ಬೋಸ್ಟನ್(ಅಮೆರಿಕ): ಸಾಗರ ಗರ್ಭದ ಆಳದಲ್ಲಿ ಹುದುಗಿದ್ದ ಟೈಟಾನಿಕ್ ಹಡಗಿನ ಅವಶೇಷ ವೀಕ್ಷಿಸಲು ತೆರಳಿದ್ದ ಐವರು ಪ್ರವಾಸಿಗರಿದ್ದ ಸಬ್ ಮರ್ಸಿಬಲ್ ನಾಪತ್ತೆಯಾಗಿರುವ ಘಟನೆ ಉತ್ತರ ಅಟ್ಲಾಂಟಿಕ್ ನಲ್ಲಿ ನಡೆದಿದ್ದು, ಸಬ್ ಮರ್ಸಿಬಲ್ ಪತ್ತೆಗಾಗಿ ಅಮೆರಿಕ ಮತ್ತು ಕೆನಡಾದ ಕರಾವಳಿ ಪಡೆಯ ತಂಡ ಶೋಧ ಕಾರ್ಯದಲ್ಲಿ ತೊಡಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮಾರ್ಗ ಮಧ್ಯೆ ಕಾಣಿಸಿಕೊಂಡ ಹೆರಿಗೆ ನೋವು: ಆ್ಯಂಬುಲೆನ್ಸ್ ನಲ್ಲೆ ಹೆರಿಗೆ
ಓಷಿಯನ್ ಗೇಟ್ ಎಕ್ಸ್ ಪೆಡಿಷನ್ಸ್ ಕಾರ್ಯನಿರ್ವಹಣೆಯ “ಟೈಟಾನ್” ಎಂಬ 21 ಅಡಿ ಉದ್ದದ ಸಬ್ ಮರ್ಸಿಬಲ್ ನಲ್ಲಿ ಪೈಲಟ್ ಹಾಗೂ ನಾಲ್ವರು ಪ್ರವಾಸಿಗರು ಟೈಟಾನಿಕ್ ಹಡಗಿನ ಅವಶೇಷ ವೀಕ್ಷಿಸಲು ಸಾಗರದಾಳಕ್ಕೆ ತೆರಳಿದ್ದ ಸಂದರ್ಭದಲ್ಲಿ ಸಂಪರ್ಕ ಕಳೆದುಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಟೂರಿಸ್ಟ್ ವಿಮಾನಯಾನ ಕಂಪನಿಯ ಮಾಹಿತಿ ಪ್ರಕಾರ, ಬ್ರಿಟಿಷ್ ಉದ್ಯಮಿ, ಬಿಲಿಯನೇರ್ ಹಮೀಶ್ ಹಾರ್ಡಿಂಗ್ ಅವರು ಸಾಗರದಾಳದ ಪ್ರಯಾಣಕ್ಕೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ವಿಷಯವನ್ನು ಹಂಚಿಕೊಂಡಿದ್ದರು ಎಂದು ತಿಳಿಸಿದೆ.
ಸುಮಾರು 4,000 ಮೀಟರ್ (13,100 ಅಡಿ) ಆಳದಲ್ಲಿ ಹುದುಗಿರುವ ಟೈಟಾನಿಕ್ ಹಡಗಿನ ಅವಶೇಷದ ಪರಿಶೀಲನೆ, ಸಂಶೋಧನೆ ಹಾಗೂ ಆಳ ಸಮುದ್ರದ ಪರೀಕ್ಷೆಗಾಗಿ ಈ ತಂಡ ತೆರಳಿತ್ತು. ಸಬ್ ಮರ್ಸಿಬಲ್ ನಲ್ಲಿ ಒಟ್ಟು 96 ಗಂಟೆಗಳ ಆಕ್ಸಿಜನ್ ಇದ್ದು, ಇನ್ನು ಕೇವಲ 70 ಗಂಟೆಗಳ ಆಮ್ಲಜನಕ ಉಳಿದಿದ್ದು, ಐವರನ್ನು ರಕ್ಷಿಸುವುದು ತುಂಬಾ ಸಾಹಸದಾಯಕ ಕೆಲಸವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಬ್ ಮರ್ಸಿಬಲ್ ಪೈಲಟ್ ಸೇರಿದಂತೆ ಐವರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಎಲ್ಲಾ ರೀತಿಯಿಂದಲೂ ಪ್ರಯತ್ನಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ. 1912ರಲ್ಲಿ ಬೃಹತ್ ಗಾತ್ರದ ಟೈಟಾನಿಕ್ ಹಡಗು ಅಟ್ಲಾಂಟಿಕ್ ಸಾಗರದಲ್ಲಿ ಹಿಮಬಂಡೆಗೆ ಡಿಕ್ಕಿಹೊಡೆದು ಮುಳುಗಿ ಹೋಗಿದ್ದು, ಅಂದು 1,500ಕ್ಕೂ ಅಧಿಕ ಪ್ರವಾಸಿಗರು ಕೊನೆಯುಸಿರೆಳೆದಿದ್ದರು. 1985ರಲ್ಲಿ13 ಸಾವಿರ ಅಡಿ ಆಳದ ತಳಸೇರಿದ್ದ ಟೈಟಾನಿಕ್ ಹಡಗಿನ ಅವಶೇಷವನ್ನು ಪತ್ತೆಹಚ್ಚಲಾಗಿತ್ತು.