Advertisement

ಲಾಗಿನ್‌ ಐಡಿ ಮತ್ತು ಪಾಸ್‌ವರ್ಡ್‌ ದುರ್ಬಳಕೆ; ನೀರಿನ ಹಣ ನುಂಗಿದ 13 ನೌಕರರ ಅಮಾನತು

01:32 PM Jan 04, 2023 | Team Udayavani |

ಬೆಂಗಳೂರು: ನೀರು ಪೂರೈಕೆ ಶುಲ್ಕ ವಸೂಲಿ ಮಾಡಿ ಜಲಮಂಡಳಿಗೆ ಪಾವತಿಸದೆ ವಂಚಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡಳಿಯ 13 ಅಧಿಕಾರಿ, ಸಿಬ್ಬಂದಿಯನ್ನು ಅಮಾನತುಗೊಳಿಸಿ ಜಲಮಂಡಳಿ ಅಧ್ಯಕ್ಷ ಜಯರಾಂ ಆದೇಶಿಸಿದ್ದಾರೆ.

Advertisement

ಕಳೆದ ಕೆಲ ವರ್ಷಗಳ ಹಿಂದೆ ಜಲಮಂಡಳಿಯಿಂದ ನೀರು ಪೂರೈಕೆ ಶುಲ್ಕವನ್ನು ನಗದು ಅಥವಾ ಡಿಡಿ, ಚೆಕ್‌ ಮೂಲಕ ವಸೂಲಿ ಮಾಡಲಾಗುತ್ತಿತ್ತು. ಹೀಗೆ ವಸೂಲಿ ಮಾಡುವ ಮೊತ್ತವನ್ನು ಜಲಮಂಡಳಿಯ ನಗದು ಪುಸ್ತಕದಲ್ಲಿ ನೋಂದಾಯಿಸುವುದರ ಜತೆಗೆ ಸಜಲ ತಂತ್ರಾಂಶದಲ್ಲಿ ಗ್ರಾಹಕರ ಖಾತೆಯಲ್ಲಿ ಅದನ್ನು ನಮೂದಿಸ ಬೇಕಿತ್ತು. ಜತೆಗೆ ಹಣವನ್ನು ಜಲಮಂಡಳಿ ಬ್ಯಾಂಕ್‌ ಖಾತೆಗೆ ಪಾವತಿಸಬೇಕಿತ್ತು. ಆದರೆ, 2016ರಿಂದ 2018ರವರೆಗೆ 850ಕ್ಕೂ ಹೆಚ್ಚಿನ ಗ್ರಾಹಕರಿಂದ ವಸೂಲಿಯಾದ ನೀರಿನ ಶುಲ್ಕವನ್ನು ಜಲಮಂಡಳಿ ಬ್ಯಾಂಕ್‌ ಖಾತೆಗೆ ಪಾವತಿಸದೆ, ಸಜಲ ತಂತ್ರಾಂಶದಲ್ಲಿ ಗ್ರಾಹಕರ ಖಾತೆಯಲ್ಲಿ ಹಣ ಪಾವತಿಸಲಾಗಿದೆ ಎಂದು ನಮೂದಿಸಿ ವಂಚಿಸಿರುವುದು ಕಳೆದ ತಿಂಗಳು ಬೆಳಕಿಗೆ ಬಂದಿತ್ತು. ಈ ವಂಚನೆಯಿಂದಾಗಿ ಮಂಡಳಿಗೆ 1.75 ಕೋಟಿ ರೂ.ಗಳಷ್ಟು ನಷ್ಟವುಂಟಾಗಿರುವ ಕುರಿತು ಅಂದಾಜಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಲಮಂಡಳಿಯು ಸಹಾಯಕ ನಿಯಂತ್ರಕರು(ಲೆಕ್ಕ) ಅವರ ನೇತೃತ್ವದಲ್ಲಿ 3 ತಂಡಗಳನ್ನು ರಚಿಸಿ ಆಡಿಟ್‌ ಮಾಡಲಾಗಿತ್ತು. ಈ ಆಡಿಟ್‌ಗೆ ಸಂಬಂಧಿಸಿದಂತೆ ಇದೀಗ ಮಧ್ಯಂತರ ವರದಿ ಬಂದಿದ್ದು, ಅಂದಾಜು 1.75 ಕೋಟಿ ರೂ.ಗೂ ಹೆಚ್ಚಿನ ಮೊತ್ತದ ಬಿಲ್‌ ಮೊತ್ತ ವಸೂಲಿಯಾಗಿದ್ದು, ಅದನ್ನು ಜಲಮಂಡಳಿ ಬ್ಯಾಂಕ್‌ ಖಾತೆಗೆ ಪಾವತಿಸಲಾಗಿಲ್ಲ ಎಂಬುದು ತಿಳಿದು ಬಂದಿದೆ.

ಜತೆಗೆ ಮಂಡಳಿಯ ಎಂಜಿನಿಯರ್‌ಗಳು ಸೇರಿ ಅಧಿಕಾರಿಗಳು ಮಾತ್ರ ಬಳಸುತ್ತಿದ್ದ ಸಜಲ ತಂತ್ರಾಂಶದ ಲಾಗಿನ್‌ ಐಡಿ ಮತ್ತು ಪಾಸ್‌ವರ್ಡ್‌ ಅನ್ನು ಗುತ್ತಿಗೆ ನೌಕರರು ದುರ್ಬಳಕೆ ಮಾಡಿಕೊಂಡು ಮಂಡಳಿಗೆ ವಂಚಿಸಲಾಗಿದೆ ಎಂದೂ ಉಲ್ಲೇಖಿಸಲಾಗಿದೆ.

ಯಾರ್ಯಾರು ಅಮಾನತು?
ಸಹಾಯಕ ನಿಯಂತ್ರಕರು (ಲೆಕ್ಕ) ಅವರ ನೇತೃತ್ವದ ತಂಡಗಳು ನೀಡಿದ ಮಧ್ಯಂತರ ವರದಿಯನ್ನಾಧರಿಸಿ ಜಲಮಂಡಳಿ ಅಧ್ಯಕ್ಷ ಜಯರಾಂ ಅವರು 13 ಜನ ಗುತ್ತಿಗೆ ನೌಕರರು ಸೇರಿ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಅದರಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್‌, ಕಂದಾಯ ವ್ಯವಸ್ಥಾಪಕ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಸಹಾಯಕ ಕಲ್ಯಾಣಾಧಿಕಾರಿ ಸೇರಿ ಇನ್ನಿತರ ಹುದ್ದೆಯ ಅಧಿಕಾರಿಗಳಿದ್ದಾರೆ.

Advertisement

ನೀರಿನ ಬಿಲ್‌ ವಸೂಲಿ ಮಾಡಿ ಮಂಡಳಿ ಬ್ಯಾಂಕ್‌ ಖಾತೆಗೆ ಪಾವತಿಸದೇ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂತರಿಕ ಆಡಿಟ್‌ನ ಮಧ್ಯಂತರ ವರದಿ
ಸಲ್ಲಿಕೆಯಾಗಿದೆ. ಅದರ ಆಧಾರದಲ್ಲಿ 13 ಜನರನ್ನು ಅಮಾನತು ಮಾಡಲಾಗಿದೆ. 1.75 ಕೋಟಿ ರೂ.ಗೂ ಹೆಚ್ಚಿನ ವಂಚನೆಯಾಗಿರುವ ಅಂದಾಜಿಸಲಾಗಿದೆ. ಪೂರ್ಣ ಪ್ರಮಾಣದ ವರದಿ ಬಂದ ನಂತರ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು.
●ಜಯರಾಂ, ಜಲಮಂಡಳಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next