Advertisement

ಅಧಿಕಾರಿಗಳ ಎಡವಟ್ಟು

02:39 PM Mar 06, 2020 | Suhan S |

ನರೇಗಲ್ಲ: ರಾಜ್ಯ ಸರ್ಕಾರ ರೈತರ ಆರ್‌ ಟಿಸಿ ಉತಾರ (ಪಹಣಿ) ಪತ್ರಿಕೆಯಲ್ಲಿ ಮುಂಗಾರು-ಹಿಂಗಾರು ಬೆಳೆಗಳನ್ನು ದಾಖಲಿಸುವ ಉದ್ದೇಶದಿಂದ ಬೆಳೆ ಸಮೀಕ್ಷೆ ಆ್ಯಪ್‌ ಜಾರಿಗೊಳಿಸಿತ್ತು. ಆದರೆ, ಕಂದಾಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಹಣಿಯಲ್ಲಿ ಹೊಲಗಳಲ್ಲಿ ಬೆಳೆದ ಬೆಳೆಯೇ ಬೇರೆ ನಮೂದಾಗಿರುವುದೇ ಬೇರೆಯಾಗಿದ್ದು, ರೈತರಿಗೆ ದೊಡ್ಡ ತಲೆನೋವಾಗಿದೆ.

Advertisement

ಇದರಿಂದ ಹೋಬಳಿ ವ್ಯಾಪ್ತಿಯ ರೈತರು ಕಡಲೆಕಾಳುಗಳನ್ನು ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ಪ್ರಸಕ್ತ ವರ್ಷದ ಮುಂಗಾರು ಬೆಳೆ ಕೈಕೊಟ್ಟ ಹಿನ್ನೆಲೆಯಲ್ಲಿ ರೈತರು ಹಿಂಗಾರು ಪ್ರಮುಖ ಬೆಳೆಯಾದ ಕಡಲೆಯತ್ತ ಉತ್ಸಾಹ ತೋರಿದ್ದರು. ರೈತರ ಆಸೆಯಂತೆಯೇಕಡಲೆ ಬೆಳೆ ಉತ್ತಮವಾಗಿ ಬಂದಿದೆ. ಆದರೆ, ಸರ್ಕಾರಗಳ ನಿರ್ಧಾರದಿಂದ ಕಡಲೆ ಬೆಂಬಲ ಬೆಲೆ ಕೇಂದ್ರ ಸ್ಥಾಪಿಸಲು ಜಿಲ್ಲಾಡಳಿತ ಮತ್ತು ಸರ್ಕಾರಗಳಲ್ಲಿ ಸ್ವಲ್ಪ ಹಿನ್ನಡೆಯಾಗಿದೆ.

ರೈತರ ಹೋರಾಟಗಳು, ಉಪವಾಸ ಸತ್ಯಾಗ್ರಹದಂತಹ ಹಲವು ಪ್ರತಿಭಟನೆಗಳಿಗೆ ಮಣಿದ ಸರ್ಕಾರ ತಡ ಮಾಡಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿವೆ. ಆದರೆ, ಖರೀದಿ ಕೇಂದ್ರದಲ್ಲಿರುವ ಕಾನೂನು ಮತ್ತು ಷರತ್ತುಗಳು ರೈತರಿಗೆ ನುಂಗಲಾರದ ತುತ್ತಾಗಿವೆ. ಬೆಳೆ ದೃಢೀಕರಣ, ಖಾತೆ ಉತಾರ, ಪಹಣಿಯಲ್ಲಿ ಹಿಂಗಾರು ಬೆಳೆ ಕಡಲೆ ಎಂದು ನಮೂದಾಗಿರುವ ಉತಾರ ತಗೆದುಕೊಂಡು ಕಡಲೆ ಬೆಳೆ ಮಾರುವ ಅನಿವಾರ್ಯತೆಯನ್ನು ಸರ್ಕಾರ ಮತ್ತು ಜಿಲ್ಲಾಡಳಿತ ನಿರ್ಮಿಸಿದೆ.

ಹೋಬಳಿ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷದ ಹಿಂಗಾರು ಹಂಗಾಮಿನಲ್ಲಿ ಅಬ್ಬಿಗೇರಿ, ಯರೇಬೇಲೇರಿ, ಕುರುಡಗಿ, ನಾಗರಾಳ, ಗುಜಮಾಗಡಿ, ಡ.ಸ. ಹಡಗಲಿ, ಬೂದಿಹಾಳ, ಮಾರನಬಸರಿ, ಹೊಸಳ್ಳಿ, ಕಳಕಾಪುರ, ಹಾಲಕೆರೆ, ನಿಡಗುಂದಿಕೊಪ್ಪ, ನಿಡಗುಂದಿ, ಜಕ್ಕಲಿ, ಕೋಡಿಕೊಪ್ಪ, ಕೋಚಲಾಪುರ, ದ್ಯಾಂಪುರ, ಮಲ್ಲಾಪುರ, ನರೇಗಲ್ಲ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಒಟ್ಟು 22 ಸಾವಿರ ಹೆಕ್ಟೇರ್‌ ಬಿತ್ತನೆಯಾಗುತ್ತು. ಆದರೆ, ಕಂದಾಯ ಇಲಾಖೆ ಅಧಿಕಾರಿಗಳು ಬೆಳೆ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಬೆಳೆ ಮಾಹಿತಿ ತಪ್ಪಾಗಿ ದಾಖಲಿಸಿರುವುದರಿಂದ ವಿವಿಧ ಇಲಾಖೆಗೆ ರೈತರು ಅಲೆಯುತ್ತಿದ್ದಾರೆ.

ಕೈ ಸಿಗದ ತಲಾಟಿಗಳು : ಬೆಳೆ ಸಮೀಕ್ಷೆಯಲ್ಲಿ ರೈತರು ಬೆಳೆದ ಬೆಳೆಗಳನ್ನು ಬಿಟ್ಟು ಬೇರೆ ಬೆಳೆಗಳ ಹೆಸರು ನಮೂದಿಸಲಾಗಿದೆ. ಇದರಿಂದ ರೈತರು ಕಡಲೆ ಕೇಂದ್ರದಲ್ಲಿ ತೊಂದರೆ ಅನುಭವಿಸುತ್ತಿದ್ದು, ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ, ಕೃಷಿ ಇಲಾಖೆ, ಉಪತಹಶೀಲ್ದಾರ್‌, ತಹಶೀಲ್ದಾರ ಸೇರಿದಂತೆ ವಿವಿಧ ಕಚೇರಿಗಳಿಗೆ ಅಲೆದಾಡಿ ಹಣ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ.

Advertisement

ಜಿಲ್ಲಾಧಿಕಾರಿ ಭರವಸೆ: ನರೇಗಲ್ಲ ಹೋಬಳಿ ವ್ಯಾಪ್ತಿಯಲ್ಲಿ ರೈತರ ಪಹಣಿಯಲ್ಲಿ ಬೆಳೆಗಳು ಬೇರೆ, ಬೇರೆ ನಮೂದಾಗಿರುವುದು ಗಮನಕ್ಕೆ ಬಂದಿದೆ. ಅದಕ್ಕೆ ಪರಿಹಾರವಾಗಿ ಸೂಕ್ತ ವ್ಯವಸ್ಥೆ ಕಲ್ಪಿಸುವ ಬಗ್ಗೆ ಜಿಲ್ಲಾಧಿಕಾರಿಗಳುಕ್ರಮ ಕೈಗೊಳ್ಳುತ್ತಿದ್ದಾರೆನ್ನುವ ಮಾತುಗಳು ಅಧಿಕಾರಿಗಳಿಂದ ಕೇಳಿಬರುತ್ತಿವೆ.

ಬೆಳೆ ದೃಢೀಕರಣಕ್ಕೆ ಸಕಾಲ ಅವಧಿ ಅಡ್ಡ: ರೈತರು ಕಡಲೆ ಬೆಳೆಯನ್ನು ಖರೀದಿ ಕೇಂದ್ರಕ್ಕೆ ನೀಡುವ ಅವಸರದಲ್ಲಿದ್ದಾರೆ. ಆದರೆ, ಸರ್ಕಾರದ ಆದೇಶದಂತೆ ಬೆಲೆದೃಢೀಕರಣ ಮತ್ತು ಖಾತೆ ಉತಾರಕ್ಕೆ ಸಕಾಲ ಅವಧಿ ಅಡ್ಡವಾಗಿದ್ದು, ರೈತರು ಮತ್ತೆ ದಲ್ಲಾಳಿಗಳ ಅಂಗಡಿಗಳತ್ತ ಮುಖ ಮಾಡುತ್ತಿದ್ದಾರೆ. ಒಟ್ಟಾರೆ ರೋಣ ತಾಲೂಕಿನ ಕೃಷಿ ಇಲಾಖೆ ಅಧಿಕಾರಿಗಳಲ್ಲಿ ರೈತರು ತಮ್ಮ ಸಮಸ್ಯೆ ಪರಿಹಾರಕ್ಕಾಗಿ ಕಚೇರಿಗೆ ಹೋದರೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಇದು ನಮ್ಮ ಇಲಾಖೆಗೆ ಬರುವುದಿಲ್ಲ. ನೀವು ಗ್ರಾಮ ಲೆಕ್ಕಾಧಿಕಾರಿಗಳಿಗೆ ಭೇಟಿ ಮಾಡಿ ಎಂದು ಹೇಳಿ ಜಾರಿಕೊಳ್ಳುತ್ತಿದ್ದು, ಅಕ್ಷರಶಃ ರೈತರು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.

ಇಲಾಖೆಯಿಂದ ಹಿಂಗಾರು ಹಂಗಾಮಿನಲ್ಲಿ ಮಾಡಿದ ಬೆಳೆ ಸಮೀಕ್ಷೆಯಲ್ಲಿ ಕೆಲವೊಂದು ಗ್ರಾಮಗಳಲ್ಲಿ ರೈತರು ಬೆಳೆದ ಬೆಳೆಗಳು ತಪ್ಪಾಗಿ ಮುದ್ರಣಗೊಂಡಿವೆ. ಇದರ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಜಿಲ್ಲಾಧಿಕಾರಿ ಆದೇಶದಂತೆ ಕಡಲೆ ಬೆಳೆಗಾರರಿಗೆ ಅನುಕೂಲ ಮಾಡಲಾಗುವುದು.- ಜಿ.ಬಿ. ಜಕ್ಕನಗೌಡ್ರ, ತಹಶೀಲ್ದಾರ್‌, ರೋಣ

ಪಹಣಿಯಲ್ಲಿ ನಾವು ಬೆಳೆದ ಕಡಲೆ ಬೆಳೆ ಬರಬೇಕಾಗಿತ್ತು. ಆದರೆ, ಕಂದಾಯ-ಕೃಷಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಮ್ಮ ಜಮೀನಿನಲ್ಲಿ ಯಾವುದೇ ಬೆಳೆ ಇಲ್ಲ ಎಂದು ಬರುತ್ತಿದೆ. ಅದನ್ನು ಸರಿಪಡಿಸುವ ಉದ್ದೇಶದಿಂದ ರೋಣ ಮತ್ತು ನರೇಗಲ್ಲ ಉಪತಹಶೀಲ್ದಾರ್‌ ಕಚೇರಿಗೆ ಸಾಕಷ್ಟು ಬಾರಿ ಅಲೆದರೂ ಪ್ರಯೋಜನವಾಗುತ್ತಿಲ್ಲ. –ಮಂಜುನಾಥ ಚೌಡರ, ರೈತ, ಅಬ್ಬಿಗೇರಿ ಗ್ರಾಮ

 

-ಸಿಕಂದರ ಎಂ. ಆರಿ

Advertisement

Udayavani is now on Telegram. Click here to join our channel and stay updated with the latest news.

Next