Advertisement

ಕೆಲಸವನ್ನೇ ಮಾಡದೆ ಹಣ ದುರುಪಯೋಗ

12:23 PM Aug 14, 2017 | |

ಎಚ್‌.ಡಿ.ಕೋಟೆ: ಪಂಚಾಯ್ತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಮತ್ತು ಬೀದಿ ದೀಪ ನಿರ್ವಹಣೆ ನೆಪವೊಡ್ಡಿ ಹೆಚ್ಚಾಗಿ ಗ್ರಾಪಂ ವ್ಯಾಪ್ತಿಯಲ್ಲಿ ಯಾವ ಕಾಮಗಾರಿಯನ್ನು ನಡೆಸದೇ ಅಧ್ಯಕ್ಷ ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸೇರಿ 14ನೇ ಹಣಕಾಸು ಯೋಜನೆಯಡಿ ಸುಮಾರು 5 ಲಕ್ಷರೂ ಅವ್ಯವಹಾರ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Advertisement

ತಾಲೂಕಿನ ನೂರಲಗುಪ್ಪೆ ಎ, ಗ್ರಾಪಂನಲ್ಲಿ ಯಾವ ಕಾಮಗಾರಿಗಳನ್ನು ನಿರ್ವಹಿಸದೆ ಕುಡಿಯುವ ನೀರು ಮತ್ತು ಬೀದಿ ದೀಪ ನಿರ್ವಹಣೆಯ ನೆಪಓಡ್ಡಿ ಅಧ್ಯಕ್ಷ ರಾಜೇಗೌಡ ಹಾಗೂ ಪಿಡಿಒ ಪ್ರಶಾಂತ್‌ ಸೇರಿ 14ನೇ ಹಣಕಾಸು ಯೋಜನೆಯಡಿ ಹ್ಯಾಂಡ್‌ಪೋಸ್ಟ್‌ನಲ್ಲಿರುವ ಶ್ರೀ ಮಹಾಲಕ್ಷ್ಮೀ ಎಲೆಕ್ಟ್ರಿಕಲ್ಸ್‌ ಮತ್ತು  ಹಾರ್ಡ್‌ವೇರ್ ಹೆಸರಿನಲ್ಲಿ ಸುಮಾರು 5 ಲಕ್ಷ ರೂ. ಗಳಿಗೂ ಹೆಚ್ಚು ಹಣವನ್ನು ಅಂತರಸಂತೆ ಕಾವೇರಿ ಗ್ರಾಮೀಣ ಬ್ಯಾಂಕ್‌ (ಚೆಕ್‌ ನಂ. 038106, 038107, 038108, 038109, 038110, 038111, 038112) ಚೆಕ್‌ಗಳನ್ನು ಬಳಸಿ ಒಂದೇ ದಿನದಲ್ಲಿ ಡ್ರಾ ಮಾಡಿರುವುದು ಕಂಡುಬಂದಿದೆ.

ನಿಯಮ ಗಾಳಿಗೆ ತೂರಿದ ಪಿಡಿಒ ಮತ್ತು ಅಧ್ಯಕ್ಷ: ಕಾಮಗಾರಿಗಳಿಗೆ ನಡೆಸಿದ್ದೇವೆ ಎಂದು ಪಂಚಾಯಿತಿ ಪಿಡಿಒ ಮತ್ತು ಅಧ್ಯಕ್ಷ ಶಿರಮಹಳ್ಳಿ ರಾಜೇಗೌಡ ಹೇಳುತ್ತಿದ್ದು, ಕಾಮಗಾರಿಗೂ ಮುನ್ನ ಸರ್ಕಾರದ ಮತ್ತು ಪಂಚಾತಯ್‌ರಾಜ್‌ ಇಲಾಖೆ ನಿಯಮದನ್ವಯ ಪಂಚಾಯ್ತಿ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳುವ ಮುನ್ನ ಕ್ರಿಯಾಯೋಜನೆ ತಯಾರುಮಾಡಿ, ಅದನ್ನು ಪಂಚಾಯ್ತಿ ಸರ್ವ ಸದಸ್ಯರನ್ನೊಳಗೊಂಡ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸದಸ್ಯರ ಸಲಹೆ ಪಡೆದು ನಡವಳಿ ಕೈಗೊಂಡು ರೆಕಾರ್ಡ್‌ ಮಾಡಬೇಕು. ನಂತರ ಟೆಂಡರ್‌ ಪ್ರಕ್ರಿಯೆ ನಡೆಸಿ ಕಾಮಗಾರಿಗಳನ್ನು ಕೈಗೊಳ್ಳಬೇಕು, ಆದರೆ ಇಲ್ಲಿ ಪಿಡಿಒ ಮತ್ತು ಅಧ್ಯಕ್ಷ ಸೇರಿ ಸರ್ಕಾರ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಹಣ ಡ್ರಾ ಮಾಡಿ ನುಂಗಿ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

ನಿಯಮ ಇರುವುದು ಹೀಗೆ: ಜೊತೆಗೆ ಸರ್ಕಾರದ ಅನುದಾನವಾಗಿರುವ 14ನೇ ಹಣಕಾಸು ನಿಧಿಯಲ್ಲಿ ಕಾಮಗಾರಿ ಕೈಗೊಳ್ಳಬೇಕು ಎಂದು ಆದೇಶವಿದೆ, ಈ ಯೋಜನೆಯಡಿ ಸುಮಾರು ಶೇ.50 ರಷ್ಟು ಅನುದಾನವನ್ನು ಕುಡಿಯುವ ನೀರು ನಿರ್ವಹಣೆಗೆ ಬಳಸಬೇಕು. ಶೇ.25 ರಷ್ಟು ಅನುದಾನವನ್ನು ಪ.ಜಾತಿ ಮತ್ತು ಪಂಗಡದವರು ವಾಸಿಸುವ ಬೀದಿಗಳಲ್ಲೇ ಬಳಸಬೇಕು ಹಾಗೂ ಶೇ.3 ರಷ್ಟು ಅನುದಾನವನ್ನು ಅಂಗವಿಕಲರಿಗೆ ನೀಡಬೇಕು ಎಂದು ಆದೇಶವಿದ್ದರೂ 39 ಪಂಚಾಯ್ತಿಗಳಲ್ಲೂ ಇದ್ಯಾವುದು ಕ್ರಮಬದ್ಧವಾಗಿ ನಡೆಯುತ್ತಿಲ್ಲ ಎಂದು ವ್ಯಕ್ತವಾಗುತ್ತಿದೆ.

ಅಕ್ರಮ ನಡೆಸಿ,ಅನುಮೋದನೆ ಪಡೆಯಲು ಬಂದಾಗ ಅಕ್ರಮ ಬಯಲು: ಇಷ್ಟು ಸಾಲದೆಂಬಂತೆ ಕುಡಿಯುವ ನೀರು ಮತ್ತು ಬೀದಿ ದೀಪದ ನೆಪವೊಡ್ಡಿ 14ನೇ ಹಣಕಾಸು ಯೋಜನೆಯಡಿ ಅಕ್ರಮವಾಗಿ ಹಣ ಡ್ರಾ ಮಾಡಿ ಕಾಮಗಾರಿ ನಡೆಸಲಾಗಿದೆ ಎಂದು ಕಳೆದ ಶುಕ್ರವಾರ ನಡೆದ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆಯಲು ಬಂದಿದ್ದರು, ಆಗ ಕೆಲ ಮಹಿಳಾ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪಿಡಿಒ ಮತ್ತು ಅಧ್ಯಕ್ಷ ನೀವು ಮಹಿಳೆಯರು ಜೊತೆಗೆ ಅನಕ್ಷರಸ್ಥರು ಇದೆಲ್ಲ ನಿಮಗೆ ತಿಳಿಯಲ್ಲ ಎಂದು ಉಢಾಪೆಯಾಗಿ ಮಾತನಾಡಿದ್ದಾರೆ ಎಂದು ಪಂಚಾಯಿತಿ ಸದಸ್ಯೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಸದಸ್ಯೆಯಿಂದಲೇ ಆಕ್ರಮ ಬಯಲಿಗೆ, ತನಿಖೆಗೆ ಆಗ್ರಹ: ಇದೇ ರೀತಿ ಪಂಚಾಯಿತಿಯಲ್ಲಿ ಸರ್ಕಾರದ ಎಲ್ಲ ಯೋಜನೆಯಲ್ಲೂ 2015- 16ನೇ ಸಾಲಿನಲ್ಲಿ ಬಹಳಷ್ಟು ಆಕ್ರಮಗಳು ನಡೆದಿದ್ದು, ಸರ್ಕಾರ ವತಿಯಿಂದ ಸಮಗ್ರ ತನಿಖೆ ಆದಲ್ಲಿ ಇನ್ನಷ್ಟು ಅಕ್ರಮಗಳು ಬಯಲಿಗೆ ಬರಲಿವೆ ಎಂದು ಸದಸ್ಯೆ ಗೀತಾ ಚೆಲುವನಾಯ್ಕ ಆಗ್ರಹಿಸಿದ್ದಾರೆ. ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು, ಜಿಪಂ ಇಒ ಹಾಗೂ ಡೀಸಿ ಸಂಬಂಧಪಟ್ಟ ಪಂಚಾಯತ್‌ರಾಜ್‌ ಇಲಾಖೆ ಅಧಿಕಾರಿಗಳ ಮೂಲಕ ಸಮಗ್ರ ತನಿಖೆ ಮಾಡಬೇಕು ಹಾಗೂ ಈಗ ಯಾವುದೇ ಕಾಮಗಾರಿ ನಡೆಸದೆ, ಕ್ರಿಯಾಯೋಜನೆ ಕೂಡ ತಯಾರಿಸದೆ ಇಲಾಖೆ ನಿಯಮಗಳನ್ನು ಗಾಳಿಗೆ ತೂರಿ ಆಕ್ರಮವಾಗಿ ಹಣ ಡ್ರಾ ಮಾಡಿರುವವರ ವಿರುದ್ಧ ಕ್ರಮಕೈಗೊಳ್ಳಬೇಕಿದೆ.

ಕುಡಿಯುವ ನೀರು ಮತ್ತು ಬೀದಿ ದೀಪ ನಿರ್ವಹಣೆಗಾಗಿ ಹಣ ಡ್ರಾ ಮಾಡಿರುವುದು ನಿಜ, ಡಿಆರ್‌ಎಸ್‌ ಆಗಿರದ ಕಾರಣ ಬಿಲ್‌ ಮಾಡಲು ಆಗಿರಲಿಲ್ಲ, 16 ಜನ ಸದಸ್ಯರು ವಿಶ್ವಾಸವಿದ್ದ ಕಾರಣ ಬಿಲ್‌ ಮಾಡಲಾಗಿತ್ತು, ಇತ್ತಿಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಈ ಸಂಬಂಧ ಅನುಮೋದನೆ ಪಡೆಯಲಾಗಿದೆ, ಇದು ಹಳೆ ಅನುದಾನವಾಗಿದ್ದು, ಈಗಿನ 10 ಲಕ್ಷ ರೂ ಖಾತೆಯಲ್ಲಿಯೇ ಇದೆ.
-ರಾಜೇಗೌಡ, ಗ್ರಾಪಂ ಅಧ್ಯಕ್ಷ, ನೂರಲಕುಪ್ಪೆ 

ಕಾನೂನು ಬದ್ಧವಾಗಿಯೇ ಬಿಲ್‌ ಮಾಡಲಾಗಿದೆ ಪಂಚಾಯ್ತಿಯಲ್ಲಿ ಯಾವುದೇ ಅಕ್ರಮ ಬಿಲ್‌ ಪಾವತಿ ಮಾಡಿಲ್ಲ, ಸದಸ್ಯೆ ಗೀತಾ ಅವರು ಸುಳ್ಳು ಹೇಳುತ್ತಿದ್ದಾರೆ.
-ಪ್ರಶಾಂತ್‌, ಪಿಡಿಒ

ವಿಷಯ ಗಮನಕ್ಕೆ ಬಂದಿದ್ದು, ಗ್ರಾಮಕ್ಕೆ ಭೇಟಿ ನಿಡಿ ಪರಿಶೀಲಿಸಿ ನಂತರ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದನ್ನು ಯೋಚಿಸುವೆ.
-ಶ್ರೀಕಂಠರಾಜೇಅರಸ್‌, ತಾಪಂ ಇಒ

Advertisement

Udayavani is now on Telegram. Click here to join our channel and stay updated with the latest news.

Next