ಮಂಗಳೂರು: ನೂತನ ಕೇಂದ್ರ ಸರಕಾರದಲ್ಲಿ ದ.ಕ. ಅಥವಾ ಉಡುಪಿ ಕ್ಷೇತ್ರದ ಸಂಸದರು ಸೇರಿದಂತೆ ಕರಾವಳಿ ಭಾಗಕ್ಕೆ ಸಚಿವ ಸ್ಥಾನದ ಪ್ರಾತಿನಿಧ್ಯ ದೊರೆಯಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದ್ದು, ಅವರ ಅಭಿಮಾನಿಗಳಲ್ಲಿ ಕೊಂಚ ನಿರಾಸೆ ಮೂಡಿಸಿದೆ.
ಕಳೆದ ಕೇಂದ್ರ ಸಚಿವ ಸಂಪುಟದಲ್ಲಿ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಸಚಿವರಾಗಿದ್ದರು. ಈ ಬಾರಿ ಅವರು ಅತ್ಯಧಿಕ ಮತಗಳ ಅಂತರದಿಂದ ಗೆದ್ದಿದ್ದರೂ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
ದ.ಕ. ಕ್ಷೇತ್ರದಿಂದ ನಿರಂತರ ಮೂರನೇ ಬಾರಿಗೆ ಆಯ್ಕೆಯಾಗಿರುವ ನಳಿನ್ ಕುಮಾರ್ ಕಟೀಲು ಮತ್ತು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಎರಡನೇ ಬಾರಿಗೆ ಆಯ್ಕೆಯಾಗಿರುವ ಶೋಭಾ ಕರಂದ್ಲಾಜೆ ಪೈಕಿ ಒಬ್ಬರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಬಹುದು ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆಯುತ್ತಿದ್ದವು. ನಳಿನ್ ಮತ್ತು ಶೋಭಾ ಬಿಜೆಪಿಯ ರಾಜ್ಯ ಮತ್ತು ರಾಷ್ಟ್ರ ಪ್ರಭಾವಿ ವಲಯದಲ್ಲಿ ಗುರುತಿಸಿಕೊಂಡಿರುವುದು ಕೂಡ ಸಚಿವ ಸ್ಥಾನದ ಚರ್ಚೆಗೆ ಇನ್ನಷ್ಟು ಪುಷ್ಟಿ ನೀಡಿತ್ತು.
ಕಳೆದ ಬಾರಿ ಅನಂತ್ ಕುಮಾರ್ ಹೆಗಡೆ ಸಚಿವರಾಗುವ ಮೂಲಕ ಕರಾವಳಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ದೊರಕಿತ್ತು. ಈ ಬಾರಿ 4 ಲಕ್ಷಕ್ಕಿಂತಲೂ ಅಧಿಕ ಮತಗಳಿಂದ ಜಯಿಸಿರುವ ಅವರು ಸಚಿವ ಸ್ಥಾನ ಉಳಿಸಿಕೊಳ್ಳಬಹುದು ಎಂಬ ಲೆಕ್ಕಚಾರ ನಡೆಯುತ್ತಿದ್ದವು. ರಾಜ್ಯ ರಾಜಧಾನಿ ಬೆಂಗಳೂರು, ಉತ್ತರ ಕರ್ನಾಟಕ ಮತ್ತು ಮುಂಬಯಿ ಕರ್ನಾಟಕದ ಭಾಗಗಳಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವ ಮೂಲಕ ಈ ಎಲ್ಲ ಚರ್ಚೆಗಳಿಗೆ ಈಗ ತೆರೆ ಬಿದ್ದಿದೆ.
ಡಿವಿ ಜತೆಗೆ ಕರಾವಳಿ ಸಮೀಕರಣ
ಬೆಂಗಳೂರು ಉತ್ತರದ ಸಂಸದ, ದಕ್ಷಿಣ ಕನ್ನಡ ಸುಳ್ಯದ ದೇವರಗುಂಡ ಸದಾನಂದ ಗೌಡ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಏಕಕಾಲದಲ್ಲಿ ಬೆಂಗಳೂರು ಮತ್ತು ಕರಾವಳಿಗೆ ಪ್ರಾತಿನಿಧ್ಯ ನೀಡಿದಂತಾಗಿದೆ ಎಂಬ ವಿಶೆÒàಷಣೆಗಳು ನಡೆದಿವೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಿಂದ ಈ ಹಿಂದೆ ಟಿ.ಎ. ಪೈ, ಆಸ್ಕರ್ ಫೆರ್ನಾಂಡಿಸ್, ಜನಾರ್ದನ ಪೂಜಾರಿ, ವಿ. ಧನಂಜಯ ಕುಮಾರ್ ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದರು. ಚಿಕ್ಕಬಳ್ಳಾಪುರದಿಂದ ಸಂಸದರಾಗಿ ಆಯ್ಕೆಯಾಗಿದ್ದ ಡಾ| ಎಂ. ವೀರಪ್ಪ ಮೊಲಿ ಮತ್ತು ಬೆಂಗಳೂರು ಉತ್ತರದಿಂದ ಆಯ್ಕೆಯಾಗಿರುವ ಸದಾನಂದ ಗೌಡ ಅವರು ಸಚಿವರಾಗಿ ಆಯ್ಕೆಯಾಗಿ ದ.ಕ. ಜಿಲ್ಲೆಗೆ ಕೊಂಡಿಯಾಗಿದ್ದರು.