೆ ವಿಕೆಟ್ ಒಪ್ಪಿಸಿದರು. ನಾಯಕ ಸಂಜು ಸ್ಯಾಮ್ಸನ್, ರಿಯಾನ್ ಪರಾಗ್ ಬ್ಯಾಟಿಂಗ್‌ನಲ್ಲಿ ಮತ್ತೆ ವೈಫಲ್ಯ ಅನುಭವಿಸಿದರು.
ಬಿಗುದಾಳಿ ಸಂಘಟಿಸಿದ ಚೇತನ್ ಸಕಾರಿಯ, ಆ್ಯನ್ರಿಚ್ ನೋರ್ಜೆ ಮತ್ತು ಮಿಚೆಲ್ ಮಾರ್ಷ್ ಅವರು ತಲಾ ಎರಡು ವಿಕೆಟ್ ಕಿತ್ತು ರಾಜಸ್ಥಾನದ ಕುಸಿತಕ್ಕೆ ಕಾರಣರಾದರು. ಶಾರ್ದೂಲ್ ಠಾಕೂರ್ ಮತ್ತು ಕುಲದೀಪ್ ಯಾದವ್ ವಿಕೆಟ್ ಪಡೆಯದಿದ್ದರೂ ನಿಖರ ದಾಳಿ ಸಂಘಟಿಸಿದ್ದರು.
ಸಂಕ್ಷಿಪ್ತ ಸ್ಕೋರ್: ರಾಜಸ್ಥಾನ್ 20 ಓವರ್, 160/6 (ಆರ್.ಅಶ್ವಿನ್ 50, ದೇವದತ್ತ ಪಡಿಕ್ಕಲ್ 48, ಚೇತನ್ ಸಕಾರಿಯ 23ಕ್ಕೆ 2). ಡೆಲ್ಲಿ 18.1 ಓವರ್, 161/2 (ಮಿಚೆಲ್ ಮಾರ್ಷ್ 89, ಡೇವಿಡ್ ವಾರ್ನರ್ 52).