ಮೂಡಿಗೆರೆ: “ಮಿಷನ್ ಸಾಹಸಿ’ ಕಾರ್ಯಕ್ರಮ ಹೆಣ್ಣು ಮಕ್ಕಳಿಗೆ ಪೂರಕವಾಗಿದೆ. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ವಿರೋಧಿ ಹಾಗೂ ಆತ್ಮ ರಕ್ಷಣೆ ಕಾರ್ಯಕ್ರಮಗಳ ಬೆಂಗಾವಲಾಗಿದೆ ಎಂದು ಸ್ಥಳೀಯರಾದ ಕನ್ನಡ ಚಿತ್ರನಟ ರವಿತೇಜ ಹೊಸಕೆರೆ ಹೇಳಿದರು.
ಅಖೀಲ ಭಾರತ ವಿದ್ಯಾರ್ಥಿ ಪರಿಷತ್ ಪಟ್ಟಣದ ಜೆಸಿಐ ಸಭಾಂಗಣದಲ್ಲಿ ಆಯೋಜಿಸಿದ್ದ “ಮಿಷನ್ ಸಾಹಸಿ’ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹೆಣ್ಣುಮಕ್ಕಳು ಜನ್ಮತಃ ಧೈರ್ಯಶಾಲಿಗಳು. ಆದರೆ, ಸಮಾಜದಲ್ಲಿ ಅವರ ಮೇಲೆ ನಿರಂತರವಾಗಿ ಆಗುತ್ತಿರುವ ಶೋಷಣೆಗಳಿಂದಾಗಿ ತಮ್ಮ ಧೈರ್ಯ ಪ್ರದರ್ಶಿಸಲು ಹಿಂದೇಟು ಹಾಕುತ್ತಿದ್ದಾರೆ. ಒಬ್ಬ ಹೆಣ್ಣು ಮಗಳು ವಿವಿಧ ಆಯಾಮಗಳಲ್ಲಿ ತನ್ನ ಪಾತ್ರಗಳನ್ನು ಜವಾಬ್ದಾರಿಯುತವಾಗಿ ನಿರ್ವಹಣೆ ಮಾಡುತ್ತಾಳೆ. ಹಣ್ಣುಮಕ್ಕಳನ್ನು ತಾಯಿಗೆ ಹೋಲಿಕೆ ಮಾಡಿ ಗೌರವಿಸುವ ಸಂಸ್ಕೃತಿ ನಮ್ಮದು. ಹೈದರಾಬಾದ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣ ಎಲ್ಲರೂ ತಲೆ ತಗ್ಗಿಸಬೇಕಾದ ಕೃತ್ಯ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾಜದ ಕೆಲವು ಘಾತುಕ ಶಕ್ತಿಗಳಿಂದ ಆಗುವ ದೌರ್ಜನ್ಯದಿಂದಾಗಿ ವಿಶ್ವದ ಎದುರು ತಲೆ ತಗ್ಗಿಸುವಂತಾಗಿದೆ. ಎಲ್ಲರೂ ಸಮಾನ ಮನಸ್ಕರಾಗಿ ಇಂತಹ ಕೆಟ್ಟ ಘಟನೆಗಳ ವಿರುದ್ಧ ಹೋರಾಡಬೇಕು ಎಂದರು. ಹೆಣ್ಣುಮಕ್ಕಳು ಸಮಾಜದಲ್ಲಿ ಮುಂದೆ ಬರುವುದರ ಭರದಲ್ಲಿ ತಮ್ಮ ಸಂಸ್ಕೃತಿಯನ್ನು ಕಡೆಗಣಿಸಬಾರದು. ಪ್ರಾಕೃತಿಕವಾಗಿ ತಮಗೆ ಇರುವ ಇತಿಮಿತಿಗಳನ್ನು ಅರಿತು ಮುಂದುವರೆಯುವುದು ಎಲ್ಲಾ ದೃಷ್ಟಿಯಿಂದ ಒಳಿತು. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಳ್ಳುವುದನ್ನು ಕಡಿಮೆ ಮಾಡಬೇಕು. ಅಪರಿಚಿತ ವ್ಯಕ್ತಿಗಳ ಬಳಿ ತಮ್ಮ ಖಾಸಗಿ ವಿಚಾರಗಳನ್ನು ಹಂಚಿಕೊಳ್ಳುವುದನ್ನು ಮಾಡಬಾರದು. ಹೆಣ್ಣು ಮಕ್ಕಳು ಕ್ಲಿಷ್ಟಕರ ಸನ್ನಿವೇಶಗಳನ್ನು ಎದುರಿಸಲು ಆತ್ಮ ರಕ್ಷಣೆ ಮಾಡಿಕೊಳ್ಳುವಂತಹ ಕಲೆಗಳನ್ನು ಕಲಿಯಬೇಕು. ಮಿಷನ್ ಸಾಹಸಿ ಇಂತಹ ಕಾರ್ಯಗಳಿಗೆ ವೇದಿಕೆ ಕ್ಲಪಿಸಿ ಕೊಡುತ್ತಿದೆ. ಇದೊಂದು ಉತ್ತಮ ಪ್ರಯತ್ನ. ಇಂತಹ ಕಾರ್ಯಗಳು ಎಲ್ಲೆಡೆ ನಡೆಯಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದೀಕ್ಷಿತ್ ಅವರು, 1949ರ ಜುಲೈ 9ರಂದು ಸ್ಥಾಪನೆಯಾದ ಅಖೀಲ ಭಾರತ ವಿದ್ಯಾರ್ಥಿ ಪರಿಷತ್, ಹಲವಾರು ಚಳವಳಿಗಳಲ್ಲಿ ಭಾಗವಹಿಸಿ ತನ್ನದೇ ಆದ ಸೇವೆ ಮಾಡುತ್ತ ಬಂದಿದೆ. ಇದರ ಯಶಸ್ಸು ಇಂದು ಹೆಚ್ಚು ಹೆಚ್ಚು ವಿದ್ಯಾರ್ಥಿಗಳನ್ನು ತರಬೇತು ಮಾಡಿ ದೇಶಕ್ಕೆ ಕೊಡುಗೆ ನೀಡುವ ಕಾರ್ಯದಲ್ಲಿ ನಿರತವಾಗಿದೆ. ನಾಯಕತ್ವದ ಗುಣ, ಅನ್ಯಾಯಗಳ ವಿರುದ್ಧ ಪ್ರತಿಭಟಿಸುವುದು ಸೇರಿದಂತೆ ಸಮಾಜಮುಖೀ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ವಾಸು ಅವರು ವಿದ್ಯಾರ್ಥಿನಿಯರಿಗೆ ಕರಾಟೆ ಮಾಡಿಸುವ ಮೂಲಕ ಆತ್ಮರಕ್ಷಣೆ ಕಲೆಗಳ ಮಹತ್ವ ತಿಳಿಸಿಕೊಟ್ಟರು. ವೇದಿಕೆಯಲ್ಲಿ ಎಬಿವಿಪಿ ಜಿಲ್ಲಾ ವಿದ್ಯಾರ್ಥಿನಿ ಪ್ರಮುಖ ಬೆಟ್ಟಗೆರೆ ಕೀರ್ತನಾ, ಜಿಲ್ಲಾ ವಿದ್ಯಾರ್ಥಿ ಪ್ರಮುಖ್ ಗುತ್ತಿ ಶಶಾಂಕ್, ನಗರ ಕಾರ್ಯದರ್ಶಿ ಲೋಕವಳ್ಳಿ ಸ್ವಾತಿ ಇದ್ದರು. ಕೆಂಜಿಗೆ ಪ್ರಾಪ್ತಿ ಸ್ವಾಗತಿಸಿ, ನಿಶ್ಚಿತ ಪ್ರಾರ್ಥಿಸಿ, ಹೇಮಾ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಸ್ಥಳೀಯರು ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.