Advertisement

ಮಿಷನ್‌ ಸಾಹಸಿ ಅಭಿಯಾನಕ್ಕೆ ಚಾಲನೆ

12:01 PM Dec 10, 2019 | Suhan S |

ಬೀದರ: ವಿದ್ಯಾರ್ಥಿನಿಯರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಎಬಿವಿಪಿಯಿಂದ ಕಾಲೇಜು ವಿದ್ಯಾರ್ಥಿನಿಯರಿಗಾಗಿ ಮಿಷನ್‌ ಸಾಹಸಿಹೆಸರಿನಲ್ಲಿ ಹತ್ತು ದಿನಗಳ ಉಚಿತ ಕರಾಟೆ ತರಬೇತಿ ಮತ್ತು ಸಾಹಸ ಪ್ರದರ್ಶನ ಆಯೋಜಿಸಿದ್ದು, ಸೋಮವಾರ ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಭಿತ್ತಿಪತ್ರ ಬಿಡುಗಡೆ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

Advertisement

ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ರೇವಣಸಿದ್ದ ಜಾಡರ ಚಾಲನೆ ನೀಡಿ ಮಾತನಾಡಿ, ದೇಶದಲ್ಲಿ ಹೆಣ್ಣನ್ನು ದೇವಿ ರೂಪದಲ್ಲಿ ಪೂಜಿಸಲಾಗುತ್ತದೆ. ಇನ್ನೊಂದೆಡೆ ಸಮಾಜದಲ್ಲಿ ನಿರಂತರ ಅತ್ಯಾಚಾರ, ದೌರ್ಜನ್ಯ, ಶೋಷಣೆ ಹೆಚ್ಚುತ್ತಿದೆ. ಇದರ ನಿಯಂತ್ರಣ ಕೇವಲ ಸರ್ಕಾರ, ಕಾನೂನು, ಪೋಲಿಸರಿಂದ ಮಾತ್ರ ಸಾಧ್ಯವಿಲ್ಲ. ಸಮಾಜದ ಪಾತ್ರವೂ ಇಲ್ಲಿ ಪ್ರಮುಖವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವಿಡಿಯೋ ಪ್ರದರ್ಶನ ಇಂದಿನ ಯುವಶಕ್ತಿಯ ಮನಸನ್ನು ವಿಕೃತಿ ಗೊಳಿಸುವುದರೊಂದಿಗೆ ಅನೇಕ ದುರ್ಘ‌ಟನೆಗಳಿಗೆ ಕಾರಣವಾಗಿದ್ದು, ಕೂಡಲೇ ನಿರ್ಬಂಧಿ ಸಬೇಕಿದೆ. ಮನೆಯಲ್ಲಿ ತಂದೆತಾಯಿ ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕಿದೆ. ಆಗ ಮಾತ್ರ ಸಶಕ್ತ ನಾರಿಯರಿಂದ ಸಶಕ್ತ ಸಮಾಜದ ನಿರ್ಮಾಣ ಸಾಧ್ಯ ಆಗಲಿದೆ ಎಂದರು.

ಎಬಿವಿಪಿ ನಗರ ಉಪಾಧ್ಯಕ್ಷ ನಾಗೇಶ ಬಿರಾದಾರ ಮಾತನಾಡಿ, ಆತ್ಮರಕ್ಷಣೆ ಎಂಬುದು ಸ್ತ್ರೀ, ಪುರುಷರ ಕರ್ತವ್ಯ. ಆತ್ಮ ರಕ್ಷಣೆಯ ವಿದ್ಯೆಯು ಬಹಳ ಹಿಂದಿನ ಕಾಲದಿಂದಲೂ ಪ್ರಚಲಿತದಲ್ಲಿದೆ. ಕರಾಟೆ ಕಲಿಯುವ ಮೂಲಕ ಮಹಿಳೆ ಕೂಡ ನಿರ್ಭಯ ಮತ್ತು ಆತ್ಮವಿಶ್ವಾಸದಿಂದ ಬದುಕಲು ಸಾಧ್ಯ. ಉಚಿತ ಕರಾಟೆ ತರಬೇತಿಯು ಪ್ರತಿದಿನ ಬೆಳಗ್ಗೆ 8:30ರಿಂದ 9:30ರ ವರೆಗೆ ನಡೆಯಲಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ| ವಿಠಲದಾಸ ಪ್ಯಾಗೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾತಂತ್ರ್ಯದ ಹೆಸರಿನಲ್ಲಿ ಮನಬಂದಂತೆ ವರ್ತಿಸುತ್ತಿರುವುದು ಅನಾಗರಿಕತನ. ಇದರಿಂದ ಸಮಾಜದಲ್ಲಿ ಅನೇಕ ಅಹಿತಕರ ಘಟನೆ ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಾಚಾರ್ಯ ಪ್ರೊ| ಗಂಗಾಶೆಟ್ಟೆ, ಜಿಲ್ಲಾ ವಿದ್ಯಾರ್ಥಿನಿ ಪ್ರಮುಖ ಚೈತನ್ಯ ಭಾಗವರ್‌, ನಗರ ಸಹ ಕಾರ್ಯದರ್ಶಿನಿ ಆಶಾ ಧನ್ನುರತಾಂಡಾ, ನಗರ ಕಾರ್ಯದರ್ಶಿ ವಿಕಾಸ ಚೋರಮಲ್ಲೆ, ವೀರೇಶ ರೇಕುಳಗಿ, ಪ್ರವೀಣ ರೇಕುಳಗಿ ವೇದಿಕೆಯಲ್ಲಿದ್ದರು. ಮಮತಾ ಭಂಡಾರೆ ಸ್ವಾಗತಿಸಿದರು. ಅರವಿಂದ ಸುಂದಾಳಕರ್‌ ನಿರೂಪಿಸಿದರು. ವಚನಶ್ರೀ ಬಾಬಶೆಟ್ಟೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next