Advertisement

Bangalore: ಮಿಸ್ಸಿಂಗ್‌ ಲಿಂಕ್‌ಗಳಿಗಿಲ್ಲ ಮುಕ್ತಿ

12:42 PM Jan 29, 2024 | Team Udayavani |

ಬೆಂಗಳೂರು: ಕಳೆದ ಹತ್ತು ವರ್ಷಗಳಲ್ಲಿ ಸರ್ಕಾರ ಬರೀ ನಗರದ ಸಂಚಾರದಟ್ಟಣೆ ನಿರ್ವಹಣೆಗಾಗಿಯೇ ಹತ್ತಾರು ಕೋಟಿ ರೂಪಾಯಿ ಸುರಿದಿದೆ. ಇದರಿಂದ ಹತ್ತಾರು ಕಿ.ಮೀ. ಮೆಟ್ರೋ ಮಾರ್ಗ, ರಸ್ತೆಗಳು, ಸುರಂಗಗಳು, ಎತ್ತರಿಸಿದ ಮಾರ್ಗಗಳೂ ನಿರ್ಮಾಣವಾಗಿವೆ. ಹೊಸ ಬಸ್‌ಗಳೂ ರಸ್ತೆಗಿಳಿದಿವೆ. ಇದರಿಂದ ಪ್ರಯಾಣಿಕರಿಗೆ ಅನುಕೂಲವೂ ಆಗಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಾಲ್ಕು ದಿಕ್ಕುಗಳನ್ನು ಸಂಪರ್ಕಿಸುವ ಸುರಂಗ ಮಾರ್ಗಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಆದರೆ, 100-200 ಮೀಟರ್‌ ಅಂತರದ ನಡುವೆ ದಶಕದಿಂದಲೂ ಸಂಪರ್ಕ ಕೊಂಡಿ ನಿರ್ಮಿಸಲು ಆಗದಿರುವುದು ಸೋಜಿಗ. ಇಂತಹ ಮಿಸ್ಸಿಂಗ್‌ ಲಿಂಕ್‌ಗಳು ಹತ್ತಕ್ಕೂ ಹೆಚ್ಚಿವೆ. ಅವುಗಳ ಕುರಿತ ಒಂದು ನೋಟ “ಸುದ್ದಿ ಸುತ್ತಾಟ’ದಲ್ಲಿ…

Advertisement

ಕಳೆದ ಒಂದು ದಶಕದಲ್ಲಿ 30 ಕಿ.ಮೀ.ಗೂ ಅಧಿಕ ಮೆಟ್ರೋ ಮಾರ್ಗವೇ ತಲೆಯೆತ್ತಿದೆ. ಎರಡನೇ ಹಂತದ ಯೋಜನೆಗೆ ಕಾಲಿಟ್ಟು, ಹತ್ತಾರು ಕಿ.ಮೀ. ಸುರಂಗವನ್ನೂ ಕೊರೆಯಲಾಗುತ್ತಿದೆ. ನೂರಾರು ಕೋಟಿ ರೂ.ನಲ್ಲಿ ಮೇಲ್ಸೇತುವೆಗಳು, ಹತ್ತಾರು ಕಿ.ಮೀ. ಉದ್ದದ ವೈಟ್‌ಟಾಪಿಂಗ್‌ ರಸ್ತೆಗಳು, ಸಾವಿರಾರು ಬಸ್‌ಗಳು, ಅನೇಕ ಯೋಜನೆಗಳು ರೂಪುತಾಳಿ, ವಿವಿಧ ಪ್ರಗತಿ ಹಂತದಲ್ಲಿವೆ.

ಮೊದಲ ಮತ್ತು ಕೊನೆಯ “ಕನೆಕ್ಟಿವಿಟಿ’ ನೀಡುವ ನೆಪದಲ್ಲಿ ಆ್ಯಪ್‌ ಆಧಾರಿತ ವಾಹನಗಳನ್ನೂ ರಸ್ತೆಗಿಳಿಸಲಾಗಿದೆ. ಆದರೆ, ಅಣತಿ ದೂರದಲ್ಲೇ ಇರುವ “ಮಿಸ್ಸಿಂಗ್‌ ಲಿಂಕ್‌’ಗಳಿಗೆ ಮಾತ್ರ ಸರ್ಕಾರದ ಅಂಗಸಂಸ್ಥೆಗಳು ಕುರುಡಾಗಿವೆ!

ಒಂದಲ್ಲಾ ಎರಡಲ್ಲಾ ಇಂತಹ ಹತ್ಕಕ್ಕೂ ಹೆಚ್ಚು “ಮಿಸ್ಸಿಂಗ್‌ ಲಿಂಕ್‌’ಗಳು ಹಲವು ವರ್ಷಗಳಿಂದ ಸಂಪರ್ಕ ಕೊಂಡಿಗಾಗಿ ಕಾದುಕುಳಿತಿವೆ. ಸಾವಿರಾರು ಕೋಟಿ ಮೊತ್ತದ ಯೋಜನೆಗಳ ಅನುಷ್ಠಾನದಲ್ಲಿರುವ ಉತ್ಸಾಹ ಹತ್ತಾರು ಕೋಟಿ ಮೊತ್ತದಲ್ಲಿ, ಕೆಲವೇ ತಿಂಗಳುಗಳಲ್ಲಿ ಮಾಡಿಮುಗಿಸಬಹುದಾದ ಈ ಸೇತುವೆಗಳ ನಿರ್ಮಾಣದಲ್ಲಿ ಜನಪ್ರತಿನಿಧಿಗಳಿಗಾಗಲಿ, ಅಧಿಕಾರಿಗಳಿಗಾಗಲಿ ಇಲ್ಲವಾಗಿದೆ.

ಸ್ವತಃ ಸರ್ಕಾರ ಒಂದೆಡೆ ಸಮೂಹ ಸಾರಿಗೆಗಳ ಉತ್ತೇಜಿಸುವ ಉದ್ದೇಶದಿಂದ ನಮ್ಮ ಮೆಟ್ರೋ, ಉಪನಗರ ರೈಲು, ಬಿಎಂಟಿಸಿ ಬಸ್‌ ಗಳು, ಅವುಗಳಿಗೆ ಸಂಬಂಧಿಸಿದ ಪೂರಕ ಸೌಲಭ್ಯಗಳಿಗೆ ಒತ್ತುನೀಡುತ್ತಿದೆ. ಅದಕ್ಕಾಗಿ ಪ್ರತಿ ವರ್ಷ ಹಣದ ಹೊಳೆ ಹರಿಸುತ್ತದೆ. ಮತ್ತೂಂದೆಡೆ ಸಂಬಂಧಪಟ್ಟ ಸರ್ಕಾರದ ಸಂಸ್ಥೆಗಳ ನಡುವಿನ ಸಮನ್ವಯದ ಕೊರತೆ ಅಥವಾ ಪ್ರತಿಷ್ಠೆಗಳಿಂದ ಅವುಗಳ ಅನುಷ್ಠಾನಗೊಳ್ಳದೇ ನನೆಗುದಿಗೆ ಬೀಳುತ್ತಿವೆ. ಇದರ ಪರಿಣಾಮವನ್ನು ಸಾರ್ವಜನಿಕರು ಅನುಭವಿಸುವಂತಾಗಿದೆ.

Advertisement

ಕೈಯಲ್ಲಿ ಬ್ಯಾಗ್‌ಗಳು, ಕಂಕುಳಲ್ಲಿ ಮಕ್ಕಳನ್ನು ಕರೆದುಕೊಂಡು ಯಮರೂಪಿಯಂತೆ ನುಗ್ಗಿಬರುವ ವಾಹನಗಳಿಂದ ತಪ್ಪಿಸಿಕೊಂಡು ರಸ್ತೆ ದಾಟುವ ಸಾಹಸಗಳು, ರೈಲು- ಮೆಟ್ರೋ ನಡುವೆ ಹತ್ತಿ-ಇಳಿಯುವ ಸರ್ಕಸ್‌ಗಳು, ಸ್ವಂತ ವಾಹನದಲ್ಲಿ ಬಂದರೆ ಇಲ್ಲದ ಪಾರ್ಕಿಂಗ್‌ ವ್ಯವಸ್ಥೆ, ಈ ಸಮೂಹ ಸಾರಿಗೆ ಸಹವಾಸ ಬೇಡ ಅಂತ ಆಟೋ ಹತ್ತಬೇಕಾದರೂ ರಸ್ತೆ ದಾಟುವ ಅನಿವಾರ್ಯತೆ. ಅಗತ್ಯವಿದ್ದರೂ ಕಾಣದ ಟಿಕೆಟ್‌ ಕೌಂಟರ್‌ಗಳು ಹೀಗೆ ಹತ್ತಾರು ಸಮಸ್ಯೆಗಳನ್ನು ನಿತ್ಯ ಲಕ್ಷಾಂತರ ಮಂದಿ ನಗರದ ನಾನಾ ಭಾಗಗಳಲ್ಲಿ ಎದುರಿಸುತ್ತಲೇ ಇದ್ದಾರೆ.

ಬಿಎಂಆರ್‌ಸಿಎಲ್‌, ನೈರುತ್ಯ ರೈಲ್ವೆ, ಕೆ-ರೈಡ್‌, ಬಿಎಂಟಿಸಿ, ಬಿಬಿಎಂಪಿ ಸೇರಿ ಆಯಾ ಸಂಸ್ಥೆಗಳು ತಮ್ಮ ಯೋಜನೆಗಳ ಅನುಷ್ಠಾನಕ್ಕೆ ಮಾತ್ರ ಸೀಮಿತವಾಗುತ್ತಿವೆ. ಅಲ್ಲಿಂದ ಮುಂದೆ ಹೋಗುವುದೇ ಇಲ್ಲ. ಉದಾಹರಣೆಗೆ ಯಶವಂತಪುರ ಮೆಟ್ರೋ ಮತ್ತು ರೈಲು ನಿಲ್ದಾಣಗಳ ನಡುವೆ ಬರೀ 50-60 ಮೀಟರ್‌ ಅಂತರ ಇದೆ. ದಶಕ ಕಳೆದರೂ ಅಲ್ಲಿ ಸಂಪರ್ಕ ಕಲ್ಪಿಸುವ ಗೋಜಿಗೆ ಹೋಗುತ್ತಿಲ್ಲ. ಬನಶಂಕರಿ ಟಿಟಿಎಂಸಿ- ಮೆಟ್ರೋ ನಡುವೆ ಎತ್ತರಿಸಿದ ಪಾದಚಾರಿ ಮಾರ್ಗ ನಿರ್ಮಾಣಕ್ಕಾಗಿ ಈ ಹಿಂದೆ ಅಲ್ಲಿನ ಸಂಸದರು ಪತ್ರ ಬರೆದಿದ್ದರು. ಇದುವರೆಗೆ ಅದು ಆಗಿಲ್ಲ. ಸಮೂಹ ಸಾರಿಗೆಯತ್ತ ಜನರನ್ನು ಸೆಳೆಯಬೇಕಾದರೆ, ಈ ರೀತಿಯ ಅಡತಡೆಗಳನ್ನು ನಾವು ಆದ್ಯತೆ ಮೇರೆಗೆ ಸರಿಪಡಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಂಸ್ಥೆಗಳ ನಡುವೆ ಸಮನ್ವಯ ಅತ್ಯವಶ್ಯಕ ಎಂದು ಅವರು ಅಭಿಪ್ರಾಯಪಡುತ್ತಾರೆ. ‌

ಸಂಪರ್ಕ ಸೇತುವೆಗಳ ನಿರ್ಮಾಣಕ್ಕೆ ಹತ್ತಾರು ಬಾರಿ ಸಭೆಗಳು ನಡೆಯುತ್ತವೆ. ಟೆಂಡರ್‌ ಮತ್ತಿತರ ಹಂತದಲ್ಲಿ ಚರ್ಚೆಗಳಾಗುತ್ತವೆ. ಯೋಜನಾ ವರದಿಯೂ ಸಿದ್ಧವಾಗುತ್ತದೆ. ಆದರೆ, ಅನುಷ್ಠಾನ ಮಾತ್ರ ಇನ್ನೂ ಆಗುತ್ತಿಲ್ಲ. ಉದ್ದೇಶಿತ ಜಾಗಗಳಲ್ಲಿ ಬರೀ ಪಾದಚಾರಿ ಮಾರ್ಗ ಉಪಯೋಗ ಆಗದು. ಸಮರ್ಪಕ ಇಂಟರ್‌ಚೇಂಜ್‌ಗಳ ವ್ಯವಸ್ಥೆ ಕಲ್ಪಿಸಬೇಕು. ಅಂದರೆ ಅಲ್ಲಿ ಸಂಪರ್ಕ ಸೇತುವೆ, ಎಸ್ಕೆಲೇಟರ್‌, ವಾಹನಗಳ ನಿಲುಗಡೆ, ಆಟೋ ನಿಲ್ದಾಣ, ಅಗತ್ಯ ಇರುವ ಕಡೆಗಳಲ್ಲಿ ಟಿಕೆಟ್‌ ಕೌಂಟರ್‌ ಮತ್ತಿತರ ಸೌಲಭ್ಯಗಳನ್ನು ಒದಗಿಸಬೇಕು ಎಂದು ತಜ್ಞರು ಒತ್ತಾಯಿಸುತ್ತಾರೆ.

ಪ್ರಮುಖ ಮಿಸ್ಸಿಂಗ್ ಲಿಂಕ್‌ಗಳು…

ಜ್ಞಾನಭಾರತಿ, ಶಾಂತಿನಗರ ಮೆಟ್ರೋ ನಿಲ್ದಾಣ ಮತ್ತು ಟಿಟಿಎಂಸಿ, ಯಶವಂತಪುರ ರೈಲು ಮತ್ತು ಮೆಟ್ರೋ ನಿಲ್ದಾಣಗಳು, ಬೈಯಪ್ಪನಹಳ್ಳಿ ರೈಲು ಮತ್ತು ಮೆಟ್ರೋ ನಿಲ್ದಾಣಗಳು (ಒಂದು ಕಡೆ ಮಾತ್ರ ವ್ಯವಸ್ಥೆ ಇದೆ. ಇದ್ದರೂ ಮಲ್ಟಿ ಲೆವೆಲ್‌ ಇರುವುದರಿಂದ ಇಳಿದು-ಹತ್ತುವುದು ತಪ್ಪಿಲ್ಲ), ಕೆ.ಆರ್‌.ಪುರ ರೈಲು ಮತ್ತು ಮೆಟ್ರೋ, ವೈಟ್‌ ಫೀಲ್ಡ್‌ ಮೆಟ್ರೋ ಮತ್ತು ರೈಲು ನಿಲ್ದಾಣಗಳು, ಪೀಣ್ಯ ಮೆಟ್ರೋ ನಿಲ್ದಾಣ (ಇಲ್ಲಿ ಫ್ಲೈಓವರ್‌ ದಾಟಲು ಇಲ್ಲ ವ್ಯವಸ್ಥೆ) ಹೀಗೆ ಹಲವು ಪ್ರಮುಖ ಕಡೆಗಳಲ್ಲಿ ಪ್ರಯಾಣಿಕರು ನಿತ್ಯ ಪರದಾಡುವ ಸ್ಥಿತಿ ಇದೆ. ಇನ್ನು ಕೆಂಗೇರಿ ಟಿಟಿಎಂಸಿ ಮತ್ತು ಮೆಟ್ರೋ ನಿಲ್ದಾಣದ ನಡುವೆ ಪಾದಚಾರಿ ಮಾರ್ಗ ನಿರ್ಮಿಸಲಾಗಿದೆ. ಆದರೆ, ಲಿಫ್ಟ್ ಅಥವಾ ಎಸ್ಕೆಲೇಟರ್‌ ಸೌಲಭ್ಯ ಇಲ್ಲದ ಕಾರಣ ಬಳಕೆ ಆಗುತ್ತಿಲ್ಲ. ಅಧ್ಯಯನದ ಪ್ರಕಾರ ಹತ್ತಕ್ಕೂ ಹೆಚ್ಚು ಕಡೆ ಈ ಸಮಸ್ಯೆ ಕಾಣಬಹುದು. ಆ ಪೈಕಿ ಮೂರ್‍ನಾಲ್ಕು ಕಡೆಯಂತೂ ದಶಕಗಳಿಂದಲೂ ಸಂಪರ್ಕ ಕಲ್ಪಿಸಿಲ್ಲ. ಸಂಸದರು ಸೇರಿದಂತೆ ಜನಪ್ರತಿನಿಧಿಗಳು ಕೂಡ ಈ ವಿಚಾರದಲ್ಲಿ ಚಕಾರ ಎತ್ತದಿರುವುದು ದುರಂತ ಎಂದು ನಗರ ಸಂಚಾರ ಸೌಲಭ್ಯಗಳ ಹೋರಾಟಗಾರ ಸಂಜೀವ ದ್ಯಾಮಣ್ಣವರ ಬೇಸರ ವ್ಯಕ್ತಪಡಿಸುತ್ತಾರೆ.

ಬನಶಂಕರಿ ಟಿಟಿಎಂಸಿ-ಬನಶಂಕರಿ ಮೆಟ್ರೋ ನಿಲ್ದಾಣದ ನಡುವೆ ಒಂದು ಸ್ಕೈವಾಕ್‌ ನಿರ್ಮಿಸುವ ಸಲುವಾಗಿಯೇ ಕಳೆದ 3 ವರ್ಷಗಳಿಂದ ಓಡಾಡುತ್ತಿದ್ದೇನೆ. ಬಿಬಿಎಂಪಿ, ಬಿಎಂಆರ್‌ಸಿಎಲ್‌, ಬಿಎಂಟಿಸಿ ನಡುವೆಯೇ ಫೈಲ್‌ ಓಡಾಡುತ್ತಿದೆ. ಇದನ್ನು ಯಾರು ಮಾಡ ಬೇಕೆಂಬುದರ ಬಗ್ಗೆಯೇ ಸ್ಪಷ್ಟತೆ ಇಲ್ಲ. ಇದು ಆಡಳಿತ ವ್ಯವಸ್ಥೆಯಲ್ಲಿನ ಸಮನ್ವಯ ಎಷ್ಟರಮಟ್ಟಿಗಿದೆ ಎಂಬುದಕ್ಕೆ ಹಿಡಿದ ಕನ್ನಡಿ. ●ತೇಜಸ್ವಿಸೂರ್ಯ, ಬೆಂಗಳೂರು ದಕ್ಷಿಣ ಸಂಸದ

ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಂತೂ ಬಹುತೇಕ ಕಡೆ ಇಂಟರ್‌ ಚೇಂಜ್‌ ಕಲ್ಪಿಸಲಾಗಿದೆ. ಕಂಟೋನ್ಮೆಂಟ್‌, ವಿಶ್ವೇಶ್ವರಯ್ಯ ಟರ್ಮಿನಲ್‌ ಸೇರಿ ಹಲವು ಕಡೆ ಈ ವ್ಯವಸ್ಥೆ ಇದೆ. ಉಳಿದ ಕಡೆಗಳಲ್ಲೂ ಮಾಡುವ ಪ್ರಕ್ರಿಯೆ ನಡೆದಿದೆ. ಆದರೆ, ಪ್ರಯಾಣಿಕರ ಹಿತದೃಷ್ಟಿಯಿಂದ ಆದ್ಯತೆ ಮೇರೆಗೆ ತ್ವರಿತ ಗತಿಯಲ್ಲಿ ಮಾಡಬೇಕು. ● ಪಿ.ಸಿ.ಮೋಹನ್‌, ಬೆಂಗಳೂರು ಕೇಂದ್ರ ಸಂಸದ

ನಗರದ ಇತರೆ ಮೆಟ್ರೋ ನಿಲ್ದಾಣದಲ್ಲಿ ಎರಡೂ ಬದಿ ಪ್ರವೇಶ ದ್ವಾರ ಇದೆ. ಆದರೆ, ಪೀಣ್ಯದಲ್ಲಿ 2 ಅಂತಸ್ತಿನ ನಿಲ್ದಾಣ ಇದ್ದು, ಒಂದೇ ಕಡೆ ಪ್ರವೇಶ ದ್ವಾರ ಇದೆ. ಮತ್ತೂಂದು ತುದಿಗೆ ಹೋಗಲು, ರಸ್ತೆ ವಿಭಜಕಗಳ ಬ್ಯಾರಿಕೇಡ್‌ ಏರಿ ಆಟೋ ಹಿಡಿದು, ಒಂದೂವರೆ ಕಿ.ಮೀ. ಸುತ್ತಿ ಬರಬೇಕು. ಇಲ್ಲೊಂದು ಸ್ಕೈವಾಕ್‌ ಅಗತ್ಯವಿದೆ. ●ಜಗದೀಶ್‌, ಪೀಣ್ಯ ನಿವಾಸಿ.

ಬನಶಂಕರಿಯಲ್ಲಿ ವೃದ್ಧರು, ಮಹಿಳೆಯರು ಕೈಯಲ್ಲಿ ಜೀವ ಹಿಡಿ ದುಕೊಂಡು ರಸ್ತೆಗಳನ್ನು ದಾಟುವ ಸ್ಥಿತಿ ಇದೆ. ಬನಶಂಕರಿ ಟಿಟಿ ಎಂಸಿ ಮತ್ತು ಮೆಟ್ರೋ ಅಣತಿ ದೂರದಲ್ಲೇ ಇವೆ. ಇವುಗಳ ನಡುವೆ ಇಂಟರ್‌ಚೇಂಜ್‌ ನಿರ್ಮಾಣವಾದರೆ, ಯಾವುದೇ ಅಡತಡೆ ಇಲ್ಲದೆ ಸಂಚರಿಸಬಹುದು. ಸಾವಿರಾರು ಪ್ರಯಾಣಿಕರಿಗೆ ಅನುಕೂಲ ಆಗಲಿದೆ. ●ಮಂಜುಳಾ, ಬನಶಂಕರಿ ನಿವಾಸಿ

ಯಶವಂತಪುರದಲ್ಲಿ ದೂರದ ಊರುಗಳಿಂದ ಬರುವ ಅಥವಾ ಹೋಗಲು ಲಗೇಜುಗಳೊಂದಿಗೆ ಆಗಮಿಸುವ ಪ್ರಯಾಣಿಕರಿಗೆ ಇದು ಕಿರಿಕಿರಿಯಾಗಿ ಪರಿಣಮಿಸುತ್ತದೆ. ಹಾಗೊಂದು ವೇಳೆ ಮೇಲ್ಸೇತುವೆ ನಿರ್ಮಿಸಿದರೆ, ನೇರವಾಗಿ ಮೆಟ್ರೋ ಅಥವಾ ಹೊರ ಊರುಗಳಿಗೆ ಹೋಗುವ ರೈಲು ಏರಲು ಅನುಕೂಲವಾಗುತ್ತದೆ. ●ಹೇಮಂತ್‌, ಎಂಜಿನಿಯರ್‌ ಮತ್ತು ರಾಜಾಜಿನಗರ ನಿವಾಸಿ

ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next