Advertisement
ನಗರದ ಜಿಪಂಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ ಅಧ್ಯಕ್ಷತೆಯಲ್ಲಿ ನಡೆದ ಜಿಪಂ ಸಾಮಾನ್ಯ ಸಭೆಯ ಆರಂಭದಲ್ಲಿ ನಿಲುವಳಿ ಮಂಡಿಸಿದ ಸದಸ್ಯ ಅಚ್ಯುತಾನಂದ ಅವರು, ಕೆ.ಆರ್. ತಾಲೂಕಿನ ಕೆಲವು ಗ್ರಾಮಗಳಲ್ಲಿ ಎಸ್ಸಿ-ಎಸ್ಟಿ ವರ್ಗಗಳಿಗೆ ಮೀಸಲಿರುವ ಅನುದಾನದಡಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸುವ ಮೂಲಕ ಅನುದಾನವನ್ನು ದುರ್ಬಳಕೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.
Related Articles
Advertisement
ಒಂದು ತೀರ್ಮಾನಕ್ಕೆ ಬರಲು ಮನವಿ: ಸದಸ್ಯೆ ಮಂಗಳಾ ಸೋಮಶೇಖರ್ ಮಾತನಾಡಿ, ಗ್ರಾಮೀಣ ಪ್ರದೇಶದ ಜನತೆ ಶುದ್ಧ ಕುಡಿಯುವ ನೀರನ್ನು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕೋಟ್ಯಂತರ ಹಣ ವ್ಯಯಿಸಿ ಶುದ್ಧ ನೀರಿನ ಘಟಕಗಳನ್ನು ತೆರೆದಿದೆ. ಆದರೆ ನಮ್ಮ ಕ್ಷೇತ್ರದಲ್ಲಿ ಇರುವ 20 ಘಟಕಗಳಲ್ಲಿ 13 ಕೆಟ್ಟು ನಿಂತಿವೆ. ಸರ್ಕಾರದ ಯೋಜನೆಯ ಮೂಲ ಆಶಯವೇ ಹಳ್ಳ ಹಿಡಿದಿದೆ. ಈ ನಿಟ್ಟಿನಲ್ಲಿ ಸಭೆ ಗಂಭೀರವಾಗಿ ಚರ್ಚಿಸಿ, ಒಂದು ತೀರ್ಮಾನ ಮಾಡಬೇಕು ಎಂದು ಮನವಿ ಮಾಡಿದರು.
ಸಭೆಯ ಅರ್ಧ ಸಮಯ ನುಂಗಿದ ಸ್ವಪಕ್ಷೀಯರ ಸೆಣಸಾಟ: ಸಭೆಯ ಆರಂಭದಲ್ಲಿ ಎಸ್‌ಇಪಿ ಮತ್ತು ಟಿಎಸ್‌ಪಿ ಅನುದಾನವನ್ನು ದುರ್ಬಳಕೆ ಧ್ವನಿ ಎತ್ತಿದ ಅಚ್ಯುತಾನಂದ ಅವರ ಬೆಂಬಲಕ್ಕೆ ನಿಂತ ಬೀರಿಹುಂಡಿ ಬಸವಣ್ಣ, ಅನುದಾನವನ್ನು ಕ್ಷೇತ್ರದ ಸದಸ್ಯರ ಗಮನಕ್ಕೂ ತಾರದೇ ಅಧಿಕಾರಿಗಳು ತಮಗೆ ಇಷ್ಟ ಬಂದಂತೆ ಖರ್ಚು ಮಾಡಿರುವುದು ಸರಿಯಲ್ಲ. ಈ ಸಂಬಂಧ ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಸಾ.ರಾ. ನಂದೀಶ್ ಈ ಬಗ್ಗೆ ಚರ್ಚೆ ನಡೆಸುವುದಕ್ಕೂ ಮೊದಲು ಸಂಬಂಧಪಟ್ಟ ಅಧಿಕಾರಿಯಿಂದ ಮಾಹಿತಿ ಪಡೆಯಿರಿ. ಅದು ಕೆಂದ್ರಧ್ದೋ, ರಾಜ್ಯಧ್ದೋ ಅಥವಾ ಜಿಪಂ ಅನುದಾನವೊ ಎಂದು ಮೊದಲು ತಿಳಿಯಿರಿ ಎಂದು ಏರು ಧ್ವನಿಯಲ್ಲಿ ಬಸವಣ್ಣನವರ ವಿರುದ್ಧ ತಿರುಗಿ ಬಿದ್ದರು. ಇವರಿಬ್ಬರ ಸುದೀರ್ಘ ಅನಾವಶ್ಯಕ ಚರ್ಚೆಯು ಮಾಜಿ ಸಚಿವರಾದ ಸಾ.ರಾ. ಮಹೇಶ್ ಮತ್ತು ಜಿ.ಟಿ. ದೇವೇಗೌಡ ಇಬ್ಬರ ಬಣ ಎಂಬುದನ್ನು ಸಾರಿ ಹೇಳುವಂತಿತ್ತು.
ಗ್ರಾಮೀಣ ಕುಡಿಯುವನೀರು ಸರಬರಾಜು ವಿಭಾಗದ ಇಇ ಲಕ್ಷ್ಮೀಶ ಮಾತನಾಡಿ, ಈ ಯೋಜನೆಯನ್ನು ಸರ್ಕಾರ ಜನಸಂಖ್ಯೆ ಆಧಾರದ ಮೇಲೆ ರೂಪಿಸಿದೆ. ಸರ್ಕಾರವೇ ಅನುದಾನ ನಿಗದಿಪಡಿಸಿದೆ. ಕಂದಾಯ ಇಲಾಖೆ, ಗ್ರಾಮೀಣ ನೀರು ಸರಬರಾಜು ಯೋಜನೆ, ಕೆಆರ್‌ಎಡಿಎಲ್, ಶಾಸಕರು, ನಿರ್ಮಿತಿ ಕೇಂದ್ರದ ಸಹಕಾರದೊಂದಿಗೆ ಈ ಘಟಕ ಸ್ಥಾಪಿಸಲಾಗುತ್ತಿದೆ. ಈ ಪೈಕಿ ಕೆಲವೊಂದು ಘಟಕಗಳು ದುರಸ್ತಿಗೆ ಒಳಗಾಗಿದೆ. ಅವುಗಳನ್ನು ಸರಿಪಡಿಸಲು ಟೆಂಡರ್ ಕರೆಯಲಾಗಿದೆ ಎಂದರು.
ರಾಜ್ಯವಲಯ ಅನುದಾನದ ಕುರಿತು ಜಿಪಂ ಸದಸ್ಯರು ಪ್ರಶ್ನೆ ಕೇಳುವಂತಿಲ್ಲ ಎಂದು ಹಿಂದಿನ ಸಭೆಗಳಲ್ಲಿ ತಿಳಿಸಲಾಗಿದೆ. ಅಲ್ಲದೆ ಅಧಿಕಾರಿಗಳಿಂದ ಮಾಹಿತಿ ಪಡೆದು ಅಧ್ಯಕ್ಷರು ಉತ್ತರ ಕೊಡಬೇಕೋ ಅಥವಾ ಅಧಿಕಾರಿಗಳಿಂದಲೇ ಉತ್ತರ ಕೊಡಿಸಬೇಕೋ ಎಂಬ ಕುರಿತು ಮೊದಲು ತೀರ್ಮಾನವಾಗಲಿ ಎಂದು ಸದಸ್ಯ ಬೀರಿಹುಂಡಿ ಬಸವಣ್ಣ ಒತ್ತಾಯಿಸಿದರು. ಈ ವೇಳೆ ಸ್ವಪಕ್ಷೀಯ ಸದಸ್ಯ ಸಾ.ರಾ. ನಂದೀಶ್ ಮತ್ತು ಬಸವಣ್ಣ ನಡುವೆ ಮಾತಿನ ಚಕಮಕಿ ನಡೆಯಿತು.ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಜಿಪಂ ಸಿಇಒ ಕೆ. ಜ್ಯೋತಿ ಇದ್ದರು. ಕೃಷಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ: ಸದಸ್ಯೆ ಲತಾ ಸಿದ್ದಶೆಟ್ಟಿ ಮಾತನಾಡಿ, ಭತ್ತ ಖರೀದಿ ಕೇಂದ್ರಗಳು ಜಿಲ್ಲೆಯಲ್ಲಿ ಆರಂಭವಾಗಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಮಹಂತೇಶಪ್ಪ, ತೋಟಗಾರಿಕೆ, ರಾಜ್ಯ ಉಗ್ರಾಣ ನಿಗಮ, ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಈ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದರು. ಈ ವೇಳೆ ಮಾಜಿ ಉಪಾಧ್ಯಕ್ಷ ಜಿ. ನಟರಾಜ್ ಮಾತನಾಡಿ, ಭತ್ತ ಖರೀದಿ ಕೇಂದ್ರಗಳಲ್ಲಿ ರೈತರಿಂದ ಆರ್‌ಟಿಸಿ ಕೇಳುತ್ತಿದ್ದಾರೆ. ಆದರೆ ನಮ್ಮ ಜಮೀನಿನ ಆರ್‌ಟಿಸಿಯಲ್ಲಿ ನೋ ಕ್ರಾಪ್ಸ್ ಎಂದು ನಮೂದಾಗಿದೆ. ನಾವು ಹಲವು ವರ್ಷಗಳಿಂದಲೂ ಉಳುಮೆ ಮಾಡಿಕೊಂಡೆ ಬರುತ್ತಿದ್ದೇವೆ ಎಂದರು. ಈ ವೇಳೆ ಭತ್ತ ಖರೀದಿ ಕೇಂದ್ರಗಳಲ್ಲಿ ಭತ್ತ ನೀಡಲು ಆರ್‌ಟಿಸಿ ಅಗತ್ಯವಿಲ್ಲ ಎಂದು ಮಹಂತೇಶಪ್ಪ ತಿಳಿಸಿದ್ದರಿಂದ ಗೊಂದಲ ಉಂಟಾಯಿತು. ಅನೇಕ ಸದಸ್ಯರು ಮಹಂತೇಶಪ್ಪ ವಿರುದ್ಧ ತಿರುಗಿ ಬಿದ್ದರು. ಈ ಅಧಿಕಾರಿಗಳು ಜಿಡ್ಡುಗಟ್ಟಿ ಹೋಗಿದ್ದಾರೆ. ರೈತರನ್ನು ಶೋಷಣೆ ನಡೆಸುತ್ತಿದ್ದಾರೆ. ಭತ್ತ ಖರೀದಿ ಕೇಂದ್ರಗಳಲ್ಲಿ ಆರ್‌ಟಿಸಿ ಕೇಳುತ್ತಾರೆ. ಇವರು ನೋಡಿದರೆ ಬೇಕಿಲ್ಲ ಎನ್ನುತ್ತಾರೆ. ಹಾಗಿದ್ದರೆ ಅಧಿಕಾರಿಗಳ ಸಭೆ ನಡೆಸಿ ಕೂಡಲೇ ಆರ್‌ಟಿಸಿ ಬೇಡ ಎಂದು ಸೂಚಿಸಲಿ. ಅಥವಾ ತಮ್ಮ ಅಧೀನ ಅಧಿಕಾರಿಗಳೊಂದಿಗೆ ಎಷ್ಟು ಸಭೆ ನಡೆಸಿದ್ದಾರೆ ತಿಳಿಸಲಿ ಎಂದು ಪಟ್ಟು ಹಿಡಿದರು. ಜೊತೆಗೆ ಹಲವು ವರ್ಷಗಳಿಂದ ಇಲ್ಲಿಯೇ ಉಳಿದಿರುವ ಇಂಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಸದಸ್ಯರ ಒತ್ತಾಯಕ್ಕೆ ಮಣಿದ ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ, ತಪ್ಪಿತಸ್ಥ ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ತಿಳಿಸಿದರು.