Advertisement
ಸಿದ್ಧಾರ್ಥ್ ರಾಷ್ಟ್ರೀಯ ಹೆದ್ದಾರಿ 66ರ ಉಳ್ಳಾಲ ಸೇತುವೆ ಬಳಿಯಿಂದ ದಿಢೀರನೇ ನಾಪತ್ತೆ ಯಾಗಿರುವುದಕ್ಕೆ ಪ್ರಮುಖ ಸಾಕ್ಷಿ ಅವರ ಕಾರು ಚಾಲಕ ಬಸವರಾಜ ಪಾಟೀಲ್. ಯಾದಗಿರಿ ಜಿಲ್ಲೆಯ ಪಾಟೀಲ್ ಈ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಸೋಮ ವಾರ ಮಧ್ಯರಾತ್ರಿಯೇ ದೂರು ಸಲ್ಲಿಸಿದ್ದಾರೆ. ಸಾಕಷ್ಟು ಕುತೂಹಲಕ್ಕೆ ಕಾರಣವಾದ ಈ ಪ್ರಕರಣವನ್ನು ಬೇಧಿಸಲು ಬಸವರಾಜ ಅವರ ಹೇಳಿಕೆ ಮತ್ತು ದೂರು ಪ್ರಮುಖ ಸುಳಿವು ಒದಗಿಸುವ ಸಾಧ್ಯತೆಯಿದೆ. ಸಿದ್ಧಾರ್ಥ್ ಅವರನ್ನು ಮಂಗಳೂರಿಗೆ ಕರೆ ತಂದಿದ್ದ ಇನ್ನೋವಾ ಕ್ರಿಸ್ಟಾ ಕಾರನ್ನು ವಶಕ್ಕೆ ಪಡೆದಿರುವ ಪೊಲೀಸರು ಚಾಲಕ ಬಸವರಾಜ ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
“ನಾನು ಸಿದ್ಧಾರ್ಥ್ ಬಳಿ 3 ವರ್ಷಗಳಿಂದ ಕಾರು ಚಾಲಕನಾಗಿ ದ್ದೇನೆ. ಸೋಮವಾರ ಬೆಳಗ್ಗೆ 8 ಗಂಟೆಗೆ ಎಂದಿನಂತೆ ಬೆಂಗಳೂರಿನ ಸದಾಶಿವ ನಗರದಲ್ಲಿರುವ ಅವರ ಮನೆಗೆ ತೆರಳಿದ್ದೆ. ಅಲ್ಲಿಂದ ಅವರನ್ನು ಇನ್ನೋವಾ ಕಾರಿನಲ್ಲಿ ವಿಠಲ ಮಲ್ಯ ರಸ್ತೆಯಲ್ಲಿರುವ ಕಚೇರಿಗೆ ಕರೆದೊಯ್ದೆ. ಸುಮಾರು 11 ಗಂಟೆಯವರೆಗೆ ಅವರು ಅಲ್ಲಿದ್ದರು. 11.30ಕ್ಕೆ ಮರಳಿ ಸದಾಶಿವ ನಗರದ ಮನೆಗೆ ವಾಪಸ್ ಬಂದೆವು. ಅನಂತರ ನನ್ನಲ್ಲಿ ಅವರು “ಊರಿಗೆ ಹೋಗಬೇಕಾಗಿದ್ದು, ನೀನು ಮನೆಗೆ ಹೋಗಿ ಲಗೇಜ್ ತೆಗೆದುಕೊಂಡು ಬಾ’ ಎಂದರು. ಅದರಂತೆ ನಾನು ಲಗೇಜ್‌ನೊಂದಿಗೆ ವಾಪಸಾದೆ’. “ಮಧ್ಯಾಹ್ನ ಸುಮಾರು 12.30ಕ್ಕೆ ಸಕಲೇಶಪುರಕ್ಕೆ ಹೊರಡುವಂತೆ ಸೂಚಿಸಿದರು. ಅದರಂತೆ ಕಾರು ಚಲಾಯಿಸಿ ಹೊರಟೆ. ಸಕಲೇಶಪುರ ತಲುಪುತ್ತಿದ್ದಂತೆ ಮಂಗಳೂರು ಕಡೆ ಸಾಗೋಣ ಎಂದರು. ಆ ಪ್ರಕಾರ ಮಂಗಳೂರು ನಗರ ಪ್ರವೇಶಿಸುವ ಸರ್ಕಲ್‌ಗೆ ಬಂದಾಗ ಎಡಕ್ಕೆ ತೆಗೆದುಕೋ; ಸೈಟ್‌ಗೆ ಹೋಗಬೇಕು ಎಂದರು. ಅದರಂತೆ ಎಡಕ್ಕೆ ತೆಗೆದು ಕೊಂಡು ಕೇರಳ ಹೈವೇ ರಸ್ತೆಯಲ್ಲಿ 3-4 ಕಿ.ಮೀ. ಸಾಗಿದಾಗ ನದಿಗೆ ಅಡ್ಡಲಾಗಿ ಕಟ್ಟಿದ ದೊಡ್ಡ ಸೇತುವೆ ಎದುರಾಯಿತು. ನನ್ನಲ್ಲಿ ಕಾರು ನಿಲ್ಲಿಸು ಎಂದು ಹೇಳಿದರು. ಅವರು ಕೆಳಗಿಳಿದು, ನೀನು ಸೇತುವೆಯ ಆ ತುದಿಗೆ ಗಾಡಿಯನ್ನು ನಿಲ್ಲಿಸು; ನಾನು ನಡೆದು ಬರುತ್ತೇನೆ ಎಂದರು’.
Related Articles
Advertisement
ರಾ. ಹೆ.: ದೀಪವಿಲ್ಲ-ಸಿಸಿ ಕೆಮರಾವೂ ಇಲ್ಲ !ಮಂಗಳೂರು, ಜು. 30: ಕಾಸರಗೋಡು-ಕೊಣಾಜೆ ಭಾಗವನ್ನು ಮಂಗಳೂರಿಗೆ ಸಂಪರ್ಕಿಸುವ ನಗರದ ಮುಖ್ಯ ರಸ್ತೆ ಪಂಪ್‌ವೆಲ್-ತೊಕ್ಕೊಟ್ಟು ಹೆದ್ದಾರಿ ಕೆಲವು ವರ್ಷದ ಹಿಂದೆ ಚತುಷ್ಪಥ ಆಗಿದ್ದರೂ ಈ ರಸ್ತೆಯಲ್ಲಿ ಮೂಲ ಸಮಸ್ಯೆಗಳು ಇತ್ಯರ್ಥವಾಗಿಲ್ಲ. ನೇತ್ರಾವತಿ ಸೇತುವೆ ಸೇರಿದಂತೆ ರಸ್ತೆಯ ಉದ್ದಕ್ಕೂ ಕೆಲವೆಡೆ ಬೀದಿದೀಪ ಇದ್ದರೂ ಉರಿಯುತ್ತಿಲ್ಲ. ಜತೆಗೆ ಈ ರಸ್ತೆ ವ್ಯಾಪ್ತಿಯಲ್ಲಿ ಎಲ್ಲಿಯೂ ಸಿಸಿ ಕೆಮರಾ ವ್ಯವಸ್ಥೆಯೂ ಇಲ್ಲ. ಹೀಗಾಗಿ ಪ್ರಕರಣವನ್ನು ಭೇದಿಸುವಲ್ಲಿ ಜಿಲ್ಲಾಡಳಿತ- ಪೊಲೀಸ್ ಇಲಾಖೆಗೆ ಕೊಂಚ ಸಮಸ್ಯೆಯಾಗಿದೆ. ಸಿಸಿ ಕೆಮರಾ ಇರುತ್ತಿದ್ದರೆ ಸಿದ್ದಾರ್ಥ್ ಕಣ್ಮರೆಯ ಬಗ್ಗೆ ಸಾಕ್ಷ್ಯ ದೊರೆಯುತ್ತಿತ್ತು. ಆದರೆ ಸಿಸಿ ಕೆಮರಾ ಇಲ್ಲದೆ ಇದಕ್ಕೆ ಅವಕಾಶವಿಲ್ಲ. ಜತೆಗೆ ಸೋಮವಾರ ರಾತ್ರಿ ಸಿದ್ದಾರ್ಥ್ ಕಣ್ಮರೆ ಆದ ಸಂದರ್ಭ ಸೇತುವೆ ವಿದ್ಯುತ್ ದೀಪ ಉರಿಯುತ್ತಿರಲಿಲ್ಲ. ಹೀಗಾಗಿ ಬೇರೆ ವಾಹನದವರಿಗೂ ಇಲ್ಲಿ ನಡೆದ ಯಾವ ಘಟನೆಯೂ ಕಾಣಿಸಲಿಲ್ಲ ಎನ್ನಲಾಗುತ್ತಿದೆ. ಆದರೆ ಸನಿಹದಲ್ಲೇ ಇರುವ ರೈಲ್ವೇ ಸೇತುವೆಯಲ್ಲಿ ಸಿಸಿ ಕೆಮರಾಗಳಿವೆ. ರಸ್ತೆ ಸೇತುವೆಯಲ್ಲಿ ಬೀದಿದೀಪ, ಸಿಸಿ ಕೆಮರಾ ಇಲ್ಲದಿರುವ ಬಗ್ಗೆ ಪೊಲೀಸ್ ಫೋನ್‌ನಲ್ಲಿಯೂ ಅನೇಕ ಬಾರಿ ಉಲ್ಲೇಖವಾಗಿತ್ತು.