Advertisement

ಕರಗಿದ ಮುನಿಸು ; ದೆಹಲಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಲು ಅಕಾಲಿದಳ ನಿರ್ಧಾರ

08:26 AM Jan 30, 2020 | Hari Prasad |

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಭಾರತೀಯ ಜನತಾ ಪಕ್ಷದ ದೀರ್ಘಕಾಲದ ಮಿತ್ರ ಪಕ್ಷ ಶಿರೋಮಣಿ ಅಕಾಲಿ ದಳಕ್ಕಿದ್ದ ಮುನಿಸು ಮಾಯವಾಗಿದೆ. ಇದೀಗ ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಲು ಅಕಾಲಿ ದಳ ನಾಯಕರು ನಿರ್ಧರಿಸಿದ್ದಾರೆ. ಭಾರತೀಯ ಜನತಾ ಪಕ್ಷದ ನೂತನ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಅವರೊಂದಿಗೆ ಇಂದು ನಡೆಸಿದ ಸಂಧಾನ ಮಾತುಕತೆ ಸಫಲವಾಗಿದೆ.

Advertisement

ನಮ್ಮದು ಕೇವಲ ರಾಜಕೀಯ ಮೈತ್ರಿಯಲ್ಲ ಬದಲಾಗಿ ಇದೊಂದು ಭಾವನಾತ್ಮಕ, ಪಂಜಾಬಿನ ಶಾಂತಿ ಮತ್ತು ಭವಿಷ್ಯ ಮತ್ತು ಸಿಖ್ ಸಮುದಾಯದ ಹಿತಾಸಕ್ತಿಗಾಗಿ ರೂಪುಗೊಂಡಿರುವ ಮೈತ್ರಿ ಇದಾಗಿದೆ ಎಂದು ಅಕಾಲಿದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಅವರು ಈ ಮಹತ್ವದ ಘೋಷಣೆಯ ಬಳಿಕ ಹೇಳಿದ್ದಾರೆ.

‘ನಾವೆಂದೂ ಮೈತ್ರಿ ಮುರಿದುಕೊಂಡಿರಲಿಲ್ಲ, ಬದಲಾಗಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಲು ನಿರ್ಧರಿಸಿದ್ದೆವು. ನಾವು ಸಿಎಎಯನ್ನು ಮೊದಲಿನಿಂದಲೂ ಬೆಂಬಲಿಸಿದ್ದೆವು ಮತ್ತು ಅಫ್ಘಾನಿಸ್ಥಾನ ಮತ್ತು ಪಾಕಿಸ್ಥಾನದಲ್ಲಿ ದೌರ್ಜನ್ಯಕ್ಕೊಳಗಾಗಿ ಭಾರತಕ್ಕೆ ಬಂದಿರುವ ಸಿಖ್ಖರಿಗೆ ಪೌರತ್ವವನ್ನು ನೀಡುವಂತೆ ರಾಜನಾಥ್ ಸಿಂಗ್ ಹಾಗೂ ಅಮಿತ್ ಶಾ ಅವರಿಗೆ ನಾವು ಮನವಿಯನ್ನೂ ಸಲ್ಲಿಸಿದ್ದೆವು’ ಎಂದು ಸುಖ್ಬೀರ್ ಸಿಂಗ್ ಅವರು ಇದೇ ಸಂದರ್ಭದಲ್ಲಿ ಹೇಳುವ ಮೂಲಕ ಸಿಎಎ ವಿಚಾರದಲ್ಲಿ ಈ ಎರಡು ಮಿತ್ರಪಕ್ಷಗಳ ನಡುವೆ ಭಿನ್ನಮತ ಉಂಟಾಗಿತ್ತು ಎಂಬ ವರದಿಯನ್ನು ಅವರು ಅಲ್ಲಗಳೆದರು.

ಆದರೂ ನಮ್ಮ ನಡುವೆ ಇದ್ದ ಕೆಲವೊಂದು ಭಿನ್ನಾಭಿಪ್ರಾಯಗಳನ್ನು ಇದೀಗ ಪರಿಹರಿಸಿಕೊಂಡಿದ್ದೇವೆ ಎಂದೂ ಸಹ ಅಕಾಲಿದಳ ಮುಖ್ಯಸ್ಥ ಹೇಳಿದರು. ಹಳೆಯದಾದ ಮತ್ತು ಬಲಿಷ್ಠವಾದ ನಮ್ಮಿಬ್ಬರ ಮೈತ್ರಿ ಮತ್ತೊಮ್ಮೆ ಮರುಸ್ಥಾಪಿತಗೊಂಡಿದೆ. ಇದೀಗ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಮೈತ್ರಿ ಮತ್ತೆ ಟ್ರ್ಯಾಕ್ ಗೆ ಮರಳಿದೆ ಎಂದು ನಡ್ಡಾ ಅವರು ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next