Advertisement

ನಿಖೀಲ್‌ ಎದುರು ಮಿಸ್‌ ಇಂಡಿಯಾ ವರ್ಲ್ಡ್!

10:37 AM Aug 22, 2017 | |

ದರ್ಶನ್‌ ಅಭಿನಯದ 50ನೇ ಚಿತ್ರವಾದ “ಕುರುಕ್ಷೇತ್ರ’ದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಮಗ ನಿಖೀಲ್‌ ಕುಮಾರ್‌, ಅಭಿಮನ್ಯು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಈಗ ನಿಖೀಲ್‌ಗೆ ನಾಯಕಿಯ ಆಯ್ಕೆ ಆಗಿದೆ. ಚಿತ್ರದಲ್ಲಿ ಉತ್ತರೆಯಾಗಿ ಫೆಮಿನಾ ಮಿಸ್‌ ಇಂಡಿಯಾ ವರ್ಲ್ಡ್ ವಿಜೇತ ಅದಿತಿ ಆರ್ಯ ನಟಿಸುತ್ತಿದ್ದಾರೆ.

Advertisement

ಅದಿತಿ ಆರ್ಯ ಈಗಾಗಲೇ ಮಾಡೆಲಿಂಗ್‌ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರೂ, ಚಿತ್ರರಂಗದಲ್ಲಿ ಇನ್ನೂ ಅಂಬೆಗಾಲು ಇಡುತ್ತಿದ್ದಾರೆ. ಇದುವರೆಗೂ ಅವರು ಅಭಿನಯಿಸಿರುವ ಚಿತ್ರವೊಂದೇ. ಅದು ಪುರಿ ಜಗನ್ನಾಥ್‌ ನಿರ್ದೇಶನದ ತೆಲುಗು ಚಿತ್ರ “ಇಸಂ’. ಈ ಚಿತ್ರದಲ್ಲಿ ನಾಯಕಿಯಾಗಿ ಎಂಟ್ರಿ ಕೊಟ್ಟ ಅದಿತಿಗೆ, “ಕುರುಕ್ಷೇತ್ರ’ ಎರಡನೆಯ ಚಿತ್ರ. ಅಷ್ಟೇ ಅಲ್ಲ, ಕನ್ನಡದಲ್ಲಿ ಮೊದಲ ಚಿತ್ರ.

ಈ ಚಿತ್ರದಲ್ಲಿ ಅದಿತಿ, ಅಭಿಮನ್ಯುವಿನ ಹೆಂಡತಿ ಉತ್ತರೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. “ಕುರುಕ್ಷೇತ್ರ’ ಚಿತ್ರದಲ್ಲಿ ದರ್ಶನ್‌, ದುರ್ಯೋಧನನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಿಕ್ಕಂತೆ ಅಂಬರೀಶ್‌, ರವಿಚಂದ್ರನ್‌, ಅರ್ಜುನ್‌ ಸರ್ಜಾ, ಸಾಯಿಕುಮಾರ್‌, ಶಶಿಕುಮಾರ್‌, ರವಿಶಂಕರ್‌, ಶ್ರೀನಾಥ್‌, ಜಿ.ಕೆ. ಶ್ರೀನಿವಾಸಮೂರ್ತಿ, ಲಕ್ಷ್ಮೀ, ಸ್ನೇಹ, ಹರಿಪ್ರಿಯಾ, ನಿಖೀಲ್‌ ಕುಮಾರ್‌ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.

ಚಿತ್ರಕ್ಕೆ ಹೆಸರಾಂತ ತಂತ್ರಜ್ಞರ ತಂಡವನ್ನು ಕಲೆ ಹಾಕಲಾಗಿದ್ದು, ಜಯನನ್‌ ವಿನ್ಸೆಂಟ್‌ ಛಾಯಾಗ್ರಹಣ, “ಕಿಂಗ್‌ ಸಾಲೋಮನ್‌’ ರವಿ ಸಾಹಸ, ಹರಿಕೃಷ್ಣ ಸಂಗೀತ, ಜೊ.ನಿ.ಹರ್ಷ ಸಂಕಲನ ಚಿತ್ರಕ್ಕಿದೆ. ಜಿ.ಕೆ. ಭಾರವಿ ಅವರು ಚಿತ್ರಕಥೆಯನ್ನು ರಚಿಸಿದ್ದು, ಯೋಜನಾ ನಿರ್ದೇಶಕರಾಗಿ ಜಯಶ್ರೀದೇವಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಹಿರಿಯ ನಿರ್ದೇಶಕ ನಾಗಣ್ಣ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಥ್ರಿಡಿಯಲ್ಲಿ ತಯಾರಾಗುತ್ತಿರುವ ಈ ಚಿತ್ರದ ಚಿತ್ರೀಕರಣ ಹೈದರಾಬಾದ್‌ನಲ್ಲಿ ಸತತವಾಗಿ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next