Advertisement

ಒಂದು ಹಳ್ಳಿಯ ವಿಶ್ವಸುಂದರಿ

08:47 PM May 28, 2019 | sudhir |

ಪ್ರಚಲಿತ ಆಗುಹೋಗುಗಳ ಬಗ್ಗೆ ತಲೆಯೇ ಕೆಡಿಸಿಕೊಳ್ಳದ ಹೆಣ್ಮಕ್ಕಳು ಕದ್ದುಮುಚ್ಚಿ ಪತ್ರಿಕೆಗಳನ್ನು ಓದಲು ಶುರುಮಾಡಿದ್ದು ಮಾತ್ರ ಬೇರೆಯದೇ ಕಾರಣಕ್ಕೆ. ಅವರ ಗಮನ ಸೆಳೆದಿದ್ದು ಬ್ಯೂಟಿ ಟಿಪ್ಸ್‌ಗಳು! ಆಧುನಿಕತೆ ಸೋಕಿಲ್ಲದ ಒಂದು ಚಿಕ್ಕ ಹಳ್ಳಿಯ ಹೆ‌ಣ್ಮಕ್ಕಳ ಸೌಂದರ್ಯಪ್ರಜ್ಞೆ ಮತ್ತು ಅವರ ಬ್ಯೂಟಿ ಟಿಪ್ಸು ಪ್ರಯೋಗಗಳ ಕುರಿತ ಲಹರಿಯನ್ನು ಲೇಖಕಿ ಇಲ್ಲಿ ಹಂಚಿಕೊಂಡಿದ್ದಾರೆ…

Advertisement

ಇದು ಮೊಬೈಲು ನಮ್ಮನ್ನು ಆವರಿಸಿಕೊಳ್ಳುವುದಕ್ಕಿಂತ ಹಿಂದಿನ ಕಥೆ. ಮಾದಲಜಡ್ಡು ಎಂಬ ಹಳ್ಳಿಗೆ ಒಂದು ಸ್ಟುಡಿಯೊ ಬರುವ ತನಕವೂ ಅಲ್ಲಿದ್ದ ಕುಟುಂಬಗಳು ಒಂದು ಬಗೆಯ ಗ್ರಾಮೀಣ ದಿನಚರಿಯನ್ನು ಬಳಸಿಕೊಂಡು ನೆಮ್ಮದಿಯಿಂದ ದಿನ ತಳ್ಳಿಕೊಂಡಿದ್ದವು. ಆಗ, ಹೆಚ್ಚಿನ ಗೃಹಿಣಿಯರು ಏಳು ಮೊಳದ ಸೀರೆ ಉಟ್ಟು ತಲೆ ಬಾಚಿ ತುರುಬು ಕಟ್ಟಿ ಮನೆಯಂಗಳದಲ್ಲಿ ಬೆಳೆದ ಸೇವಂತಿಗೆ, ಅಬ್ಬಲಿಗೆ, ಗೆಂಟಿಗೆ ಹೀಗೆ ಯಾವುದಾದರೂ ಹೂವಿನ ದಂಡೆಯನ್ನು ಮುಡಿದು ನಿತ್ಯಕ್ಕಾದರೆ ಪವನು ಸರ, ಎಳೆ ಕಟಾಣಿ ಧರಿಸಿ ಗಾಜಿನ ಬಳೆಗಳ ಕಿಣಿ ಕಿಣಿ ನಾದದೊಂದಿಗೆ ಓಡಾಡಿಕೊಂಡಿದ್ದರು. ಹಳ್ಳಿಯ ಶಾಲೆಯಲ್ಲಿ ಓದುತ್ತಿರುವ ಮಕ್ಕಳನ್ನು ಮನೆಗೆ ಬಂದ ಬಳಿಕ ಮಗ್ಗಿ ಬಾಯಿಪಾಠ, ಭಜನೆಯಾಟ ಎಲ್ಲದರಲ್ಲೂ ತೊಡಗಿಸಿಕೊಂಡ ಹಿರಿಯರು ನೆಮ್ಮದಿಯಿಂದಿದ್ದರು.

ಒಂದು ಶಾಲೆ, ಒಂದು ಗ್ರಾಮ ಪಂಚಾಯಿತಿ ವೃತ್ತ ಇದ್ದ ಹಳ್ಳಿಗೆ ಪೋಸ್ಟ್‌ ಆಫೀಸು, ಬ್ಯಾಂಕು, ಜ್ಯೂನಿಯರ್‌ ಕಾಲೇಜು, ಒಂದು ಸಲೂನು, ಸ್ಟುಡಿಯೊ ಹಾಗೂ ಬ್ಯೂಟಿ ಪಾರ್ಲರ್‌ಗಳು ಒಂದಾದ ಮೇಲೊಂದು ಆಗಮಿಸಿ ಹಳ್ಳಿಯನ್ನು ಅಕ್ಕಪಕ್ಕದ ಊರಿಗೆ ಜೋಡಿಸಿದವು. ಒಂದು ಭಟ್ಟರ ಹೋಟೆಲ್ಲು, ಶೆಟ್ಟರ ಅಂಗಡಿ, ಧನ್ವಂತರಿ ವೈದ್ಯರು, ಔಷಧ ಅಂಗಡಿ… ಸುಧಾರಿತ ಸುಸಜ್ಜಿತ ಹಳ್ಳಿಯಾಗಿ ಮಿಂಚತೊಡಗಿತು.

ಸ್ಟುಡಿಯೋದ ಉದ್ಘಾಟನೆಗೆ ಪಟೇಲರನ್ನೇ ಕರೆದಿದ್ದರು. ಪಟೇಲರ ಮೊಮ್ಮಗಳ ಫೋಟೋ ತೆಗೆದು ಕೈಯಲ್ಲಿಟ್ಟಿದ್ದ ಸ್ಟುಡಿಯೊ ಮಾಲಿಕ ಸುಬ್ಬು, ಎರಡು ದಪ್ಪ ಜಡೆ, ತುಂಬಿದ ಗಲ್ಲ, ಉದ್ದ ನೆರಿಗೆಯ ಲಂಗದ ಐದನೇ ಕ್ಲಾಸಿನ ಪಟೇಲರ ಮೊಮ್ಮಗಳು ಅಕ್ಷತಾಳ ಫೋಟೋ ಸ್ಟುಡಿಯೋದಲ್ಲಿ ಕಂಗೊಳಿಸುತ್ತಿತ್ತು. ಹಳ್ಳಿಯವರು ಮೆಲ್ಲಮೆಲ್ಲನೆ ಸ್ಟುಡಿಯೋಗೆ ಹೋಗಿ ತಾವು ಸಾಕಿಕೊಂಡ ಜೋಡೆತ್ತು, ಗಾಡಿ ನೊಗ ನೇಗಿಲುಗಳ ಫೋಟೋ ತೆಗೆಸಿ ಮನೆ ಗೋಡೆಗೆ ನೇತಾಡಿಸತೊಡಗಿದ್ದರು.

ಹೈಸ್ಕೂಲು ಹುಡುಗಿಯರು ಗ್ರೂಪ್‌ ಫೋಟೋ ತೆಗೆಸಲು ಸ್ಟುಡಿಯೋಗೆ ಹೋಗುವುದು ಬರುವುದು ಮಾಡತೊಡಗಿದರು. ಅಷ್ಟೇ ಅಲ್ಲ, ಊರಲ್ಲಿದ್ದ ಏಕಮೇವ ಟೇಲರ್‌ ಗಂಗಣ್ಣನ ಬಳಿ ಲಂಗದ ಉದ್ದವಾಯಿತೆಂದೋ ಗಿಡ್ಡವಾಯಿತೆಂದೋ ತಕರಾರು ತೆಗೆಯತೊಡಗಿದರು.

Advertisement

ಸ್ಟುಡಿಯೋಗೆ ಬರುವ ಹೆಣ್ಣುಮಕ್ಕಳಿಗೆ ಹಾಗೂ ಹೆಂಗಸರಿಗೆ ಸ್ಟುಡಿಯೋ ಸುಬ್ಬಣ್ಣ, “ಒಂಚೂರು ಆ ಬ್ಯೂಟಿ ಪಾರ್ಲರ್‌ಗೆ ಹೋಗಿ ಬನ್ನಿ. ಮೇಡಂ ನಿಮ್ಮನ್ನು ಚಂದ ಕಾಣೂ ಹಾಂಗ್‌ ಮಾಡು¤. ಆಮೇಲೆ ನಾ ತೆಗೀತೆ ಫೋಟೋ’ ಎಂದು ಪುಸಲಾಯಿಸಿ ಬ್ಯೂಟಿಪಾರ್ಲರನ್ನು ನಮ್ಮ ಹಳ್ಳಿ ಮಾತ್ರವಲ್ಲದೆ ಸುತ್ತಮುತ್ತಲಿನ ಯುವತಿಯರ ಆಪ್ತ ತಾಣವಾಗಿ ಪರಿಚಯಿಸಿದ. ಈ ನಡುವೆ ತುದಿಮನೆ ನಾರ್ಣಪ್ಪನವರ ಮಗಳಿಗೆ ಒಂದು ಗಂಡು ಬಂತು. ಇಡೀ ಹಳ್ಳಿಯವರ ಸಮಕ್ಷಮದಲ್ಲಿ ಹೆಣ್ಣು ತೋರಿಸಿ ಎರಡೂ ಮನೆಯವರು ಒಪ್ಪಿ ನಿಶ್ಚಿತಾರ್ಥವೂ ನೆರವೇರಿತು. ಶಹರಿನಲ್ಲಿರುವ ಹುಡುಗ ಹಳ್ಳಿ ಹುಡುಗಿಯನ್ನು ಒಪ್ಪಿದ್ದಾನೆ. ಹುಡುಗಿಯ ಅದೃಷ್ಟ ಎಂದೆಲ್ಲ ಹೊಗಳಿದರು.

ಊರಿಗೆ ಹೋದ ಹುಡುಗ “ನನ್ನ ಸ್ನೇಹಿತರೆಲ್ಲಾ ಕೇಳುತ್ತಿದ್ದಾರೆ. ಹುಡುಗಿಯ ಫೋಟೋ ಕಳಿಸಿ’ ಎಂದು ಪತ್ರ ಬರೆದ. ಹುಡುಗಿ ಯಥಾಪ್ರಕಾರ ಮೊದಲು ಪಾರ್ಲರಿಗೆ ಹೋಗಿ ನಂತರ ಫೋಟೋ ತೆಗೆಸಿದಳು. ಫೋಟೋ ಹುಡುಗನ ಕೈ ಸೇರಿತು. ಮರುದಿನ ಬೆಳಗ್ಗೆ ಹುಡುಗಿಯ ಹೆಸರಿಗೊಂದು ಪೋಸ್ಟ್‌ ಬಂದಿತು ಅದರಲ್ಲಿ ಅವಳು ಕಳಿಸಿದ್ದ ಫೋಟೋ ಮತ್ತು ಒಂದು ಪುಟ್ಟ ಸಂದೇಶವಿತ್ತು.

“ನನ್ನನ್ನು ಹುಡುಕಿಸುವ ಪ್ರಯತ್ನ ಮಾಡಬೇಡಿ. ಹುಡುಗಿಗೆ ಬೇರೆ ವರ ಹುಡುಕಿ ಮದುವೆ ಮಾಡಿ’ ವಿಷಯ ತಿಳಿದ ಹಳ್ಳಿಯ ಹಿರಿಯರೆಲ್ಲ ಸ್ಟುಡಿಯೋದಾತನಿಗೆ ಛೀಮಾರಿ ಹಾಕಿದರು. ನೀನು ನಮ್ಮ ಹುಡುಗಿಯರು ಹೇಗಿದ್ದಾರೋ ಹಾಗೆಯೇ ಫೋಟೋ ತೆಗಿ. ಪಾರ್ಲರಿಗೆ ಕಳಿಸಿ ಅಂದಗೇಡಿನ ಫೋಟೋ ಕಳಿಸಿ ಆದ ಅವಾಂತರ ನೋಡು ಎಂದು ದಬಾಯಿಸಿದರು. ಪಾರ್ಲರಿನ ಮೀನಾಕ್ಷಿ ಆವತ್ತಿಡೀ ಬಾಗಿಲು ತೆರೆಯಲಿಲ್ಲ.

ಅದಾದ ಮೇಲೆ ಪಾರ್ಲರ್‌ಗೆ ಹೋಗಲು ಹಿಂಜರಿಯುತ್ತಿದ್ದ ಹುಡುಗಿಯರು, ಇಡೀ ಹಳ್ಳಿಯಲ್ಲಿ ಪಟೇಲರ ಮನೆಗೆ ಮಾತ್ರ ಬರುತ್ತಿದ್ದ ಪೇಪರಿಗೆ ಮೊರೆ ಹೋದರು. ಅದರಲ್ಲಿ ಪ್ರಕಟಗೊಳ್ಳುತ್ತಿದ್ದ ಬ್ಯೂಟಿ ಟಿಪ್ಸ್‌ಗಳನ್ನು ಕದ್ದುಮುಚ್ಚಿ ಓದಿ ಗುಟ್ಟಾಗಿ ತಾವೇ ಪ್ರಯತ್ನಿಸುತ್ತಿದ್ದರು. ಪರಿಣಾಮ, ಮನೆಗೆ ಪೇಪರುಗಳು ಬರುತ್ತಿದ್ದಂತೆ ಮೊಮ್ಮಗಳು ಎತ್ತಿಡತೊಡಗಿದಳು. ಮೊಮ್ಮಗಳು ತನಗೆ, ತನ್ನ ಗೆಳತಿಯರಿಗೆ ಬೇಕಾದ ಸೌಂದರ್ಯವರ್ಧಕ ಸಾಮಗ್ರಿಯನ್ನು ಒದಗಿಸಲು ಅಜ್ಜಿಯನ್ನೇ ಆಶ್ರಯಿಸುತ್ತಿದ್ದಳು.

ಮುಖದ ಕಾಂತಿ ಹೆಚ್ಚಿಸಲು ಒಂದು ದಿನ ಹೆಸರು ಕಾಳು, ಹಿಟ್ಟು ಹಾಲು, ಬಾಳೆ ಹಣ್ಣು, ಜೇನುತುಪ್ಪ, ಮೊಸರು, ಸಕ್ಕರೆ, ತುಪ್ಪ, ಎಣ್ಣೆ ಬೆಲ್ಲ ಹೀಗೆ ಏನೇನೋ ಐಟಂ ಕೇಳಿ ರೂಮಿನಲ್ಲಿ ಶೇಖರಿಸಿಟ್ಟು ಕಾಲೇಜಿಗೆ ಹೋದಳು. ಬರುವಾಗ ಸ್ನೇಹಿತೆಯರೆಲ್ಲರನ್ನೂ ಕರೆತಂದು “ಮನೆಯಲ್ಲೇ ಸೌಂದರ್ಯ ವೃದ್ಧಿಸಿಕೊಳ್ಳಿ’ ತರಗತಿ ತರಬೇತಿ ನಡೆಸುವುದೆಂದುಕೊಂಡಿದ್ದಳು.

ದುರಾದೃಷ್ಟವಶಾತ್‌, ಮಗಳ ರೂಮಿಗೆ ಏಕೋ ಹೋದ ಪಟೇಲರು ಸತ್ಯನಾರಾಯಣ ಕತೆಗೆ ಬೇಕಾದ ಸಾಮಾನನ್ನೆಲ್ಲ ಇಲ್ಲಿ ಯಾರು ಜೋಡಿಸಿದ್ದು? ಎಂದು ಹೆಂಡತಿಯನ್ನು ಕೇಳಲಾಗಿ ದೊರೆತ ಉತ್ತರದಿಂದ ಕೆಂಡಾಮಂಡಲರಾಗಿ ಎಲ್ಲ ವಸ್ತುಗಳನ್ನು ಕೊಟ್ಟಿಗೆಗೆ ಒಯ್ದು ಸುರಿದರು. ಸಂಜೆ ಕಾಲೇಜಿನಿಂದ ಬಂದ ಮಗಳ ಸ್ನೇಹಿತೆಯರಿಗೆ ಅರ್ಧ ಗಂಟೆ ಕ್ಲಾಸು ತೆಗೆದುಕೊಂಡರು.

“ನೀವೆಲ್ಲ ನಿಮ್ಮಷ್ಟಕ್ಕೆ ಚಂದ ಇದ್ದೀರಿ. ಇನ್ನು ಅದೂ ಇದೂ ಹಚ್ಚಿ ಇರುವ ರೂಪವನ್ನೂ ಕಳೆದುಕೊಳ್ಳೋದು ಬೇಡ’ ಎಂದುಬಿಟ್ಟರು. ಸ್ವಲ್ಪ ಕಪ್ಪಗಿದ್ದ ಕುಸುಮಾ ಬಾಡಿಹೋದಳು. ತೆಳ್ಳಗಿದ್ದ ರಮಾ ಕೆರಳಿಬಿಟ್ಟಳು. ಎಲ್ಲರೂ ಪಟೇಲರ ಮಗಳ ಜತೆ ಠೂ ಬಿಟ್ಟರು. ಪಾರ್ಲರಿನ ಆಂಟಿಗೆ ವಿಷಯ ತಿಳಿಯಿತು. “ಪಾರ್ಲರಿಗೆ ಬರದಿದ್ದರೂ ಪರವಾಯಿಲ್ಲ ನಾನೇ ಸೌಂದರ್ಯವರ್ಧಕಗಳನ್ನು ನಿಮ್ಮ ಮನೆಗೇ ತಲುಪಿಸುತ್ತೇನೆ. ಹಣ ಕೊಡಿ’ ಎಂದು ಧೈರ್ಯ ತುಂಬಿದಳು. ಅಮ್ಮಂದಿರ ಜತೆ ಗುಸುಗುಸು ಪಿಸುಪಿಸು ಮಾಡಿದ ಹುಡುಗಿಯರು ಸಮ್ಮತಿ ಸೂಚಿಸಿದವು. ಕೆಲವು ಅಮ್ಮಂದಿರು ಆರ್ಡರ್‌ ನೀಡಿದರು. ಬರುಬರುತ್ತಾ ಎಲ್ಲ ಹುಡುಗಿಯರಿಗೂ ಅಮ್ಮಂದಿರು ತಲೆಗೆ ಪೂಸುತ್ತಿದ್ದ ಕೊಬ್ಬರಿ ಎಣ್ಣೆ ತಟ್ಟೆ ಮಾಯವಾಗಿ “ಕೇಶವರ್ಧಿನಿ ತೈಲ’ದ ಬಾಟಲಿಗಳು ಪ್ರಕಟವಾದವು. “ಕೇಶ ಕಾಂತಿ’ ಕೇಶ ವೃಷ್ಟಿ, ಕೇಶ ಸಮೃದ್ಧಿ ಶ್ಯಾಂಪೂಗಳು ಮೂಲೆ ಮೂಲೆಯಲ್ಲಿ ಕಾಣತೊಡಗಿದವು. ಚಳಿಗಾಲದಲ್ಲಿ ಒಡೆದ ತುಟಿಗಳಿಗೆ ಬೆಣ್ಣೆ ಸವರಿಕೊಳ್ಳುವ ಪದ್ಧತಿಗೆ ವಿದಾಯ ಹೇಳಿ ಲಿಪ್‌ ಬಾಮ್‌ಗೆ ಶರಣಾದರು. ಅಷ್ಟು ದಿನ ಚರ್ಮ ಚರ್ಮ ಎನ್ನುತ್ತಿದ್ದವರೆಲ್ಲಾ “ತ್ವಚೆ’ ಅನ್ನತೊಡಗಿದರು. ಹಲ್ಲಿಗೆ ಮಂಕಿ ಬ್ರ್ಯಾಂಡ್‌ ಇದ್ದಿಲು ಪುಡಿ ಹೋಗಿ ಟೂತ್‌ಪೇಸ್ಟುಗಳು ಬಂದವು. ನಂತರ ಮಾದಕ ನಗುವನ್ನು ತರಿಸುವ ಪೇಸ್ಟುಗಳ ಜಾಹೀರಾತಿನ ಮೋಡಿಗೆ ಮರುಳಾದ ಯುವತಿಯರೆಲ್ಲರೂ ತಾವೂ ಆ ರೂಪದರ್ಶಿಯಂತಾಗುವ ಆಸೆಯಿಂದ ಅದೇ ಟೂತ್‌ಪೇಸ್ಟನ್ನು ಬಳಸತೊಡಗಿದ್ದರು. ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದ ಬ್ಯೂಟಿ ಟಿಪುÕಗಳ ಗಾಳಕ್ಕೆ ಹಳ್ಳಿಯ ಹುಡುಗಿಯರು ಮಾತ್ರವೇ ಅಲ್ಲ, ಹುಡುಗರೂ ಬೀಳತೊಡಗಿದರು. ಪಟ್ಟಣಗಳಲ್ಲಿ ಓದುತ್ತಿದ್ದ ಹುಡುಗರು ಚಿತ್ರವಿಚಿತ್ರ ಹೇರ್‌ ಸ್ಟೈಲುಗಳನ್ನು ಮಾಡಿಸಿಕೊಂಡು ಬರುತ್ತಿದ್ದರು.

ಶುರುವಿನಲ್ಲಿ ಅವರೆಲ್ಲರೂ ಊರ ಹಿರಿಯರಿಂದ ಬೈಸಿಕೊಳ್ಳುತ್ತಿದ್ದರು. ಆದರೆ ಅದೇ ಹೇರ್‌ಸ್ಟೈಲುಗಳ ಕುರಿತು ಪತ್ರಿಕೆಗಳಲ್ಲಿ ವಿವರಗಳು ಬಂದಾಗ, ಜಾಹೀರಾತುಗಳಲ್ಲಿ ಸಿನಿಮಾಗಳಲ್ಲಿ ನಾಯಕ ಅದೇ ಹೇರ್‌ಸ್ಟೈಲ್‌ ಮಾಡಿಸಿಕೊಂಡಿರುವುದನ್ನು ಕಂಡಾಗ ಊರ ಹುಡುಗರಿಗೂ ಉಮೇದು ಹತ್ತಿಬಿಡುತ್ತಿತ್ತು. ತಾವೂ ಅದೇ ಹೇರ್‌ಸ್ಟೈಲ್‌ ಮಾಡಿಸಿಕೊಳ್ಳಬೇಕು ಎಂದಾಸೆ ಮೂಡುತ್ತಿತ್ತು. ಆದರೆ ಊರಿನಲ್ಲಿದ್ದ ಏಕೈಕ ûೌರಿಕ ಬಾಬಣ್ಣನಿಗೆ ಅಷ್ಟೊಂದು ಪ್ರಾವೀಣ್ಯತೆ ಇರಲಿಲ್ಲ. ಹೀಗಾಗಿ ಅವನನ್ನು ಟ್ರೇನಿಂಗ್‌ ಪಡೆದು ಬರಲು ನಗರಕ್ಕೆ ಕಳಿಸಿದರು. ಆಮೇಲಿನದ್ದು ಅವನು ಮಾಡಿದ್ದೇ ಸ್ಟೈಲು. ತಲೆಬುಡ ಅರ್ಥವಾಗದ ತಲೆ ಹೊತ್ತು ತಲೆ ಎತ್ತಿ ನಡೆದಾಡತೊಡಗಿತು ಯುವ ಜನತೆ.

ಹುಡುಗಿಯರಂತೂ ಸೌತೆಕಾಯಿ ಉಪ್ಪು ತಿನ್ನುವ ಹಳ್ಳಿಯ ರಿಕ್ರಿಯೇಷನ್‌ ಕ್ಲಬ್ಬನ್ನು ಮುಚ್ಚಿಬಿಟ್ಟರು.

ಒಂದು ಸಲ ಪಟೇಲರ ಮನೆಗೆ ಬಂದಿದ್ದ ನೆಂಟರ ತೀರಾ ಸಣ್ಣ ಪಿಳ್ಳೆಯೊಂದು ಅಕ್ಕನ ರೂಮೊಳಗೆ ಹೋಗಿಬಿಟ್ಟಿತು. ಅಲ್ಲಿ ಇಬ್ಬರು ಹೆಣ್ಮಕ್ಕಳು ಕೂತಿದ್ದರು. ಅವರನ್ನು ನೋಡಿ ಆ ಮಗು ಕಿಟಾರನೆ ಕಿರುಚಿ ಓಟ ಕಿತ್ತಿತು. ಮುಖಕ್ಕೆ ಮೈದಾ ಪ್ಯಾಕ್‌ ಹಾಕಿ ಕಣ್ಣ ಮೇಲೆ ಸೌತೆಕಾಯಿ ತುಂಡುಗಳನ್ನಿಟ್ಟು, ಕಾಲುಗಳನ್ನು ಬಕೆಟ್ಟಲ್ಲಿ ಇಳಿಬಿಟ್ಟು ಕೂತಿದ್ದ ಆ ಎರಡು ಆಕೃತಿಗಳನ್ನು ನೋಡಿ ಮಗು ಓಡಿದ್ದರಲ್ಲಿ ಏನೂ ಅಚ್ಚರಿಯೇನೂ ಇರಲಿಲ್ಲ.

ಆ ಹುಡುಗಿಯರೆಲ್ಲಾ ಈಗ ನಗರಗಳಲ್ಲಿದ್ದಾರೆ. ಹಳ್ಳಿಯ ಆರೈಕೆಯಲ್ಲಿ ನಳನಳಿಸುತ್ತಿದ್ದ ಈ ನಳಿನಾಕ್ಷಿಯರೆಲ್ಲ ಸೋತು ಸೊರಗಿ ಊರಿಗೆ ಬಂದಾಗ ಪಟೇಲರ ಪತ್ನಿ ಅವರ ಕೂದಲು ಬಾಚುತ್ತಾ “ನಮ್ಮನೆ ಮಕ್ಕಳೇ ನಿಮಗೆಲ್ಲಾ ಒಂದ್ಮಾತು. ಆರೋಗ್ಯಕರ ಆಹಾರ, ವಿಹಾರ ಚಿಂತನೆ, ಪ್ರಾರ್ಥನೆ, ಧ್ಯಾನ, ಒಳ್ಳೆಯ ನಿದ್ದೆ… ಇಷ್ಟು ಮಾಡಿ ನಿಮ್ಮ ಸೌಂದರ್ಯ ಇಮ್ಮಡಿಸದಿದ್ದರೆ ಕೇಳಿ’ ಎನ್ನುತ್ತಾರೆ.

– ಭುವನೇಶ್ವರಿ ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next