ಹೊನ್ನಾವರ: ಚೌತಿ ಹಬ್ಬಕ್ಕೆ ಬರುವ ಗಣಪತಿಗೆ ಪಂಚಕಜ್ಜಾಯವೇ ಮುಖ್ಯ. ಆದರೆ ಚೌತಿಗೂ ಚಕ್ಲಿ ಕಂಬಳಕ್ಕೂ ಯಾವ ಊರಿನ ಸಂಬಂಧವೋ ಗೊತ್ತಿಲ್ಲ. ಕೇರಿಯ ಯಾವುದೋ ಮನೆಯಲ್ಲಿ ನಾಲ್ಕಾರು ತಾಸು ಕರಿದ ಎಣ್ಣೆಯ ವಾಸನೆ ಬಂತೆಂದರೆ ಆ ಮನೆಯಲ್ಲಿ ಚಕ್ಲಿ ಕಂಬಳ ನಡೆಯುತ್ತಿದೆ. ಒಂದೊಂದೇ ಮನೆಯಲ್ಲಿ ನಡೆಯುತ್ತ ಬಂದು, ನಿತ್ಯ ಕರಿದೆಣ್ಣೆ ಊರತುಂಬ ಹರಡುವಾಗ ಚೌತಿ ಬಂತು ಎಂದೇ ಲೆಕ್ಕ.
ಅಕ್ಕಿ, ಪುಣಾಣಿ, ಎಳ್ಳು, ಮೊದಲಾದ ಸಾಮಗ್ರಿಗಳನ್ನು ಬೀಸು ಕಲ್ಲಿನಿಂದ ಹಿಟ್ಟು ಮಾಡಿ, ನೀರು ಸೇರಿಸಿ ಮೆದುವಾಗಿ ಕಲಸಿ ಅದನ್ನು ಕಟ್ಟಿಗೆಯ ಉಪಕರಣದಲ್ಲಿಟ್ಟು ಎರಡೂ ಕೈಯಿಂದ ಒತ್ತುತ್ತ ಚಕ್ರ ತಿರುಗಿಸಿದರೆ ಚಕ್ಲಿ ರೆಡಿ. ಎಣ್ಣೆ ಕಾಯಿಸಿ ಅದರಲ್ಲಿ ಹಿಂದೆ ಮುಂದೆ ಮಗುಚಿ ಬೇಯಿಸಿ, ಕಾಗದದ ಮೇಲೆ ಹರಡಿದಾಗ ಚಕ್ಲಿ ತನ್ನನ್ನೇ ತಿನ್ನು ಎನ್ನುತ್ತಿತ್ತು.
ವರ್ಷಕ್ಕೊಮ್ಮೆ ಬರುವ ಚೌತಿಯ ಹೊರತಾಗಿ ಬೇರೆ ದಿನಗಳಲ್ಲಿ ಚಕ್ಲಿ ಮಾಡುತ್ತಿರಲಿಲ್ಲ. ವರ್ಷಕ್ಕೊಮ್ಮೆ ಮಾತ್ರ ಸಿದ್ಧವಾಗುವ ಈ ತಿಂಡಿ ಮಣ್ಣಿನ ಮಡಿಕೆಯಲ್ಲಿ ತುಂಬಿಟ್ಟು, ತಿಂಗಳುಗಟ್ಟಲೆ ಹಂಚುವುದು, ತಿನ್ನುವುದು ವಾಡಿಕೆಯಾಗಿತ್ತು.
ಗಂಡಸರಿಗೆ ಹಿಟ್ಟು ಮಾಡಿ ಕೊಡುವುದು, ಚಕ್ಲಿ ಸುತ್ತಿಕೊಡುವುದು ಕೆಲಸವಾದರೆ ಹದವಾಗಿ ಸುಡುವುದು ಗೃಹಿಣಿಯರ ಕೆಲಸ. ಡಬ್ಬ ತುಂಬುವುದು, ಮಧ್ಯೆ ಮಧ್ಯೆ ಬಾಯಿಗೆ ಸೇರಿಸುವುದು ಮಕ್ಕಳ ಕೆಲಸವಾಗಿತ್ತು. ನಾಲ್ಕಾರು ಮನೆಯವರು ಸೇರಿದಾಗ ಚಕ್ಲಿ ಕಂಬಳದ ಜೊತೆ ಮಾತುಕತೆ ನಡೆದು, ಕಹಿ ಮರೆತು ಹೋಗುತ್ತಿತ್ತು. ಅವಿಭಕ್ತ ಕುಟುಂಬದಲ್ಲಿ 10-25 ಜನ ಇರುತ್ತಿದ್ದ ಕಾಲದಲ್ಲಿ ಮನೆಯವರೇ ಚಕ್ಲಿ ಮಾಡುತ್ತಿದ್ದರು. ಸಂಖ್ಯೆ ಕಡಿಮೆಯಾದಂತೆ ನಾಲ್ಕಾರು ಮನೆಯವರು ಒಟ್ಟಾಗಿ, ದಿನಕ್ಕೊಂದು ಮನೆಯ ಚಕ್ಲಿ ಕಂಬಳ ಮುಗಿಸುತ್ತಿದ್ದರು. ಈಗ ಕುಟುಂಬದಲ್ಲಿ ಇಬ್ಬರೋ, ಮೂವರೋ ಇರುವ ಕಾಲ. ಆಗಿನಂತೆ ಚಕ್ಲಿಗೆ ಈಗ ಕಾಯಬೇಕಾಗಿಲ್ಲ. ವರ್ಷವಿಡೀ ಚಕ್ಲಿ ಮಾರಾಟಕ್ಕೆ ಸಿಗುತ್ತದೆ. ಅದರಲ್ಲೂ ಟೊಮೆಟೋ, ಪಾಲಕ್, ಮೊದಲಾದ ಸೊಪ್ಪಿನ ಚಕ್ಲಿಗಳೂ ಸಿಗುತ್ತವೆ. ಗ್ರಾಮೀಣ ಭಾಗದಲ್ಲಿ ಅಡುಗೆ ಮಾಡುವವರು ಚೌತಿ ಚಕ್ಲಿಯನ್ನು ಸಿದ್ಧಪಡಿಸಿ, ಮಾರಾಟ ಮಾಡುತ್ತಾರೆ. ಅದನ್ನೇ ತಂದುಕೊಂಡರಾಯಿತು ಅನ್ನುವ ಪರಿಸ್ಥಿತಿ ಬಂದಿದೆ. ಜೊತೆಯಲ್ಲಿ ಹಿರಿಯರು ಮಾಡಿದ ಸಂಪ್ರದಾಯಗಳೆಲ್ಲಾ ವಿವಿಧ ಕಾರಣಗಳಿಂದ ಜನ ಮರೆಯುತ್ತಿದ್ದಾರೆ.
ಈ ಪರಿಸ್ಥಿತಿಯಲ್ಲಿ ಹಳೆಹೊಸದರ ಸಂಗಮದಂತಿರುವ ಶಿರಸಿ ಟಿಎಸ್‌ಎಸ್ ಚಕ್ಲಿ ಕಂಬಳವನ್ನು ತನ್ನ ಅಂಗಳಕ್ಕೆ ತಂದಿದೆ. ಯಾವ ಉಪಕರಣವಿಲ್ಲದೇ ಕೈಯಿಂದಲೇ ಚಕ್ಲಿ ಸುತ್ತುವುದು ಶಿರಸಿಯವರಿಗೆ ಸಿದ್ಧಿಸಿದ ಕಲೆ. ಈ ಸಂಪ್ರದಾಯ ಉಳಿಸಿಕೊಳ್ಳಲು ಚಕ್ಲಿ ಕಂಬಳ ಮಾಡಿದರು. ನೂರಾರು ಉತ್ಸಾಹಿಗಳು ಪಾಲ್ಗೊಂಡರು, ಸಾವಿರಾರು ಜನ ನೋಡಿದರು, ಖರೀದಿಸಿದರು. ಮರೆಯಾಗುತ್ತಿದ್ದ ಒಂದು ಸಂಪ್ರದಾಯಕ್ಕೆ ಹೊಸ ರೂಪಕೊಟ್ಟು ಉಳಿಸಿಕೊಳ್ಳುವ ಟಿಎಸ್‌ಎಸ್ ಯತ್ನ ಚೌತಿ ಹಬ್ಬದ ಪ್ರಮುಖ ಖುಷಿಯೊಂದನ್ನು ಉಳಿಸಿಕೊಳ್ಳುವ ಪ್ರಯತ್ನವೂ ಹೌದು. ಇಂತಹದು ಎಲ್ಲೆಡೆ ನಡೆಯಲಿ.
•ಜೀಯು, ಹೊನ್ನಾವರ