ಶಿಯೋಪುರ್: ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಜುಲೈ 21 ರಂದು ತನ್ನ ರೇಡಿಯೋ ಕಾಲರ್ ಕೆಲಸ ಮಾಡುವುದನ್ನು ನಿಲ್ಲಿಸಿದ ನಂತರ ನಾಪತ್ತೆಯಾಗಿದ್ದ ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ಹೆಣ್ಣು ಚೀತಾವನ್ನು 22 ದಿನಗಳ ಶೋಧ ಕಾರ್ಯಾಚರಣೆಯ ನಂತರ ಭಾನುವಾರ ಸೆರೆಹಿಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುನೋ ರಾಷ್ಟ್ರೀಯ ಉದ್ಯಾನವನದ (ಕೆಎನ್‌ಪಿ) ಧೋರೆಟ್ ವ್ಯಾಪ್ತಿಯಲ್ಲಿ ಬೆಳಗ್ಗೆ 10 ಗಂಟೆಗೆ ನಿರ್ವಾ ಎಂಬ ಚೀತಾವನ್ನು ಹಿಡಿಯಲಾಯಿತು, ನಂತರ ಅದರ ಆರೋಗ್ಯ ತಪಾಸಣೆ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳು, ಪಶುವೈದ್ಯರು ಮತ್ತು ಚೀತಾ ಟ್ರ್ಯಾಕರ್‌ಗಳು ಸೇರಿದಂತೆ 100 ಕ್ಕೂ ಹೆಚ್ಚು ಕ್ಷೇತ್ರ ಸಿಬಂದಿ ಚೀತಾ ಪತ್ತೆಗಾಗಿ ಹಗಲು ರಾತ್ರಿ ಹುಡುಕಾಡಿದ್ದಾರೆ. ಎರಡು ಡ್ರೋನ್ ತಂಡಗಳು, ಒಂದು ಶ್ವಾನ ದಳ ಮತ್ತು ಲಭ್ಯವಿರುವ ಆನೆಗಳನ್ನು ಶೋಧ ಕಾರ್ಯಾಚರಣೆಯಲ್ಲಿ ಬಳಸಿ 15-20 ಚದರ ಕಿಲೋಮೀಟರ್ ಪ್ರದೇಶದಲ್ಲಿ ಶೋಧ ನಡೆಸಲಾಗಿದೆ. ಆಗಸ್ಟ್ 12ರಂದು ಉಪಗ್ರಹದಿಂದ ಚೀತಾ ಇರುವಿಕೆಯ ಬಗ್ಗೆ ಮಾಹಿತಿ ಲಭಿಸಿತ್ತು.
ನಿರ್ವಾ ಆರೋಗ್ಯವಾಗಿದ್ದು, ಹೆಚ್ಚಿನ ಆರೋಗ್ಯ ತಪಾಸಣೆಗಾಗಿ ಆವರಣದಲ್ಲಿ (ಬೋಮಾ) ಇರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
KNP ಯಲ್ಲಿರುವ ಎಲ್ಲಾ 15 ಚೀತಾಗಳನ್ನು (ಏಳು ಗಂಡು, ಏಳು ಹೆಣ್ಣು ಮತ್ತು ಒಂದು ಹೆಣ್ಣು ಮರಿ) ಈಗ ಆವರಣದಲ್ಲಿ ಇರಿಸಲಾಗಿದೆ. ಎಲ್ಲವೂ ಆರೋಗ್ಯವಾಗಿದ್ದು, ಪಶುವೈದ್ಯರ ತಂಡವು ಆರೋಗ್ಯ ನಿಯತಾಂಕಗಳ ಮೇಲೆ ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿದೆ.