ಬೆಂಗಳೂರು: ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಪರಿಷ್ಕೃತ ಅಂತಿಮ ಅಧಿಸೂಚನೆ ಹೊರಡಿಸುವ ವಿಚಾರದಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿರುವ ಪಶುವೈದ್ಯಕೀಯ ಮತ್ತು ಪಶುಸೇವಾ ಇಲಾಖೆ, ಪಶು ವೈದ್ಯರು ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಅಧಿಕಾರಿ ಮತ್ತು ನೌಕರರ ಸೇವೆಯೊಂದಿಗೆ ಚೆಲ್ಲಾಟ ಮುಂದುವರಿಸಿದೆ.
ಒಂದೆರಡು ದಿನಗಳಲ್ಲಿ ಅಂತಿಮ ಅಧಿಸೂಚನೆ ಹೊರಡಿಸುವುದಾಗಿ ಏ.14ರಂದು ಸ್ವತಃ ಪಶುಸಂಗೋಪನಾ ಸಚಿವ ಎ.ಮಂಜು ಸ್ಪಷ್ಟ ಭರವಸೆ ಕೊಟ್ಟಿದ್ದರು. ಆದರೆ, ಸಚಿವರು ಭರವಸೆ ನೀಡಿ ಇಲ್ಲಿಗೆ ಸುಮಾರು 22 ದಿನಗಳು ಕಳೆದಿವೆ.
ಆದರೂ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಅಂತಿಮ ಅಧಿಸೂಚನೆ ಹೊರಬಿದ್ದಿಲ್ಲ.ಸಚಿವರು ಹಾಗೂ ಇಲಾಖೆಯ ಅಧಿಕಾರಿಗಳು ಕೊಟ್ಟ ಮಾತು ತಪ್ಪಿದ್ದರಿಂದ ಪಶುವೈದ್ಯರು ತೀವ್ರ ಆಕ್ರೋಶಗೊಂಡಿದ್ದಾರೆ. ಅಂತಿಮ ಅಧಿಸೂಚನೆ ಹೊರಡಿಸಲು ಪಶು ವೈದ್ಯರ ಸಂಘ ಮೇ 14ರ ಗಡುವು ನೀಡಿದ್ದು, ಒಂದು ವೇಳೆ ಈ ಅವಧಿಯಲ್ಲಿ ಇಲಾಖೆ ಕ್ರಮ ಕೈಗೊಳ್ಳದಿದ್ದರೆ, ಮೇ 15ರಿಂದ ರಾಜ್ಯಾದ್ಯಂತ ಪಶುವೈದ್ಯಕೀಯ ಸೇವೆಗಳನ್ನು ಸ್ಥಗಿತಗೊಳಿಸಿ, ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲು ಮುಂದಾಗಿದೆ.
5 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಅಂತಿಮ ಅಧಿಸೂಚನೆ ವಿಚಾರ ಮುಂದಿಟ್ಟು ಕೊಂಡು ಏ.7ರಿಂದ ಆರಂಭವಾಗಿದ್ದ ರಾಜ್ಯವ್ಯಾಪಿ ಜಾನುವಾರು ಲಸಿಕಾ ಅಭಿಯಾನವನ್ನು ಪಶುವೈದ್ಯರು ಬಹಿಷ್ಕರಿಸಿ
ದ್ದರು. ಈ ಸಂಬಂಧ ಹಲವು ಸುತ್ತಿನ ಮಾತುಕತೆ ನಡೆಸಿ ಪಶುವೈದ್ಯರ ಮನವೊಲಿಸಲು ಇಲಾಖೆಯ ಅಧಿಕಾರಿಗಳು ಪ್ರಯತ್ನಿಸಿದ್ದರು.
ಆದರೆ, ಮಾತುಕತೆ ವಿಫಲವಾಗಿ ಪಶುವೈದ್ಯರು ಲಸಿಕಾ ಅಭಿಯಾನ ದಿಂದ ದೂರ ಉಳಿದಿದ್ದರು. ಅಂತಿಮವಾಗಿ ಸ್ವತಃ ಪಶುಸಂಗೋಪನಾ ಸಚಿವರು ಮಧ್ಯಪ್ರವೇಶಿಸಿ ಅಂತಿಮ ಅಧಿಸೂಚನೆ ಹೊರಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪಶುವೈದ್ಯರ ಸಂಘಕ್ಕೆ ಭರವಸೆ ನೀಡಿದ್ದರು. ಇದನ್ನು ನಂಬಿದ ಪಶು ವೈದ್ಯರು ಏ.15ರಿಂದ ಜಾನುವಾರ ಲಸಿಕಾ ಅಭಿಯಾನದಲ್ಲಿ ಭಾಗವಹಿಸಿದ್ದರು. ಆದರೆ, ಸಚಿವರು ಮಾತು ಕೊಟ್ಟು ಇಲ್ಲಿಗೆ 22 ದಿನ ಕಳೆಯಿತು, ಅಂತಿಮ ಅಧಿಸೂಚನೆ ಮಾತ್ರ ಹೊರಡಿಸಿಲ್ಲ. ಬಿಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಎಂಬಂತೆ, ಆ ಸಂದರ್ಭದಲ್ಲಿ ಮಾತು ಕೊಟ್ಟು ಜಾನುವಾರು ಲಸಿಕಾ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಂಡ ಇಲಾಖೆ ನಂತರ ಕೊಟ್ಟ ಮಾತು ಮರೆತಿದೆ. ಚೆಲ್ಲಾಟ ಮುಂದುವರಿಸಿದೆ ಎಂದು ಪಶುವೈದ್ಯರು ಆರೋಪಿಸುತ್ತಾರೆ.
ಏನಿದು ವಿವಾದ?
50 ವರ್ಷ ಹಳೆಯದಾಗಿದ್ದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಆಡಳಿತ ವಿನ್ಯಾಸ ಹಾಗೂ ಕಾರ್ಯನಿರ್ವಹಣೆಯನ್ನು ಪುನಾರಚಿಸಲು 2011ರಲ್ಲಿ ಐಎಎಸ್ ಅಧಿಕಾರಿ ಮೀರಾ ಸೆಕ್ಸೆನಾ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿಯು 2012ರಲ್ಲಿ ವರದಿ ನೀಡಿತ್ತು. ವರದಿ ಯಂತೆ ಇಲಾಖೆಯನ್ನು ಪುನಾರಚಿಸಿದರೂ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಬದಲಾವಣೆ ಆಗಿರಲಿಲ್ಲ. 4 ವರ್ಷಗಳ ನಂತರ 2016ರಲ್ಲಿ ಪರಿಷ್ಕೃತ ವೃಂದ ಮತ್ತು ನೇಮಕಾತಿ ನಿಯಮಗ ಳನ್ನು ಸಚಿವ ಸಂಪುಟ ಅನುಮೋದಿಸಿದರೂ ಇಲ್ಲಿವರೆಗೂ ಅಂತಿಮ ಅಧಿಸೂಚನೆ ಹೊರಬಿದ್ದಿಲ್ಲ.ಇದರಿಂದಾಗಿ ಇಲಾಖೆಯಲ್ಲಿ ನೇಮಕಾತಿ, ಪದನ್ನೋತಿ ಎಲ್ಲವೂ ನಿಂತು ಹೋಗಿದೆ. ಪರಿಣಾಮ ಸಾವಿರಾರು ಹುದ್ದೆಗಳು ಖಾಲಿ ಬಿದ್ದಿವೆ.
ಸಚಿವರ ಮಾತು ನಂಬಿ ಪಶುವೈದ್ಯರು ಜಾನುವಾರು ಲಸಿಕಾ ಅಭಿಯಾನದಲ್ಲಿ ಭಾಗವಹಿಸಿದ್ದರು. ಆದರೆ, ಈಗ ಸಚಿವರು ಹಾಗೂ ಅಧಿಕಾರಿಗಳು ಮಾತಿಗೆ ತಪ್ಪಿದ್ದಾರೆ. ಅಂತಿಮ ಅಧಿಸೂಚನೆ ಹೊರಡಿಸಲು ಮೇ 14ರವರೆಗೆ ಗಡುವು
ನೀಡಲಾಗುವುದು. ಒಂದು ವೇಳೆ ಈ ಅವಧಿಯಲ್ಲಿ ಬೇಡಿಕೆ ಈಡೇರದಿದ್ದರೆ ಮೇ 15ರಿಂದ ರಾಜ್ಯವ್ಯಾಪಿ ಪಶುವೈದ್ಯಕೀಯ
ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು. ಇದು ಅಂತಿಮ ಹೋರಾಟ, ರಾಜಿಯ ಪ್ರಶ್ನೆಯೇ ಇಲ್ಲ.
– ಡಾ. ಶಿವಶರಣಪ್ಪ ಜಿ. ಯಲಗೋಡ,
ಅಧ್ಯಕ್ಷರು-ಕರ್ನಾಟಕ ಪಶುವೈದ್ಯಕೀಯ ಸಂಘ
– ರಫೀಕ್ ಅಹ್ಮದ್