ಹೊಸದಿಲ್ಲಿ: ಇತ್ತೀಚೆಗಷ್ಟೇ ಉಪಗ್ರಹ ನಿಗ್ರಹ ತಂತ್ರಜ್ಞಾನವನ್ನು (ಮಿಷನ್ ಶಕ್ತಿ) ಅಳವಡಿಸಿಕೊಂಡು ಮಿಂಚಿದ ಭಾರತ, ಇದೀಗ ಶತ್ರು ರಾಷ್ಟ್ರಗಳ ರೇಡಾರ್‌ಗಳಿರುವ ತಾಣಗಳನ್ನು ಪತ್ತೆ ಹಚ್ಚುವ ಕೆಲಸಕ್ಕಾಗಿ ವಿಶೇಷ ಉಪಗ್ರಹ “ಎಮಿಸ್ಯಾಟ್’ ಅನ್ನು ಉಡಾವಣೆ ಮಾಡಲು ಮುಂದಾಗಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೋ) ವತಿಯಿಂದ ಎ. 1ರಂದು ಹಾರಿಬಿಡಲಾಗುವ ಈ ಉಪಗ್ರಹ ಉಡಾವಣೆ ಪ್ರಕ್ರಿಯೆ ಹಿಂದಿನ ಎಲ್ಲಾ ಉಡಾವ ಣೆಗಳಿಗಿಂತ ವಿಭಿನ್ನವಾಗಿರಲಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ತಿಳಿಸಿದ್ದಾರೆ.
ಉಡಾವಣೆ ಹೇಗೆ ವಿಭಿನ್ನ?: ರೇಡಾರ್ ಮಾಪಕ ಉಪಗ್ರಹದ ಜತೆಗೆ ಇನ್ನೂ 28 ಉಪಗ್ರಹಗಳು ಅಂತರಿಕ್ಷಕ್ಕೆ ಚಿಮ್ಮಲಿದ್ದು, ಈ ವಿದ್ಯಮಾನವನ್ನು ಕಣ್ತುಂಬಿಕೊಳ್ಳಲು ಇದೇ ಮೊದಲ ಬಾರಿಗೆ ಸಾರ್ವಜನಿಕರಿಗೆ ಇಸ್ರೋ ಅವಕಾಶ ಕಲ್ಪಿಸಿದೆ. ಇನ್ನೊಂದೆಡೆ, ಈ ಬಾರಿ ಅಂತರಿಕ್ಷಕ್ಕೆ ಉಡಾವಣೆಗೊಳ್ಳುವ ಉಪಗ್ರಹಗಳನ್ನು ಒಂದೇ ಪ್ರಯತ್ನದಲ್ಲಿ ಮೂರು ವಿಭಿನ್ನ ಕಕ್ಷೆಗಳಲ್ಲಿ ಕೂರಿಸಲಾಗುತ್ತದೆ. ಇದು ಈ ಉಡಾವಣೆಯ 2ನೇ ವಿಶೇಷ.
ವಿವಿಧ ಕಕ್ಷೆಗಳಿಗೆ ಉಪಗ್ರಹಗಳನ್ನು ಕೂರಿಸಲೆಂದೇ ಹೊಸ ಪ್ರಯೋಗವೊಂದಕ್ಕೆ ಇಸ್ರೋ ಮುಂದಾಗಿದೆ. ಉಪಗ್ರಹಗಳನ್ನು ಕೊಂಡೊಯ್ಯುವ ಪಿಎಸ್‌ಎಲ್‌ವಿ ರಾಕೆಟ್ ಜತೆಗೆ, ಪಿಎಸ್-4 ಎಂಬ ಇಂಜಿನ್‌ನನ್ನು ಅಳವಡಿಸಲಾಗುತ್ತಿದೆ.
ಪಿಎಸ್‌ಎಲ್‌ವಿ ರಾಕೆಟ್ ಭೂಮಿಯ ಮೇಲ್ಮೆ„ನಿಂದ 763 ಕಿ.ಮೀ. ದೂರಕ್ಕೆ ಸಾಗಿದ ನಂತರ, ಅಲ್ಲಿ ಕೆಲವು ಪ್ರಮುಖ ಉಪಗ್ರಹಗಳನ್ನು ಬಿಡುಗಡೆ ಮಾಡುತ್ತದೆ. ಇದು ಈ ಯೋಜನೆಯ ಮೊದಲ ಕಕ್ಷೆಯಾಗಿದ್ದು, ಇಲ್ಲಿಂದ ರಾಕೆಟ್ ಹಿಮ್ಮುಖವಾಗಿ ಚಲಿಸುತ್ತದೆ. ಆಗ ನೆರವಿಗೆ ಬರುವುದೇ ಪಿಎಸ್-4 ಇಂಜಿನ್. ಇದು ಚಾಲನೆಗೊಳ್ಳುವುದರಿಂದ ರಾಕೆಟ್ ಜತೆಗೆ ಹಿಮ್ಮುಖವಾಗಿ ಚಲಿಸಿ, ಮೊದಲು ತಾನಿದ್ದ 763 ಕಿ.ಮೀ. ಎತ್ತರ ದಿಂದ 504 ಕಿ.ಮೀ.ವರೆಗಿನ ಎತ್ತರಕ್ಕೆ ವಾಪಸ್ಸಾಗುತ್ತದೆ. ಅಲ್ಲಿ ಕೆಲವು ಉಪಗ್ರಹ ಬಿಡುಗಡೆಯಾಗುತ್ತವೆ. ಅನಂತರ, ಪುನಃ ಚಾಲನೆಗೊಳ್ಳುವ ಪಿಎಸ್-4, ರಾಕೆಟನ್ನು 485 ಕಿ.ಮೀ.ಗಳಿಗೆ ತಂದು ನಿಲ್ಲಿಸುತ್ತದೆ. ಅಲ್ಲಿ ಮತ್ತಷ್ಟು ಉಪಗ್ರಹಗಳು ಬಿಡುಗಡೆ ಯಾಗುತ್ತವೆ. ಹೀಗೆ, ಮೂರು ಕಕ್ಷೆಗಳಿಗೆ ಕಳಿಸುವ ಉಪಗ್ರಹಗಳನ್ನು 3 ರಾಕೆಟ್‌ಗಳಲ್ಲಿ ಕಳಿಸುವ ಬದಲು, ಒಂದೇ ರಾಕೆಟ್‌ನಲ್ಲಿ ಕಳಿಸಿ ಅವುಗಳನ್ನು 3 ಕಕ್ಷೆಗಳಲ್ಲಿ ಬಿತ್ತುವ ಪ್ರಯೋಗ ಕೈಗೊಳ್ಳಲಾಗಿದೆ.
“ಎಮಿಸ್ಯಾಟ್’ ಬಗ್ಗೆ ಒಂದಿಷ್ಟು
ಶತ್ರು ದೇಶಗಳ ರೇಡಾರ್ ಪತ್ತೆಗಾಗಿ ಡಿಆರ್‌ಡಿಒ ಅಭಿವೃದ್ಧಿ ಪಡಿಸಿರುವ “ಎಮಿಸ್ಯಾಟ್’ ಈ ಬಾರಿಯ ಉಡಾವಣಾ ಉಪಗ್ರಹಗಳ ಸಮೂಹದಲ್ಲಿರುವ ವಿಶೇಷ ಉಪಗ್ರಹ. 436 ಕೆ.ಜಿ. ತೂಕವಿರುವ ಇದು, ವಿದ್ಯುದಯಸ್ಕಾಂತ ತರಂಗಗಳ ಆಧಾರದಲ್ಲಿ ಕೆಲಸ ಮಾಡುತ್ತದೆ ಹಾಗೂ ಶತ್ರು ದೇಶಗಳಲ್ಲಿರುವ ರೇಡಾರ್‌ಗಳನ್ನು ಎಷ್ಟೇ ದೂರದಲ್ಲಿದ್ದರೂ ಪತ್ತೆ ಮಾಡುತ್ತದೆ. ಈವರೆಗೆ, ಶತ್ರುಗಳ ರೇಡಾರ್‌ಗಳ ಪತ್ತೆಗಾಗಿ ಭಾರತೀಯ ಸೇನೆ ವಿಶೇಷ ವಿಮಾನಗಳನ್ನು ಬಳಸಲಾಗುತ್ತಿತ್ತು. ಇನ್ನು ಮುಂದೆ ಎಮಿಸ್ಯಾಟ್‌ನ ಕಣ್ಗಾವಲಿನ ಮೂಲಕ ಕ್ಷಣಾರ್ಧದಲ್ಲಿ ಮಾಹಿತಿ ಸಿಗುತ್ತವೆ.