ಹೊಳೆನರಸೀಪುರ: ತಾಲೂಕಿನ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಸಾಲ ನೀಡದೇ ರೈತರ ಕೃಷಿ ಭೂಮಿಯ ಪಹಣಿಯನ್ನು ಆಧಾರ ಮಾಡಿಕೊಂಡು ಲಕ್ಷಾಂತರ ರೂ. ಅವ್ಯವಹಾರ ಮಾಡಿದ ಪ್ರಕರಣ ತಾಲೂಕಿನ ದೊಡ್ಡಕಾಡನೂರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ರೈತರಿಗೆ ಕೃಷಿ ಸಾಲ ಮಂಜೂರಾದರೆ ಸಾಲದ ಹಣವನ್ನು ಚೆಕ್ ನೀಡಬೇಕು ಅಥವಾ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು. ಆದರೆ ಯಾವೊಬ್ಬ ರೈತರ ಖಾತೆಗೂ ಹಣ ಜಮೆ ಆಗಿಲ್ಲ.
ಕಳೆದ 2018ರ ಜನವರಿಯಲ್ಲಿ ಗ್ರಾಮದ ಸುಬ್ಬಮ್ಮ ಚನ್ನಯ್ಯ, ಕರಿನಾಯ್ಕ ಚಿಕ್ಕನಾಯ್ಕ ಬೋರೇಗೌಡ ಅಂದಾನೇ ಗೌಡ, ಗಂಗಾಧರ ಅಂದಾನೇಗೌಡ, ಲಲಿತಮ್ಮ ಚಂದ್ರೇಶಗೌಡ, ದೇವಮ್ಮ ಅಮಾಸೇನಾಯ್ಕ, ಸಿದ್ದನಾಯ್ಕ ಅಂದಾನೇಗೌಡ, ರಾಜಮ್ಮ, ನಾಗಣ್ಣ, ಹಾಗೂ ಪುಟ್ಟಮ್ಮ ಪುಟ್ಟೇಗೌಡ ಅವರ ಪಹಣಿಯಲ್ಲಿ ತಲಾ ಐವತ್ತು ಸಾವಿರಕ್ಕೆ ಆಧಾರವಾಗಿದೆ ಎಂಬುದು ದಾಖಲಾಗಿದೆ.
ಈವಿಷಯ ಗಮನಕ್ಕೆ ಬಂದ ನಂತರ ರೈತರು ಕೃಷಿ ಪತ್ತಿನ ಬ್ಯಾಂಕಿಗೆ ಹೋಗಿ ವಿಚಾರಣೆ ಮಾಡಿದರೆ ದಾಖಲೆ ಪ್ರಕಾರ ನಿಮಗೆ ಸಾಲದ ಹಣ ತಲುಪಿಸಿರು ವುದಾಗಿ ಮಾಹಿತಿ ನೀಡುವ ಅಧಿಕಾರಿ ಗಳು ಈ ಪ್ರಕರಣದಲ್ಲಿ ಯಾರೊಬ್ಬರಿಗೂ ಸಾಲದ ಹಣವನ್ನು ನೀಡಿಲ್ಲ.
ತಹಶೀಲ್ದಾರ್‌ಗೆ ದೂರು: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಕಾಡನೂರು ಗ್ರಾಮದ ಹತ್ತಾರು ಮಂದಿ ಮಂಗಳ ವಾರ ತಾಲೂಕು ಕಚೇರಿಗೆ ಆಗಮಿಸಿ ದೊಡ್ಡಕಾಡನೂರು ಕೃಷಿಪತ್ತಿನ ಬ್ಯಾಂಕು ತಮಗೆ ಸಾಲ ನೀಡಿಯೇ ಇಲ್ಲ ನಮ್ಮ ಪಹಣಿಯಲ್ಲಿ ಸಾಲ ಪಡೆದಿರುವುದಾಗಿ ದಾಖಲಾಗಿದೆ ಎಂದು ತಾಲೂಕು ಕಚೇರಿಗೆ ಆಗಮಿಸಿ ತಹಶೀಲ್ದಾರ್ ಕೆ.ಆರ್.ಶ್ರೀನಿವಾಸ್ ಅವರಿಗೆ ದೂರು ನೀಡಿ ತಮಗೆ ನ್ಯಾಯ ಕೊಡಿಸುವಂತೆ ಮನವಿ ಸಲ್ಲಿಸಿದರು.
ಸಹಕಾರ ಸಂಘಕ್ಕೆ ದೂರು ನೀಡಿ: ದೊಡ್ಡಕಾಡನೂರು ಗ್ರಾಮಸ್ಥರ ದೂರನ್ನು ಆಲಿಸಿದ ತಹಶೀಲ್ದಾರ್ ಕೆ.ಆರ್.ಶ್ರೀನಿವಾಸ್ ಜಿಲ್ಲಾ ಸಹಕಾರ ಸಂಘಗಳ ನಿರ್ದೇಶಕರಿಗೆ ದೂರವಾಣಿ ಮಾಹಿತಿ ನೀಡಿದರು. ತಮಗೆ ದೂರು ನೀಡಿದ ರೈತರನ್ನು ಜಿಲ್ಲಾ ಸಹಕಾರಿ ಸಂಘಗಳ ಕಚೇರಿಗೆ ತೆರಳಿ ದೂರು ದಾಖಲಿಸುವಂತೆ ಸೂಚಿಸಿದರು.
ಕಾರ್ಯದರ್ಶಿ ಹೇಳಿಕೆ: ಈ ಪ್ರಕರಣದ ಕುರಿತು ಸುದ್ದಿಗಾರರೊಂದಿಗೆ ಮಾತ ನಾಡಿದ ದೊಡ್ಡಕಾಡನೂರು ಕೃಷಿ ಪತ್ತಿನ ಬ್ಯಾಂಕಿನ ಕಾರ್ಯದರ್ಶಿ ಲೋಕೇಶ್ ರೈತರ ಪಹಣ ಆಧಾರದ ಮೇಲೆ ಸಾಲ ಮಂಜೂರಾಗಿರುವ ರೈತರಿಗೆ ಬ್ಯಾಂಕಿನಲ್ಲಿ ಹಣದ ಕೊರತೆ ಇದ್ದ ಕಾರಣ ಕೆಲವು ರೈತರಿಗೆ ಸಾಲದ ಹಣ ನೀಡಿಲ್ಲ ಎಂದು ಒಪ್ಪಿಕೊಂಡರು. ಈ ವರ್ಷ ಬರುವ ಹಣದಲ್ಲಿ ಬಾಕಿ ಉಳಿದಿರುವ ರೈತರಿಗೆ ಸಾಲವನ್ನು ಮಂಜೂರು ಮಾಡುವುದಾಗಿ ಹೇಳಿದರು.
ಈ ಬಗ್ಗೆ ಸಹಕಾರ ಸಂಘಗಳ ಆಯುಕ್ತರು ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಾನೂನು ಕ್ರಮ ಜರುಗಿಸುವಂತೆ ಸಾಲ ಪಡೆಯದ ಫಲಾನುಭವಿಗಳು ಆಗ್ರಹಿಸಿದ್ದಾರೆ.