Advertisement

ಕಾಣೆಯಾಗಿದೆ ಬಿ.ಸಿ. ರೋಡ್‌ ಮಳೆ ಮಾಪನ ಕೇಂದ್ರ

10:48 AM Jun 10, 2018 | Team Udayavani |

ಬಂಟ್ವಾಳ : ಎರಡು ವರ್ಷಗಳ ಹಿಂದೆ ಬಿ.ಸಿ. ರೋಡ್‌ನ‌ಲ್ಲಿ ಹತ್ತು ಕೋಟಿ ರೂ. ವೆಚ್ಚದ ಮಿನಿ ವಿಧಾನಸೌಧ ನಿರ್ಮಾಣ ಸಂದರ್ಭ ಬಂಟ್ವಾಳ ತಾಲೂಕು ಕಚೇರಿ ಹಿಂಭಾಗದಲ್ಲಿದ್ದ ಮಳೆ ಮಾಪನ ಕೇಂದ್ರವನ್ನು ಸ್ಥಳಾಂತರಿಸಿದ್ದು, ಬಳಿಕ ಕಾಣೆಯಾಗಿದ್ದು, ಅದರ ಸಲಕರಣೆಗಳು ಮಿನಿ ವಿಧಾನ ಸೌಧ ಕಟ್ಟಡದ ಮೇಲಂತಸ್ತಿನಲ್ಲಿ ಹಾಳಾಗಿ ಅನಾಥವಾಗಿ ಬಿದ್ದುಕೊಂಡಿವೆ.

Advertisement

ಜಿಲ್ಲೆಯಲ್ಲಿ ಅತ್ಯಧಿಕ ಮಳೆ ಬೀಳುವ ಎರಡು ತಾಲೂಕುಗಳಲ್ಲಿ ಬಂಟ್ವಾಳ ಒಂದು. ಇಲ್ಲಿನ ಮಳೆ ಮಾಪಕ ಕೇಂದ್ರವನ್ನು ತೆರವು ಮಾಡಿದ ಸರಕಾ ರದ ವ್ಯವಸ್ಥೆ ಅದನ್ನು ಪುನರ್‌ ರೂಪಿಸುವಲ್ಲಿ ಮರೆತುಹೋಯಿತೇ ಎನ್ನು ವಂತಾಗಿದೆ.

ರಾಜ್ಯದ ಕರಾವಳಿ ಭಾಗದಾದ್ಯಂತ ಮುಂಗಾರು ಮಳೆ ಆರಂಭವಾಗಿದೆ. ಯಾವ ಭಾಗದಲ್ಲಿ ಎಷ್ಟು ಮಳೆಯಾಗಿದೆ ಎಂಬ ನಿಖರ ಮಾಹಿತಿ ಲಭಿಸುವುದು ಮಳೆ ಮಾಪನ ಕೇಂದ್ರದಲ್ಲಿ ಮಾತ್ರ. ಆದರೆ ಬಂಟ್ವಾಳ ತಾಲೂಕು ಕೇಂದ್ರ ಬಿಂದುವಾಗಿ ರುವ ಬಿ.ಸಿ. ರೋಡ್‌ನ‌ಲ್ಲಿ ಮಳೆ ಮಾಪನ ವ್ಯವಸ್ಥೆಯೇ ಇಲ್ಲವಾಗಿದೆ. ಇದರಿಂದ ಮಳೆ ಸುರಿಯುವ ಪ್ರಮಾಣದ ಸ್ಪಷ್ಟ ಅಂಕಿಅಂಶಗಳು ಲಭ್ಯವಾಗುತ್ತಿಲ್ಲ.

ಆರು ಕಡೆ ಮಳೆ ಮಾಪನ
ಬಂಟ್ವಾಳ ತಾಲೂಕಿನ ಮಾರಿಪಳ್ಳ, ರಾಯಿ, ಮಾಣಿ, ಸಂಗಬೆಟ್ಟು, ಕಾವಳಕಟ್ಟೆ, ಬಿ.ಸಿ. ರೋಡ್‌ನ‌ಲ್ಲಿ ಮಳೆ ಮಾಪನ ಕೇಂದ್ರ ಸ್ಥಾಪಿಸಲಾಗಿತ್ತು. ಅರಣ್ಯ ಇಲಾಖೆ, ವಿಟ್ಲ ಸಿಪಿಸಿಆರ್‌ಐ ಪ್ರತ್ಯೇಕ ಮಳೆ ಮಾಪನ ಕೇಂದ್ರ ಹೊಂದಿದೆ. ಈ ಪೈಕಿ ಬಂಟ್ವಾಳ ತಾಲೂಕು ಕೇಂದ್ರ ಬಿ.ಸಿ. ರೋಡ್‌ನ‌ಲ್ಲಿ ಅಳವಡಿಸಲಾಗಿದ್ದ ಮಳೆ ಮಾಪನ ಕೇಂದ್ರ ಮಾತ್ರ ಕಾಣೆಯಾಗಿದೆ. ಈ ಮೊದಲು ಬಂಟ್ವಾಳದ ಕೇಂದ್ರ ಬಿಂದುವಾಗಿ ಬಿ.ಸಿ. ರೋಡ್‌ನ‌ಲ್ಲಿ ಕಾರ್ಯಾಚರಿಸುತಿದ್ದ ತಾಲೂಕು ಪಂಚಾಯತ್‌ ಹಳೆ ಕಟ್ಟಡದಲ್ಲಿ ಮಳೆ ಮಾಪನ ಕೇಂದ್ರದಿಂದಲೇ ಮಳೆಯ ಬಗ್ಗೆ ನಿಖರ ಅಂಕಿಅಂಶ ಸರಕಾರಕ್ಕೆ ಸಲ್ಲಿಕೆಯಾಗುತ್ತಿತ್ತು.

ಅನುಷ್ಠಾನಿಸಿ
ಹಳೆ ತಾ.ಪಂ. ಕಟ್ಟಡವನ್ನು ಕೆಡವಿದ್ದರಿಂದ ಇಲ್ಲಿ ಕಾರ್ಯಾಚರಿಸುತ್ತಿದ್ದ ಎಲ್ಲ ಇಲಾಖಾ ಕಚೇರಿಗಳನ್ನು ನೂತನ ಮಿನಿ ವಿಧಾನಸೌಧದ ಕಟ್ಟಡಕ್ಕೆ ವರ್ಗಾಯಿಸಲಾಗಿದೆ. ಆದರೆ ತಾ| ಕಚೇರಿ ಕಟ್ಟಡದ ಹಿಂಬದಿಯಲ್ಲಿದ್ದ ಮಳೆ ಮಾಪನ ಕೇಂದ್ರ ಮಾತ್ರ ಸೂಕ್ತ ಸ್ಥಳ ಲಭ್ಯವಾಗದೆ ಅನಾಥವಾಗಿದೆ. ಮಳೆ ಮಾಪನ ಕೇಂದ್ರವನ್ನು ನೂತನ ಮಿನಿ ವಿಧಾನಸೌಧದಲ್ಲಿಯೇ ನಿರ್ಮಿಸಿ ಕೊಡಲಾಗುವುದು ಎಂದು ಹೇಳಲಾಗಿದ್ದರೂ ಉದ್ಘಾಟನೆ ಅನಂತರ ಮಳೆ ಮಾಪನ ವ್ಯವಸ್ಥೆ ಅಳವಡಿಸುವಲ್ಲಿ ಎಡವಟ್ಟಾಗಿದೆ.

Advertisement

ಇಲಾಖೆ ಸುಪರ್ದಿಯಲ್ಲಿ
ಮಳೆ ಮಾಪನ ಕೇಂದ್ರವು ಜಲ ಸಂಪನ್ಮೂಲ ಇಲಾಖೆಯ ಸುಪರ್ದಿಯಲ್ಲಿ ಬರುವುದು. ಅದರ ತೆರವು ಸಂದರ್ಭ ಸದರಿ ಇಲಾಖೆಯ ಎಂಜಿನಿಯರ್‌ ಉಪಸ್ಥಿತಿಯಲ್ಲಿ ಕ್ರಮ ಕೈಗೊಳ್ಳಲಾಗಿತ್ತು. 
ಉಮೇಶ್‌ ಭಟ್‌ ಕಾ.ನಿ.
  ಎಂಜಿನಿಯರ್‌, ಲೋಕೋಪಯೋಗಿ
  ಇಲಾಖೆ, ಬಂಟ್ವಾಳ

 ಜಮೀನು ಲಭ್ಯವಾಗಿಲ್ಲ
ಮಿನಿ ವಿಧಾನಸೌಧ ನಿರ್ಮಾಣ ಸಂದರ್ಭ ಮಳೆ ಮಾಪನ ಕೇಂದ್ರವನ್ನು ತಾ.ಪಂ. ಹಳೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಅದರ ತೆರವಿನ ಸಂದರ್ಭ ಮಿನಿ ವಿಧಾನಸೌಧ ಹತ್ತಿರದಲ್ಲಿ ಸ್ಥಳ ಗುರುತಿಸಿದ್ದು, ಅದನ್ನು ಇಂದಿರಾ ಕ್ಯಾಂಟೀನ್‌ಗೆ ನೀಡಲಾಗಿದೆ. ಹಾಗಾಗಿ ಮಾಪಕ ಕೇಂದ್ರಕ್ಕೆ ಸೂಕ್ತ ಜಮೀನು ಲಭ್ಯವಾಗಿಲ್ಲ. ಸೂಕ್ತ ಸ್ಥಳವನ್ನು ಕಂದಾಯ ಇಲಾಖೆ ಒದಗಿಸಿದರೆ, ಮುಂದಿನ ಆರ್ಥಿಕ ವರ್ಷದಲ್ಲಿ 1.50 ಲಕ್ಷ ರೂ.ಅನುದಾನದೊಂದಿಗೆ ಕ್ರಿಯಾ ಯೋಜನೆ ರೂಪಿಸಿ ಕ್ರಮ ಕೈಗೊಳ್ಳಲಾಗುವುದು.
 - ಸುಬ್ರಹ್ಮಣ್ಯ ರಾವ್‌, ಸಹಾಯಕ ಎಂಜಿನಿಯರ್‌, ಜಲಸಂಪನ್ಮೂಲ ಇಲಾಖೆ, ಮಂಗಳೂರು

ರಾಜಾ ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next