ಬೆಂಗಳೂರು: “ಕೇಂದ್ರ ಸರ್ಕಾರ ಹಾಗೂ ಬಿಜೆಪಿಯನ್ನು ವಿರೋಧಿಸುವವರ ತೇಜೋವಧೆಗೆ ಸ್ವಾಯತ್ತ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ದೇಶದಲ್ಲಿ ಬಿಜೆಪಿ ಸರ್ಕಾರಿ ಸಂಸ್ಥೆಗಳನ್ನು ತನ್ನ ಪಕ್ಷದ ಮುಂಚೂಣಿ ಘಟಕದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿರುವುದು ಸಾಮಾನ್ಯ ಜನರಿಗೂ ಅರಿವಾಗುತ್ತಿದೆ. ವಿರೋಧ ಪಕ್ಷಗಳ ಮುಖಂಡರು ಹಾಗೂ ಬಿಜೆಪಿಯನ್ನು ಟೀಕಿಸುವ ಮಾಧ್ಯಮಗಳು, ಉದ್ಯಮಿಗಳು, ಸಂಘ ಸಂಸ್ಥೆಗಳ ವಿರುದ್ಧ ಉದ್ದೇಶ ಪೂರ್ವಕವಾಗಿ ಸುಳ್ಳಿನ ಆರೋಪ ಮಾಡಿ, ತೇಜೊವಧೆ ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ’ ಎಂದು ದೂರಿದರು.
ರಾಜ್ಯದಲ್ಲಿ ರಮೇಶ್ ಜಾರಕಿಹೊಳಿ, ಎಂ.ಟಿ.ಬಿ. ನಾಗರಾಜ್, ಶಾಮನೂರು ಶಿವಶಂಕರಪ್ಪ, ಕೆ. ಗೋವಿಂದರಾಜ್ ಅವರ ಮನೆಗಳ ಮೇಲೆ ಆದಾಯ ತೆರಿಗೆ ದಾಳಿ ಮಾಡಿಸಲಾಯಿತು. ಆ ಮೇಲೆ ಆ ಪ್ರಕರಣ ಏನಾಯಿತು ಎಂದು ಮಾಹಿತಿ ನೀಡದೇ, ಮಾಧ್ಯಮಗಳ ಮೂಲಕ ಹಣ ದೊರೆತಿದೆ ಎಂದು ಸುಳ್ಳು ಸುದ್ದಿ ಪ್ರಚಾರ ಮಾಡಿ, ತೇಜೋವಧೆ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ದೂರಿದರು.
ವಿರೋಧ ಪಕ್ಷದಲ್ಲಿರುವವರನ್ನು ಬಿಜೆಪಿ ಸೇರುವಂತೆ ಒತ್ತಡ ಹೇರಲಾಗುತ್ತಿದೆ. ಅವರ ಪಕ್ಷ ಸೇರ್ಪಡೆಯಾದರೆ, ಅವರ ವಿರುದ್ಧದ ಎಲ್ಲ ಆರೋಪಗಳನ್ನು ಕ್ಷಮಿಸಲಾಗುತ್ತಿದೆ. ಅದಕ್ಕಾಗಿಯೇ ಬಿಜೆಪಿ ಕ್ಷಮಾದಾನ ಯೋಜನೆ ಜಾರಿಗೆ ತಂದಂತಿದೆ ಎಂದರು. ಆದರೆ, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಬಿಜೆಪಿಗೆ ಸೇರುವಂತೆ ಸಾಕಷ್ಟು ಒತ್ತಡ ಹೇರಲಾಗಿತ್ತು. ಆದರೆ, ಅವರು ಕಾಂಗ್ರೆಸ್ ಸಿದ್ಧಾಂತಕ್ಕೆ ಕಟ್ಟು ಬಿದ್ದಿರುವುದರಿಂದ ಅವರ ಮನೆಗಳ ಮೇಲೆ ಐಟಿ ದಾಳಿ ನಡೆಸಲಾಯಿತು.
2016 ರ ಗುಜರಾತ್ ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಅಲ್ಲಿನ ಶಾಸಕರಿಗೆ ಶಿವಕುಮಾರ್ ರಕ್ಷಣೆ ನೀಡಿದ್ದರು ಎನ್ನುವ ಕಾರಣಕ್ಕೆ ಅವರ ಮೇಲೆ ದ್ವೇಷ ಸಾಧಿಸಿ, ಅವರ ನೈತಿಕ ಸ್ಥೈರ್ಯ ಕುಂದಿಸುವ ಕೆಲಸ ಮಾಡಲಾಗುತ್ತಿದೆ. ಆದರೆ, ಕಾಂಗ್ರೆಸ್ ಪಕ್ಷ ಶಿವಕುಮಾರ್ ಅವರ ಬೆನ್ನಿಗೆ ನಿಂತಿದೆ ಎಂದು ಹೇಳಿದರು.
ಡಿಕೆಶಿ ವಿರುದ್ಧ ಇಡಿ ಹಾಗೂ ಆದಾಯ ತೆರಿಗೆ ಇಲಾಖೆ ಷಡ್ಯಂತ್ರ ಮಾಡುತ್ತಿದೆ. ಕಾನೂನು ಸಮ್ಮತವಾಗಿ ಡಿಕೆಶಿಯವರು ಅವರದೆ ಆದ ರೀತಿಯಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಡಿಕೆಶಿ ಜತೆ ನಾವಿದ್ದೇವೆ. ಕಾನೂನು ಹೋರಾಟದಲ್ಲಿ ಅವರು ಜಯ ಗಳಿಸುವ ವಿಶ್ವಾಸ ಇದೆ.
-ಯು.ಟಿ.ಖಾದರ್, ಮಾಜಿ ಸಚಿವ
ಡಿ.ಕೆ. ಶಿವಕುಮಾರ್ ವಿಚಾರವಾಗಿ ಬಿಜೆಪಿ ಎಂದೂ ರಾಜಕೀಯ ಮಾಡಿಲ್ಲ. ವಿಚಾರಣೆ ಮಾಹಿತಿ ಗೊತ್ತಿಲ್ಲ. ಕಾಂಗ್ರೆಸ್‌ನಲ್ಲಿ ಬಹಳ ಜನರಿದ್ದಾರೆ ಅವರ ವಿರುದ್ಧ ಯಾಕೆ ಇಡಿ ವಿಚಾರಣೆ ಮಾಡ್ತಿಲ್ಲ ? ಉದ್ದೇಶಪೂರ್ವಕವಾಗಿ ಶಿವಕುಮಾರ್‌ಗೆ ತೊಂದರೆ ನೀಡುತ್ತಿದ್ದಾರೆ ಎಂಬುದನ್ನು ಒಪ್ಪುವುದಿಲ್ಲ.
-ಜೆ.ಸಿ. ಮಾಧುಸ್ವಾಮಿ, ಸಚಿವ