Advertisement

ಕಸ ಘಟಕ ನಿರ್ವಹಣೆ ಲೋಪ

03:12 PM Nov 15, 2020 | Suhan S |

ಬೆಂಗಳೂರು: ಪಾಲಿಕೆಯ ಪ್ರಮುಖ ಹಸಿಕಸ ಸಂಸ್ಕರಣಾ ಘಟಕಗಳಲ್ಲಿ ಒಂದಾಗಿರುವ ಚಿಕ್ಕನಾಗಮಂಗಲ ಘಟಕದ ನಿರ್ವಹಣೆ ಲೋಪದಿಂದ ಸ್ಥಳೀಯರು ಸಮಸ್ಯೆ ಎದುರಿಸುತ್ತಿದ್ದಾರೆ.

Advertisement

ಚಿಕ್ಕನಾಗಮಂಗಲ ಸಂಸ್ಕರಣಾ ಘಟಕ್ಕೆ ಕಸ ಸಾಗಿಸುವ ಮಾರ್ಗದಲ್ಲಿ ಲಿಚೆಟ್‌ (ಹಸಿಕಸದಿಂದ ಉತ್ಪತ್ತಿಯಾಗುವ ಕೊಳಚೆ) ನೀರು ರಸ್ತೆಯಲ್ಲೇ ಹರಿಯುತ್ತಿದೆ. ಅಲ್ಲದೆ, ಘಟಕದಿಂದ ಉತ್ಪತ್ತಿಯಾಗುತ್ತಿರುವ ಲಿಚೆಟ್‌ ಸಂಸ್ಕರಿಸಲುನಿರ್ದಿಷ್ಟ ವ್ಯವಸ್ಥೆ ಇಲ್ಲ. ಘಟಕದ  ಪಕ್ಕದಲ್ಲೇ ಇರುವ ಹೊಂಡಕ್ಕೆ ಬಿಡಲಾಗುತ್ತಿದೆ. ಈ ಘಟಕಕ್ಕೆ ಹೆಚ್ಚು ಹಸಿಕಸ ಬರುತ್ತಿರುವ ಹಿನ್ನೆಲೆಯಲ್ಲಿ ಘಟಕದಲ್ಲಿನ ಶೆಡ್ಸ್‌ಗಳು ತುಂಬುತ್ತಿದ್ದು, ದುರ್ನಾತ ಹೆಚ್ಚಾಗಿದೆ.

ಇನ್ನು ನಗರದಲ್ಲಿ ಕಸ ವಿಂಗಡಣೆ ಪ್ರಮಾಣ ಹೆಚ್ಚಾಗಿದೆ. ಆದರೆ, ಹಸಿಕಸ ಸಂಸ್ಕರಣಾ ಘಟಕಗಳ ನಿರ್ವಹಣೆಯ ವಿಚಾರದಲ್ಲಿ ಪಾಲಿಕೆ ಎಡವುತ್ತಿದೆ. ಈ ಹಿಂದೆ ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುತ್ತಿದ್ದ ಹಸಿಕಸವನ್ನು ಏಳು ಹಸಿಕಸ ಸಂಸ್ಕರಣಾ ಘಟಕಗಳಿಗೆ ಸಾಗಿಸಲಾಗುತ್ತಿತ್ತು. ಇದರಲ್ಲಿ ಮೂರು ಹಸಿಕಸ ಸಂಸ್ಕರಣಾಘಟಕಗಳು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಚಿಕ್ಕನಾಗಮಂಗಲ, ಕನ್ನಹಳ್ಳಿ, ದೊಡ್ಡಬಿದರಕಲ್ಲು ಹಾಗೂ ಕೆಸಿಡಿಸಿ ಹಸಿಕಸ ಸಂಸ್ಕರಣಾಘಟಕಗಳಿಗೆ ಹೆಚ್ಚು ಹಸಿಕಸ ಸಾಗಾಣಿಕೆಯಾಗುತ್ತಿದೆ. ಹೀಗಾಗಿ, ಈ ಭಾಗ ಹಳ್ಳಿಗಳ ಸುತ್ತಮತ್ತಲಿನ ಪ್ರದೇಶದಲ್ಲಿ ಹಸಿಕಸ ಸಾಗಿಸುವ ಕಾಂಪ್ಯಾಕ್ಟರ್‌ಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ವಿಲೇವಾರಿ ಲೋಪ ಎದ್ದು ಕಾಣುತ್ತಿದೆ.

ಲಿಚೇಟ್‌ ನೀರಿನಿಂದ ದುರ್ನಾತ: ಚಿಕ್ಕನಾಗಮಂಗಲ ಹಸಿಕಸ ಸಂಸ್ಕರಣೆ ಘಟಕದಲ್ಲಿ ಕಸದಿಂದ ಉತ್ಪತ್ತಿಯಾಗುವ ಲಿಚೆಟ್‌ ನೀರು ನೇರವಾಗಿ ಹೊರಕ್ಕೆ ಹರಿಸಲಾಗುತ್ತಿದ್ದು, ಇದರಿಂದ ಸ್ಥಳೀಯರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥತಿ ಸೃಷ್ಟಿಯಾಗಿದೆ. ಅಲ್ಲದೆ, ಇಲ್ಲಿನ ಗೊಳಮಂಗಲ ಕೆರೆಗೂ ಕೊಳಚೆ ನೀರು ಸೇರುವ ಆತಂಕ ಸೃಷ್ಟಿಯಾಗುತ್ತಿದ್ದು, ಅಂತರ್ಜಲ ಕಲುಷಿತಗೊಳ್ಳುವ ಸಾಧ್ಯತೆ ಇದೆ.

22 ಸಾವಿರ ಮೆ.ಟನ್‌ ಸಂಸ್ಕರಿತ ತ್ಯಾಜ್ಯ ಬಾಕಿ: ಚಿಕ್ಕನಾಗಮಂಗಲ ಹಸಿಕಸ ಸಂಸ್ಕರಣಾ ಘಟಕದಲ್ಲಿ ಈಗಾಗಲೇ ಸಂಸ್ಕರಣೆಯಾಗಿರುವ (ಹಸಿಕಸ ಗೊಬ್ಬರವಾಗಿ ಪರಿವರ್ತಿಸಿದ ಮೇಲೆ ಉಳಿಯುವ ತ್ಯಾಜ್ಯ) ಎರಡನೇ ಹಂತದ ಗೊಬ್ಬರದ ಪ್ರಮಾಣವೇ 22 ಸಾವಿರ ಮೆ.ಟನ್‌ನಷ್ಟಿದೆ. ಮಳೆಬಿದ್ದ ಸಂದರ್ಭದಲ್ಲಿ ಈ ಗೊಬ್ಬರದೊಂದಿಗೆ ಸೇರಿ ನೀರುಘಟಕದಿಂದ ರಸ್ತೆಗೆ ಹರಿಯುತ್ತಿದ್ದು ಸಹಿಸಲಾಗದ ದುರ್ನಾತ ಉಂಟಾಗಿದೆ.

Advertisement

ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ :  ಚಿಕ್ಕನಾಗಮಂಗಲ ಘಟಕದ ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಸಂಸ್ಕರಿತ ತ್ಯಾಜ್ಯ ವಿಲೇವಾರಿಗೆ ಸರ್ಕಾರದ ಮಟ್ಟದಲ್ಲಿ ಅನುಮತಿ ಪಡೆಯಲಾಗಿದೆ. ಈ ಸಂಬಂಧ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೂ ಪತ್ರ ಬರೆದು ಅನುಮತಿ ಕೇಳಲಾಗುವುದು. ಮುಚ್ಚಿರುವ ಘಟಕಗಳ ಪ್ರಾರಂಭಿಸಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಘನತ್ಯಾಜ್ಯ ನಿರ್ವಹಣೆಯ ವಿಶೇಷ ಆಯುಕ್ತ ಡಿ. ರಂದೀಪ್‌ ತಿಳಿಸಿದರು.

ಪಾಲಿಕೆ ಪಾರದರ್ಶಕತೆಕಾಪಾಡಿಕೊಳ್ಳಲಿ : ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಈ ಭಾಗದಲ್ಲಿ 50 ಮಿ. ವ್ಯಾಪ್ತಿಯಲ್ಲಿ ಅಂತರ್ಜಲ ಗುಣಮಟ್ಟ ಪರಿಶೀಲನೆ ಮಾಡುವಂತೆ ಜೂನ್‌ನಲ್ಲೇ ಆದೇಶ ಮಾಡಿದೆ. ಆದರೆ ಪಾಲಿಕೆಕ್ರಮಕೈಗೊಂಡಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಸ್ಥಳೀಯ ನಿವಾಸಿ ದೀಪು ಚಂದ್ರನ್‌ ಆರೋಪಿಸಿದರು. ಅಲ್ಲದೆ, ಘಟಕದ ನಿರ್ವಹಣೆಯ ಬಗ್ಗೆ ನೋಡಲು ಸ್ಥಳೀಯರಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಕಳೆದ ಮೂರು ತಿಂಗಳಿನಿಂದ ಕಸ ಸಾಗಿಸುವ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಮಸ್ಯೆ ಆಗುತ್ತಿದೆ.ಕೊಳಚೆ ನೀರು ಸಂಸ್ಕರಣೆ ಮಾಡದೆ ಬಿಡಲಾಗುತ್ತಿದೆ. ವಿಜಯ್‌ ಸ್ಥಳೀಯ ನಿವಾಸಿ.

ಹಸು ಮತ್ತು ಎಮ್ಮೆಗಳಿಗೆ ನೀರು ಕುಡಿಸಲು ಚಿಕ್ಕನಾಗಮಂಗಲದ ಹೊಂಡದಲ್ಲಿನ ನೀರು ಬಳಸಲಾಗುತ್ತಿತ್ತು. ವರ್ಷದಿಂದ ಲಿಚೆಟ್‌ ನೀರು ಹೊಂಡಕ್ಕೆ ಬಿಡುತ್ತಿರುವ ಕಾರಣ ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗಿದೆ. – ಲೋಕೇಶ್‌ ರೆಡ್ಡಿ, ಸ್ಥಳೀಯ ನಿವಾಸಿ

 

ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next