ಬಂಕುರಾ, ಪಶ್ಚಿಮ ಬಂಗಾಲ : ಕಳೆದ ವರ್ಷ ಅಮೆರಿಕಕ್ಕೆ ಹೋಗಲಿದ್ದ 28ರ ಹರೆಯದ ಯುವತಿಯ ಶವ ಭೋಪಾಲ್‌ನಲ್ಲಿನ ಆಕೆಯ ಬಾಯ್ ಫ್ರೆಂಡ್ ಮನೆಯ ಅಡುಗೆ ಕೋಣೆಯಲ್ಲಿ ಹೂಳಲ್ಪಟ್ಟಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
28ರ ಹರೆಯದ ಆಕಾಂಶಾ ಶರ್ಮಾ 2016ರ ಜೂನ್ 23ರಂದು ದಿಲ್ಲಿ ಮೂಲಕ ಅಮೆರಿಕಕ್ಕೆ ಪ್ರಯಾಣಿಸುವವಳಿದ್ದಳು. ಜೂನ್ 22ರಂದು ಆಕೆ ತನ್ನ ಮನೆಯಿಂದ ಹೊರಟಿದ್ದಳು. ಆಕೆ ಅಮೆರಿಕ ತಲುಪಿದ್ದಾಳೆಂದೇ ಆಕೆಯ ಹೆತ್ತವರು ಭಾವಿಸಿದ್ದರು. ಕಳೆದ ವರ್ಷ ಡಿಸೆಂಬರ್ ತನಕವೂ ಆಕೆ ತನ್ನ ಹೆತ್ತವರ ಜತೆಗೆ ಸಂಪರ್ಕದಲ್ಲಿದ್ದಳು. ಅನಂತರ ಆಕೆ ನಿಗೂಢವಾಗಿ ನಾಪತ್ತೆಯಾಗಿದ್ದಳು.
ಆಕಾಂಶಾ ಶರ್ಮಾಳ ತಂದೆ ಶಿಬೇಂದ್ರ ಶರ್ಮಾ ಅವರು ತನ್ನ ಪುತ್ರಿ ನಿಗೂಢವಾಗಿ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ಈ ವರ್ಷ ಜನವರಿ 5ರಂದು ದೂರು ನೀಡಿದ್ದರು ಎಂದು ಬಂಕುರಾ ಎಸ್‌ಪಿ ತಿಳಿಸಿದ್ದಾರೆ.
ಶಿಬೇಂದ್ರ ಶರ್ಮಾ ಅವರ ದೂರಿನ ಮೇಲೆ ಬಂಕುರಾ ಪೊಲೀಸರು ಆಕಾಂಶಾ ಳನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದರು. ಫೆ.1ರಂದು ಬಂಕುರಾ ಪೊಲೀಸ್ ತಂಡ ಭೋಪಾಲ್ ತಲುಪಿತ್ತು.
ನಿಖರ ಸುಳಿವಿನ ಮೇಲೆ ಪೊಲೀಸರು ಭೋಪಾಲ್ ನ ಸಾಕೇತ್ ನಗರದ ನಿವಾಸಿಯಾಗಿರುವ ಉದಯನ್ ದಾಸ್ ಎಂಬಾತನ ಮನೆಗೆ ದಾಳಿ ನಡೆಸಿದರು. ಆತನ ಮನೆಯನ್ನು ತೀವ್ರವಾಗಿ ಶೋಧಿಸಿದಾಗ ಆಕಾಂಶಾ ಳ ಶ ಅಡುಗೆ ಕೋಣೆಯಲ್ಲಿ ಹೂಳಲ್ಪಟ್ಟಿರುವುದು ಗೊತ್ತಾಯಿತು. ಆಕಾಂಶಾ ಗೆ ಉದಯನ್‌ದಾಸ್ ನ ಪರಿಚಯ ಸಾಮಾಜಿಕ ಜಾಲ ತಾಣದ ಮೂಲಕ ಆಗಿತ್ತು ಎಂದು ಬಂಕುರಾ ಎಸ್‌ಪಿ ಸುಖೇಂದ್ರ ಹಿರಾ ತಿಳಿಸಿದ್ದಾರೆ.
ಆಕಾಂಶಾ ಳ ನಿಗೂಢ ನಾಪತ್ತೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಇದೀಗ ಉದಯನ್ ದಾಸ್‌ನನ್ನು ವಶಕ್ಕೆ ತೆಗೆದುಕೊಂಡು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.