ಇಟಾನಗರ/ನವದೆಹಲಿ: ಭಾರತೀಯ ವಾಯುಪಡೆಗೆ ಸೇರಿದ್ದ ರಷ್ಯಾ ನಿರ್ಮಿತ “ಸಿ-130 ಜೆ” ಮಾದರಿಯ ವಿಮಾನ ನಾಪತ್ತೆಯಾಗಿದ್ದು ಈವರೆಗೂ ಪತ್ತೆಯಾಗಿಲ್ಲ. ಐಎಎಫ್ ವಿಮಾನದಲ್ಲಿ 8 ಸಿಬ್ಬಂದಿ ಹಾಗೂ 5 ಪ್ರಯಾಣಿಕರಿದ್ದರು. ಏತನ್ಮಧ್ಯೆ ನಾಪತ್ತೆಯಾಗಿದ್ದ ಐಎಎಫ್ ಎಎನ್ 32ನಲ್ಲಿ ಪಂಜಾಬ್ ನ ಲೆಫ್ಟಿನೆಂಟ್ ಮೋಹಿತ್ ಗರ್ಗ್ ಗಾಗಿ ತಂದೆ ಹುಡುಕಾಟದಲ್ಲಿದ್ದರೆ, ತಾಯಿಗೆ ತನ್ನ ಮಗ ಕಾಣೆಯಾಗಿರುವ ವಿಷಯ ತಿಳಿದಿಲ್ಲ ಎಂಬುದಾಗಿ ವರದಿಯೊಂದು ತಿಳಿಸಿದೆ.
ನಾಪತ್ತೆಯಾಗಿದ್ದ 13ಮಂದಿಯಲ್ಲಿ ಐಎಎಫ್ ನ ಲೆಫ್ಟಿನೆಂಟ್ ಮೋಹಿತ್ ಗರ್ಗ್ (27ವರ್ಷ) ಕೂಡಾ ಒಬ್ಬರಾಗಿದ್ದಾರೆ. ಗರ್ಗ್ ಸೇರಿದಂತೆ ಎಲ್ಲರೂ ಸುರಕ್ಷಿತವಾಗಿ ವಾಪಸ್ ಬರಲಿ ಎಂಬುದಾಗಿ ಪಂಜಾಬ್ ನ ಪಟಿಯಾಲಾ ಜಿಲ್ಲೆಯ ಸಾಮ್ನಾ ನಗರದ ಗರ್ಗ್ ಕುಟುಂಬ ಪ್ರಾರ್ಥಿಸುತ್ತಿದೆ.
ದ್ವಿತೀಯ ಪಿಯುಸಿ ನಂತರ ಗರ್ಗ್ ಎನ್ ಡಿಎ ಪ್ರವೇಶ ಪರೀಕ್ಷೆ ಪಾಸ್ ಆಗಿದ್ದ. ಎಲ್ಲರ ವಿರೋಧದ ನಡುವೆ, ತಂದೆಯ ಪ್ರೋತ್ಸಾಹದೊಂದಿಗೆ ಗರ್ಗ್ ಐಎಎಫ್ ನಲ್ಲಿ ಲೆಫ್ಟಿನೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಇದೀಗ ಕಾಣೆಯಾಗಿರುವ ಮಗನಿಗಾಗಿ ತಂದೆ ಸುರೀಂದರ್ ಪಾಲ್ ಗರ್ಗ್, ಚಿಕ್ಕಪ್ಪ ರಿಷಿಪಾಲ್ ಗರ್ಗ್, ಮೋಹಿತ್ ಪತ್ನಿ ಅಸ್ತಾ ಜೋರ್ಹಾತ್ ಗೆ ತೆರಳಿದ್ದಾರೆ. ಮಗ ನಾಪತ್ತೆಯಾಗಿದ್ದಾನೆಂದು ಹಾಸಿಗೆ ಹಿಡಿದಿರುವ ತಾಯಿ ಸಲೋಚನಾದೇವಿಗೆ ಮನೆಯವರು ಈವರೆಗೂ ತಿಳಿಸಿಲ್ಲವಂತೆ ಎಂದು ವರದಿ ಹೇಳಿದೆ.
ಇನ್ಮುಂದೆ ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ನಮ್ಮ ಸೇನಾಪಡೆ ಸೇರಿದಂತೆ ಎಲ್ಲಾ ರಕ್ಷಣಾ ಪಡೆಗಳ ವಿಮಾನ, ಸೌಲಭ್ಯಗಳು ಆಧುನಿಕ ಪರಿಕರಗಳನ್ನು ಹೊಂದಿರಬೇಕು. ಮತ್ತು ಸಮಯಕ್ಕೆ ತಕ್ಕಂತೆ ಅಪ್ ಡೇಟ್ ಮಾಡುತ್ತಿರಬೇಕು ಎಂದು ಗರ್ಗ್ ದೊಡ್ಡಪ್ಪ ಅಶ್ವಾನಿ ತಿಳಿಸಿದ್ದಾರೆ.
ಎಲ್ಲೆಡೆ ಹುಡುಕಾಡ ನಡೆಸುತ್ತಿದ್ದಾರೆ..ಆದರೆ ಯಾವ ಸುಳಿವು, ಮಾಹಿತಿಯೂ ಸಿಕ್ಕಿಲ್ಲ. ನನಗೆ ನನ್ನ ಮಗ ಸೇರಿದಂತೆ ನಾಪತ್ತೆಯಾದವರು ಮರಳಿ ಸಿಗಲಿ ಎಂಬುದೇ ಹಾರೈಕೆಯಾಗಿದೆ ಎಂದು ಮೋಹಿತ್ ತಂದೆ ಪ್ರತಿಕ್ರಿಯೆ ನೀಡಿದ್ದಾರೆ.