Advertisement

ಕೋಟಿ ಕೊಳ್ಳೆ ಹೊಡೆದವರು ಕಾಣೆ!

03:08 PM Dec 02, 2017 | Team Udayavani |

ಬೆಂಗಳೂರು: ಇತ್ತೀಚೆಗೆ ಹೈಗ್ರೌಂಡ್ಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಒಂದು ಕೋಟಿ ರೂ. ದರೋಡೆ ಪ್ರಕರಣದಲ್ಲಿ ಸಿಸಿಬಿಯ ಎಎಸ್‌ಐ ಹೊಂಬಾಳೇಗೌಡ ಹಾಗೂ ಪೇದೆಗಳಾದ ನರಸಿಂಹಮೂರ್ತಿ, ಗಂಗಾಧರ್‌ ಕೈವಾಡ ಇರುವುದು ಪತ್ತೆಯಾಗಿದ್ದು, ಮೂವರನ್ನೂ ಸೇವೆಯಿಂದ ಅಮಾನತುಗೊಳಿಸಲಾಗಿದೆ.

Advertisement

ಪ್ರಕರಣದ ನಂತರ ಮೂವರೂ ಆರೋಪಿಗಳು ನಾಪತ್ತೆಯಾಗಿದ್ದು, ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಆರೋಪದ ಹಿನ್ನೆಲೆಯಲ್ಲಿ ನಗರ ಪೊಲೀಸ್‌ ಆಯುಕ್ತರು ಮೂವರೂ ಸಿಬ್ಬಂದಿಯನ್ನು ಅಮಾನತುಗೊಳಿಸಿ ಶುಕ್ರವಾರ ಸಂಜೆ ಆದೇಶಿಸಿದ್ದಾರೆ. ಈ ಮಧ್ಯೆ ಇದೇ ಪ್ರಕರಣದಲ್ಲಿ ಸಿಸಿಬಿ ಎಸಿಪಿ ಮರಿಯಪ್ಪ ಬಗ್ಗೆಯೂ ಅನುಮಾನವಿದ್ದು, ಪ್ರಕರಣದ ವಿಶೇಷ ತನಿಖಾ ತಂಡ ಹೇಳಿಕೆ ಪಡೆಯುವ ಸಾಧ್ಯತೆಯಿದೆ.

ಅಂದು ಏನಾಗಿತ್ತು?: ವಿಜಯನಗರದ ಬಿಎಂಟಿಸಿ ನಿರ್ವಾಹಕ ಸುಬಾನು ಎಂಬುವರು ಹೈಗ್ರೌಂಡ್ಸ್‌ ಠಾಣೆಗೆ ದೂರು ನೀಡಿ, ನ.25ರಂದು ರಾತ್ರಿ 8 ಗಂಟೆ ಸುಮಾರಿಗೆ ಹಳೇ ನೋಟು ಬದಲಾವಣೆಗೆಂದು ಹೋಗಿದ್ದೆ. ಆಗ ಸ್ವಿಫ್ಟ್ ಕಾರಿನಲ್ಲಿ ಪೊಲೀಸರ ಸೋಗಿನಲ್ಲಿ ಬಂದಿದ್ದ ಮೂವರು ನನ್ನನ್ನು ಬೆದರಿಸಿ 1 ಕೋಟಿ ರೂ. ಮೌಲ್ಯದ ನೋಟು ದೋಚಿದ್ದಾರೆ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಕೋರಿದ್ದರು. ಸ್ನೇಹಿತರಾದ ರಾಗಿಣಿ, ರತ್ನಾ ಅವರೊಂದಿಗೆ ಹಳೇಯ ನೋಟು ಬದಲಾವಣೆಗೆ ಬಂದಿದ್ದಾಗ ದೋಚಿರುವ ಪ್ರಕರಣದ ಹಿಂದೆ ವೆಂಕಟೇಶ್‌, ಸತ್ಯನಾರಾಯಣ, ಚಂದ್ರಶೇಖರ್‌ ಮತ್ತು ವಿಷ್ಣು ಎಂಬುವರ ಕೈವಾಡ ಇರಬಹುದು ಎಂದು ಅನುಮಾನಿಸಿದ್ದರು.

ನಾನು ಮನೆ ಖರೀದಿಗಾಗಿ ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದೆ. ಸಾಲ ಮರುಪಾವತಿ ಮಾಡದ ಕಾರಣಕ್ಕೆ ಬ್ಯಾಂಕ್‌ನಿಂದ ಮನೆ ಹರಾಜಿಗೆ ಇಡಲಾಗಿತ್ತು. ಸಹಾಯ ಕೋರಿ ರಿಯಲ್‌ ಎಸ್ಟೇಟ್‌ ಏಜೆಂಟ್‌ ಸತ್ಯನಾರಾಯಣ ಬಳಿ ಹೋಗಿದ್ದಾಗ, “ರದ್ದಾದ ನೋಟು ಹೊಂದಿರುವ ವ್ಯಕ್ತಿಗಳು ಇದ್ದರೆ ಹೇಳು, ಹೊಸ ನೋಟಿಗೆ ಬದಲಾವಣೆ ಮಾಡಿಕೊಳ್ಳೋಣ, ನಿನಗೆ ಕಮಿಷನ್‌ ಕೊಡುತ್ತೇನೆ’ ಎಂದು ಹೇಳಿದ್ದ. 

ಇದಕ್ಕೆ ಒಪ್ಪಿ ನನಗೆ ಪರಿಚಯವಿದ್ದ ರತ್ನಾ ಎಂಬುವರಿಗೆ ತಿಳಿಸಿದಾಗ ಆಕೆ ತನ್ನ ಸ್ನೇಹಿತೆ ರಾಗಿಣಿ ಬಳಿ ರದ್ದಾದ ನೋಟು ಇರುವುದಾಗಿ ಹೇಳಿದ್ದರು. ಅದನ್ನು ಸತ್ಯನಾರಾಯಣಗೆ ತಿಳಿಸಿದಾಗ ಒಂದು ಕೋಟಿ ರೂ. ಮೌಲ್ಯದ ರದ್ದಾದ ನೋಟು ತೆಗೆದುಕೊಂಡು ಬಿಟಿಎಂ ಲೇಔಟ್‌ಗೆ ಬರುವಂತೆ ತಿಳಿಸಿದ್ದ. ಅದರಂತೆ ನಾವು ಹೋದಾಗ ಸತ್ಯನಾರಾಯಣ ಜತೆಗಿದ್ದ ವೆಂಕಟೇಶ್‌ ಎಂಬಾತ,

Advertisement

ತಾನು ನೋಟು ಬದಲಿಸಿಕೊಡುವುದಾಗಿ ಹೇಳಿ, ರೇಸ್‌ಕೋರ್ಸ್‌ ರಸ್ತೆಗೆ ಬರಲು ತಿಳಿಸಿದ್ದ. ರತ್ನಾ ಮತ್ತು ರಾಗಿಣಿ ಅವರೊಂದಿಗೆ ಹಳೇ ನೋಟು ತೆಗೆದುಕೊಂಡು ರಾತ್ರಿ 8 ಗಂಟೆಗೆ ರೇಸ್‌ಕೋರ್ಸ್‌ ರಸ್ತೆಗೆ ಹೋದಾಗ ಹಣ ಬದಲಾವಣೆ ಮಾಡಿಕೊಟ್ಟು ವೆಂಕಟೇಶ್‌ ಅಲ್ಲಿಂದ ತೆರಳಿದ. ಆ ನಂತರ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಕಾರಿನಲ್ಲಿ ಬಂದ ಮೂವರು ಅಪರಿಚಿತರು, “ಶೇಷಾದ್ರಿಪುರ ಪೊಲೀಸರು’ ಎಂದು ಹೆದರಿಸಿ ನಮ್ಮ ಬಳಿಯಿದ್ದ ನೋಟಿನ ಬ್ಯಾಗ್‌ ಕಿತ್ತುಕೊಂಡು ಹೋದರು.

ತಕ್ಷಣ ಅನುಮಾನ ಬಂದು ಶೇಷಾದ್ರಿಪುರ ಠಾಣೆಗೆ ಬಂದು ವಿಚಾರಿಸಿದಾಗ ಅಂತವರು ಯಾರು ಬಂದಿಲ್ಲ ಎಂದು ಪೊಲೀಸರು ಖಚಿತಪಡಿಸಿದರು. ಹೀಗಾಗಿ, ಬಂದವರು ನಕಲಿ ಪೊಲೀಸರು ಇರಬಹುದು ಎಂದು ದೂರಿನಲ್ಲಿ ತಿಳಿಸಿದ್ದರು. ಪ್ರಕರಣದ ಬೆನ್ನತ್ತಿದ್ದ ಪೊಲೀಸರಿಗೆ ನ.25ರಂದು ರಾತ್ರಿ ಸುಬಾನ್‌, ರತ್ನ, ರಾಗಿಣಿ ಅವರ ಬಳಿಯಿದ್ದ ಹಣ ದೋಚಿದವರು ಸಿಸಿಬಿ ಪೊಲೀಸರೇ ಎಂಬ ಅಂಶ ಗೊತ್ತಾಗಿದ್ದು, ಘಟನೆ ನಂತರ ಮೂವರೂ ನಾಪತ್ತೆಯಾಗಿದ್ದಾರೆ.

ಪತ್ತೆಯಾಗಿದ್ದು ಹೇಗೆ?: ಸಿಸಿಬಿ ಎಎಸ್‌ಐ ಹೊಂಬಾಳೇಗೌಡ, ಪೇದೆಗಳಾದ ನರಸಿಂಹಮೂರ್ತಿ ಹಾಗೂ ಗಂಗಾಧರ್‌ ದಾಳಿ ನಡೆಸುವ ಸಂದರ್ಭದಲ್ಲಿ ಬಳಸಿದ್ದ ಟ್ರಾವೆಲ್ಸ್‌ ಏಜೆನ್ಸಿಯ ಕಾರು, ಇಡೀ ಪ್ರಕರಣ ಬಯಲಿಗೆ ಬರಲು ಸಾಕ್ಷ್ಯವಾಯಿತು. ದೂರುದಾರ ಸುಬಾನಾ ಬರೆದುಕೊಂಡಿದ್ದ ಕಾರಿನ ನಂಬರ್‌ ಆಧರಿಸಿ ತನಿಖೆ ನಡೆಸಿದಾಗ ಕೃತ್ಯಕ್ಕೆ ಬಳಕೆಯಾದ ಸ್ವಿಫ್ಟ್ ಕಾರು ಚಾಮರಾಜಪೇಟೆಯ ಟ್ರಾವೆಲ್ಸ್‌ ಏಜೆನ್ಸಿಗೆ ಸೇರಿದ್ದು ಎಂದು ತಿಳಿದು ಬಂದಿದೆ.

ಏಜೆನ್ಸಿಯಲ್ಲಿ ವಿಚಾರಿಸಿದಾಗ “ಸಿಸಿಬಿ ಪೊಲೀಸರು ದಾಳಿ ವೇಳೆ ಕಾರು ಬಾಡಿಗೆ ಪಡೆಯುತ್ತಾರೆ ಎಂದು. ಘಟನೆ ನಡೆದ ದಿನ ಈ ಮೂವರು ಸಿಬ್ಬಂದಿ, ದಾಳಿಗೆ ಹೋಗುವುದಾಗಿ ಹೇಳಿ ಸ್ವಿಫ್ಟ್ ಕಾರು ಬಾಡಿಗೆಗೆ ಪಡೆದಿದ್ದರು’ ಎಂದು ಏಜೆನ್ಸಿಯವರು ತಿಳಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

15 ಕೋಟಿಯಲ್ಲಿ ಮೂರು ಕೋಟಿ ಮಿಸ್‌?: ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದ ಹಳೇ ಮತ್ತು ಹೊಸ ನೋಟುಗಳ ಹತ್ತಾರು ಕೋಟಿ ರೂ. ಹಣದ ಪೈಕಿ ಒಂದು ಕೋಟಿಗೂ ಅಧಿಕ ಹಣ ನಾಪತ್ತೆಯಾಗಿದೆ. ಈ ನಾಪತ್ತೆಗೂ ಹೈಗ್ರೌಂಡ್ಸ್‌ ಪ್ರಕರಣಕ್ಕೂ ಸಂಬಂಧ ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

2016ರ ನ.8ರಿಂದ ಇದುವರೆಗಿನ ಬ್ಲ್ಯಾಕ್‌ ಆ್ಯಂಡ್‌ ವೈಟ್‌ ದಂಧೆಯಲ್ಲಿ ಸಿಸಿಬಿ ವಶದಲ್ಲಿದ್ದ 15 ಕೋಟಿ ರೂ. ಹಣದ ಪೈಕಿ ಮೂರು ಕೋಟಿ ರೂ. ನಾಪತ್ತೆಯಾಗಿದೆ ಎನ್ನಲಾಗಿದೆ. ಈ ಹಣ ವಶಕ್ಕೆ ಪಡೆದ ಕುರಿತು ಎಫ್ಐಆರ್‌ ಕೂಡ ದಾಖಲಾಗಿಲ್ಲ. ಬ್ಲ್ಯಾಕ್‌ ಆ್ಯಂಡ್‌ ವೈಟ್‌ ದಂಧೆಕೋರರನ್ನು ಪತ್ತೆ ಹಚ್ಚುವ ತಂಡದ ನೇತೃತ್ವವವನ್ನು ಎಸಿಪಿ ಮರಿಯಪ್ಪ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಈ 3 ಕೋಟಿ ರೂ. ಹಣ ನಾಪತ್ತೆ ಹಿಂದೆ ಯಾರ ಕೈವಾಡ ಇದೆ ಎಂಬುದು ತನಿಖೆಯಿಂದಷ್ಟೇ ತಿಳಿಯಬೇಕಿದೆ.

ಹೈಗ್ರೌಂಡ್ಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ಸಂಬಂಧ ಮೂವರು ಸಿಸಿಬಿ ಪೊಲೀಸರನ್ನು ಅಮಾನತು ಮಾಡಲಾಗಿದೆ. ಮೂವರೂ ತಪ್ಪೆಸಗಿರುವುದು ಮೆಲ್ನೋಟಕ್ಕೆ ಸಾಬೀತಾಗಿದೆ. ಘಟನೆ ನಡೆದ ದಿನ ಯಾರ ಆದೇಶದ ಮೇಲೆ ದಾಳಿ ನಡೆಸಿದ್ದರು ಎಂಬುದು ಅವರು ಪತ್ತೆಯಾದ ನಂತರ ತಿಳಿಯಲಿದೆ. ಎಸಿಪಿ ಮೇಲಿನ ಆರೋಪದ ಬಗ್ಗೆ ಯಾವುದೇ ದೃಢ ಸಾಕ್ಷ್ಯಗಳಿಲ್ಲ.
-ಟಿ.ಸುನಿಲ್‌ ಕುಮಾರ್‌, ನಗರ ಪೊಲೀಸ್‌ ಆಯುಕ್ತ

ಪ್ರಕರಣ ನನ್ನ ಗಮನಕ್ಕೂ ಬಂದಿದೆ. ಪೊಲೀಸ್‌ ಆಯುಕ್ತ ಸುನಿಲ್‌ ಕುಮಾರ್‌ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ. ಹಿರಿಯ ಅಧಿಕಾರಿಯ ಹೆಸರು ಸಹ ಕೇಳಿ ಬಂದಿದ್ದು, ಬೇರೆ ಯಾರೂ ಮಾಡಿಲ್ಲ. ನಮ್ಮ ಇಲಾಖೆಯವರೇ ಮಾಡಿದ್ದಾರೆ.
-ರಾಮಲಿಂಗಾ ರೆಡ್ಡಿ, ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next