ಯಾರಾದರೂ ಮಿಸ್ಡ್ ಕಾಲ್ ಕೊಟ್ಟರೆ ಕಿರಿಕಿರಿಯಾಗುತ್ತದೆ. ಪದೇ ಪದೇ ಮಿಸ್ಡ್ ಕಾಲ್ ಕೊಡುವವರನ್ನು ತರಾಟೆಗೆ ತೆಗೆದುಕೊಳ್ಳುವುದೂ ಇದೆ. ಈಗ ಇದೇ ಮಿಸ್ಡ್ ಕಾಲ್ ವಿಷಯವಾಗಿ ಟೆಲಿಕಾಂ ಆಪರೇಟರುಗಳಾದ ಜಿಯೋ, ಏರ್‌ಟೆಲ್, ವೋಡಾಫೋನ್ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ. ಒಂದು ಸಂಸ್ಥೆಯ ಮೊಬೈಲ್ ಸಿಮ್ ಹೊಂದಿರುವ ವ್ಯಕ್ತಿ ಮತ್ತೂಂದು ಸಂಸ್ಥೆಯ ಮೊಬೈಲ್ ಸಂಪರ್ಕ ಹೊಂದಿದವರಿಗೆ ಕಾಲ್ ಮಾಡಿದಾಗ ಕರೆ ಮಾಡಲ್ಪಟ್ಟ ಸಂಸ್ಥೆ, ಸ್ವೀಕರಿಸುವ ಸಂಸ್ಥೆಗೆ ಇಂತಿಷ್ಟು ಮೊತ್ತ ನೀಡಬೇಕು.
ಇದನ್ನು ಇಂಟರ್ ಕನೆಕ್ಟ್ ಯೂಸೇಜ್ ಚಾರ್ಜ್(ಐಖೀಇ) ಎಂದು ಕರೆಯಲಾಗುತ್ತದೆ. ಕರೆ ಸ್ವೀಕರಿಸಿದರೆ ಮಾತ್ರ ಈ ಚಾರ್ಜ್ ತಗುಲುತ್ತದೆ. ಆದರೆ ಜಿಯೋ ಸಂಸ್ಥೆ, ತನ್ನ ಬಳಕೆದಾರನಿಗೆ ವೋಡಾಫೋನ್ ಬಳಕೆದಾರ 4- 5 ರಿಂಗ್ ಕೊಟ್ಟು ಕಾಲ್ ಕಟ್ ಮಾಡಿದರೂ ಶುಲ್ಕ ವಿಧಿಸುತ್ತಿತ್ತು. ಮಿಸ್ಡ್ ಕಾಲ್‌ಗೆ ಶುಲ್ಕ ವಿಧಿಸುವುದು ಸರಿಯಲ್ಲ ಎನ್ನುವುದು ವೋಡಾಫೋನ್ ವಾದ. ಮೇಲ್ನೋಟಕ್ಕೆ ಜಿಯೋ ಮಾಡಿದ್ದು ಸರಿಯಲ್ಲ ಎಂದು ತೋರಬಹುದು. ಆದರೆ ವಿಷಯ ಅಲ್ಲಿಗೆ ಮುಗಿಯುವುದಿಲ್ಲ.
ಜಿಯೋ ತನಗೆ ಬರುವ ಮಿಸ್ಡ್ ಕಾಲ್‌ಗಳಿಗೆ ಶುಲ್ಕ ವಿಧಿಸಿದ್ದರ ಹಿಂದೆ ಒಂದು ಕಾರಣವಿತ್ತು. ಜಿಯೋ ಹೇಳುವ ಹಾಗೆ, ಅದು ಅತ್ಯಂತ ಕಡಿಮೆ ಬೆಲೆಯ ಟಾಕ್ ಟೈಮ್ ಪ್ಲ್ರಾನುಗಳನ್ನು ಬಿಡುಗಡೆಗೊಳಿಸಿದ ಮೇಲೆ ಇತರೆ ಸಂಸ್ಥೆಯ ಬಳಕೆದಾರರು ಜಿಯೋ ಬಳಕೆದಾರರಿಗೆ ಕರೆ ಮಾಡುವಾಗ ಮಿಸ್ಡ್ ಕಾಲ್ ಕೊಡಲು ಪ್ರಾರಂಭಿಸಿದರು. ಕಾಲ್ ರೇಟ್ ಕಡಿಮೆ ಇರುವುದರಿಂದ, ಜಿಯೋದವರೇ ಕಾಲ್ ಮಾಡಲಿ ಎಂದು. ಇದರ ಪರಿಣಾಮವಾಗಿ ಸುಖಾಸುಮ್ಮನೆ ಸಂಸ್ಥೆ ಹೆಚ್ಚಿನ ಇಂಟರ್ ಕನೆಕ್ಟ್ ಯೂಸೇಜ್ ಚಾರ್ಜ್ ಕೊಡಬೇಕಾಗಿ ಬರುತ್ತಿದೆ ಎನ್ನುವುದು ಜಿಯೋ ಅಳಲು.
ಭಾರತದಲ್ಲಿ ಇಂಟರ್ ಕನೆಕ್ಟ್ ಯೂಸೇಜ್ ಚಾರ್ಜ್‌ಅನ್ನು ಟ್ರಾಯ್ ನಿಗದಿ ಪಡಿಸುತ್ತದೆ. ಸದ್ಯ ನಿಗದಿಪಡಿಸಿರುವ ಮೊತ್ತ ಪ್ರತಿ ಕಾಲ್‌ಗೆ ನಿಮಿಷಕ್ಕೆ 6 ಪೈಸೆ. ಈ ಮೊತ್ತವನ್ನು ಸೊನ್ನೆಗೆ ಇಳಿಸಿ ಎನ್ನುವುದು ಜಿಯೋ ವಾದ. 6 ಪೈಸೆಯನ್ನು 14 ಪೈಸೆಗೆ ಏರಿಸಿ ಎನ್ನುವುದು ಏರ್‌ಟೆಲ್ ವಾದ. ಸಾವಿರಾರು ಕೋಟಿ ರೂಪಾಯಿ ದುಡ್ಡನ್ನು ಟೆಲಿಕಾಂನಲ್ಲಿ ಹೂಡಿ, ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಒಂದು ಸಂಸ್ಥೆ ಹಣ ತೊಡಗಿಸುತ್ತದೆ.
ಏಕೆಂದರೆ ತನ್ನ ಗ್ರಾಹಕರಿಗೆ ಉತ್ಯಾಧುನಿಕ ಸೌಲಭ್ಯ ಸಿಗಲಿ ಎನ್ನುವ ದೃಷ್ಟಿಯಿಂದ. ಹೀಗಾಗಿಯೇ ಅದು ತನ್ನ ಗ್ರಾಹಕರಿಗೆ ಫ್ರೀ ಕರೆಗಳು, ಫ್ರೀ ಇಂಟರ್‌ನೆಟ್, ಅದೂ ಸೂಪರ್ ಫಾಸ್ಟ್, ಇಂಥ ಅನೇಕ ಸವಲತ್ತುಗಳನ್ನು ಒದಗಿಸಿದ ಸಂಸ್ಥೆ ಪ್ರತಿ ತಿಂಗಳು ನೂರಾರು ಕೋಟಿ ರೂಪಾಯಿ ಮೊತ್ತವನ್ನು ಇಂಟರ್ ಕನೆಕ್ಟ್ ಯೂಸೇಜ್ ಚಾರ್ಜ್ ಎಂದು ಪ್ರತಿಸ್ಪರ್ಧಿ ಸಂಸ್ಥೆಗಳಿಗೆ ನೀಡಬೇಕಾಗಿ ಬಂದಿರುವುದು ವಿಪರ್ಯಾಸವೇ. ಆದರೆ ಎರಡೂ ಕಡೆಯವರೂ ಅವರವರ ವಾದಗಳನ್ನು, ಮನವಿಗಳನ್ನು ಟ್ರಾಯ್ ಮುಂದೆ ಇಟ್ಟಿದ್ದಾರೆ. ತೀರ್ಪು ಬರಬೇಕಷ್ಟೆ.