ಕಾಪು: ತುಳುನಾಡಿನಲ್ಲಿ ದೈವಾರಾಧನೆಯಷ್ಟೇ ನಾಗಾರಾಧನೆಗೂ ಮಹತ್ವವಿದೆ. ಕಲಿಯುಗದ ಪ್ರತ್ಯಕ್ಷ ದೇವೆರೆಂದೇ ಕರೆಯಲ್ಪಡುವ ನಾಗದೇವರ ಆರಾಧನೆಯಿಂದ ಸಕಲ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ತುಳುವರಲ್ಲಿದೆ. ಅದರಂತೆ 2022 ರ ಮಿಸ್ ಇಂಡಿಯಾ ಆಗಿ ಮೂಡಿ ಬಂದಿರುವ ಸಿನಿ ಶೆಟ್ಟಿ ಅವರು ಕೂಡಾ ನಾಗದೇವರ ಭಕ್ತೆಯಾಗಿದ್ದು, ತುಳುನಾಡಿಗೆ ಬಂದಾಗಲೆಲ್ಲಾ ನಾಗದೇವರ ಪೂಜೆಯಲ್ಲಿ ಪಾಲ್ಗೊಳುತ್ತಾರೆ. ಅವರ ಕುರಿತಾಗಿ ಒಂದಿಷ್ಟು ಮಾಹಿತಿ ಇಲ್ಲಿದೆ.
ಕಾಪು ತಾಲೂಕಿನ ಇನ್ನಂಜೆ ಗ್ರಾಮದ ಮಡುಂಬು ಹೊಸಮನೆ ಸದಾನಂದ ಬಿ. ಶೆಟ್ಟಿ ಮತ್ತು ಬೆಳ್ಳಂಪಳ್ಳಿ ಪುಂಚೂರು ಮಾಧವ ನಿಲಯ ಹೇಮಾ ಎಸ್. ಶೆಟ್ಟಿ ದಂಪತಿಯ ಪುತ್ರಿ ಸಿನಿ ಶೆಟ್ಟಿ ಹುಟ್ಟಿದ್ದು ಮತ್ತು ಬೆಳೆದಿದ್ದು ಎಲ್ಲವೂ ಮುಂಬಯಿಯಲ್ಲಿ. ಆದರೂ ಹೆತ್ತವರ ಜನ್ಮಭೂಮಿಯ ಬಗ್ಗೆ ವಿಶೇಷ ಮಮತೆ ಹೊಂದಿರುವ ಸಿನಿ ಶೆಟ್ಟಿ ಮಿಸ್ ಇಂಡಿಯಾ ಸ್ಪರ್ಧೆಯ ಪ್ರಥಮ ಹಂತದ ಸ್ಪರ್ಧೆಯಲ್ಲಿ ಕರ್ನಾಟಕ ಮತ್ತು ಮುಂಬಯಿ ರಾಜ್ಯವನ್ನು ಪ್ರತಿನಿಧಿಸಿದ್ದವರು. ಆದರೆ ಟಾಪ್ ಟೆನ್ ಸ್ಪರ್ಧೆಗೆ ಕರ್ನಾಟಕದಿಂದ ಆಯ್ಕೆಯಾಗಿದ್ದ ಅವರು ಮಿಸ್ ಇಂಡಿಯಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಇದನ್ನೂ ಓದಿ:ವಿಂಬಲ್ಡನ್-2022: ರಿಬಾಕಿನಾ, ಗಾರಿನ್ ಕ್ವಾ.ಫೈನಲ್ ಪ್ರವೇಶ
ಕರ್ನಾಟಕವನ್ನು ಪ್ರತಿನಿಧಿಸಿದ್ದ ಮುಂಬಯಿ ಚೆಲುವೆ: ಕರ್ನಾಟಕ ಮತ್ತು ಮಹಾರಾಷ್ಟ್ರದ ಪ್ರತಿನಿಧಿಯಾಗಿ ಸ್ಪರ್ಧೆಗೆ ಕಾಲಿರಿಸಿದ್ದ ಅವರು ಎರಡೂ ರಾಜ್ಯಗಳ ಪ್ರತಿನಿಧಿಯಾಗಿ ಟಾಪ್ 10ರಲ್ಲಿ ಆಯ್ಕೆಯಾಗಿದ್ದರು. ಎ. 28ರಂದು ನಡೆದ ಸ್ಪರ್ಧೆಯಲ್ಲಿ ಮಿಸ್ ಕರ್ನಾಟಕ ಆಗಿ ಆಯ್ಕೆಯಾದ ಬಳಿಕ ಮುಂಬೈ ಪ್ರಾತಿನಿಧ್ಯದಿಂದ ಹಿಂದೆ ಸರಿದು ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದರು. ಅಂತಿಮ ಸುತ್ತಿನ ಸ್ಪರ್ಧೆಗೆ ಆಯ್ಕೆಯಾದ 31 ಮಂದಿ ಸ್ಪರ್ಧಾಳುಗಳ ಜೊತೆ ಸ್ಪರ್ಧಿಸಿ ಟಾಪ್ 10 ಗೆ ಆಯ್ಕೆಯಾಗಿದ್ದು ಬಳಿಕ ಟಾಪ್ 5ರಲ್ಲಿ ಕಾಣಿಸಿಕೊಂಡು ರವಿವಾರ ರಾತ್ರಿ ನಡೆದ ಫೈನಲ್ ಸ್ಪರ್ಧೆಯಲ್ಲಿ ಮಿಸ್ ಇಂಡಿಯಾ ಆಗಿ ಮೂಡಿ ಬಂದಿದ್ದಾರೆ.
ಇದು ನನ್ನ ಜೀವನದ ಅತ್ಯಂತ ಅದ್ಭುತ ಮತ್ತು ವಿಶೇಷ ಸಂದರ್ಭವಾಗಿದೆ. ಬಹಳಷ್ಟು ನಿರೀಕ್ಷೆಯೊಂದಿಗೆ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಮಿಸ್ ಇಂಡಿಯಾ ಆಗಿ ಮೂಡಿ ಬಂದಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಹೆತ್ತವರ ಪ್ರೋತ್ಸಾಹ, ದೈವ ದೇವರ ಆಶೀರ್ವಾದದೊಂದಿಗೆ ಮುಂದಿನ ಮಿಸ್ ವರ್ಲ್ಡ್ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದೇನೆ. ಇದು ಮಿಸ್ ಇಂಡಿಯಾ ಆಗಿ ಮೂಡಿ ಬಂದಿರುವ ಕರಾವಳಿಯ ಬೆಡಗಿ ಸಿನಿ ಶೆಟ್ಟಿ ಅವರ ಅಭಿಪ್ರಾಯ.
71 ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಸಿನಿ ಶೆಟ್ಟಿ ಅವರನ್ನು 2000ರಲ್ಲಿ ವಿಶ್ವ ಸುಂದರಿ ಕಿರೀಟವನ್ನು ಅಲಂಕರಿಸಿರುವ ಪ್ರಿಯಾಂಕ ಚೋಪ್ರಾ ಅವರನ್ನು ಸ್ಪರ್ಧೆಗೆ ಸಿದ್ಧ ಪಡಿಸಿದ್ದ ಅವರೇ ಸಿದ್ಧ ಪಡಿಸಲಿದ್ದಾರೆ.
ಜಾಹೀರಾತು ಲೋಕಕ್ಕೆ ಎಂಟ್ರಿ: ಮಾಡೆಲಿಂಗ್ ಬಗ್ಗೆ ಹೆಚ್ಚಿನ ಒಲವು ತೋರಿಸುತ್ತಿರುವ ಅವರು ಕಳೆದ ಎರಡು – ಮೂರು ವರ್ಷಗಳಿಂದ ಪ್ರಸಿದ್ಧ ಕಂಪೆನಿಗಳ ಅಂಬಾಸಡರ್ ಆಗಿ ಜಾಹೀರಾತು ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ. ಏರ್‌ಟೆಲ್ 4ಜಿ, ಫ್ಯಾಂಟಲೂಮ್, ಶುಗರ್ ಲಿಫ್ಟಿಕ್, ಭೀಮಾ ಜ್ಯುವೆಲ್ಲರ್ಸ್ ಕೇರಳ ಶಾಖೆಯ ಜಾಹೀರಾತಿನಲ್ಲಿ ಮಾಡೆಲಿಂಗ್ ಆಗಿ ಪಾಲ್ಗೊಂಡಿದ್ದಾರೆ. ಪ್ರಸ್ತುತ ವೆಬ್ ಸಿರೀಸ್ ವೊಂದರಲ್ಲಿ ಪಾಲ್ಗೊಳ್ಳುತ್ತಿರುವ ಅವರು ಅವಕಾಶ ಸಿಕ್ಕಿದರೆ ಸಿನಿಮಾ ರಂಗದಲ್ಲೂ ಕೆಲಸ ಮಾಡುವ ಉತ್ಸಾಹ ಹೊಂದಿದ್ದಾರೆ.
ಇದನ್ನೂ ಓದಿ:ಈ ಏರ್ ಕಂಡೀಷನರ್‌ಗೆ ವಿದ್ಯುತ್ ಬೇಕಿಲ್ಲ! ಗುವಾಹಟಿ ಐಐಟಿ ತಜ್ಞರಿಂದ ಹೊಸ ಆವಿಷ್ಕಾರ
ನಾಗ ದೇವರ ಭಕ್ತೆ: ನಾಗ ದೇವರ ಭಕ್ತೆಯಾಗಿರುವ ಸಿನಿ ಶೆಟ್ಟಿ ಕಳೆದ ಎಪ್ರಿಲ್‌ನಲ್ಲಿ ತಾಯಿ ಮನೆಯಲ್ಲಿ ನಡೆದಿದ್ದ ನಾಗ ದೇವರ ಪೂಜಾ ಕಾರ್ಯಕ್ರಮಗಳಲ್ಲಿ ಮನೆ ಮಂದಿಯೆಲ್ಲಾ ಜೊತೆಗೂಡಿ ಭಾಗವಹಿಸಿದ್ದರು. ಮುಂಬಯಿ ಸಿದ್ಧಿ ವಿನಾಯಕ, ಮಹಾಲಕ್ಷ್ಮೀ ಕ್ಷೇತ್ರ, ಶಿರಡಿ ಸಾಯಿಬಾಬ ಮತ್ತು ತಿರುಪತಿ ಶ್ರೀನಿವಾಸ ದೇವರ ಭಕ್ತೆಯೂ ಆಗಿರುವ ಆಕೆ ಸ್ಪರ್ಧೆಯಲ್ಲಿ ಭಾಗವಹಿಸುವ ಮುನ್ನ ಚೆಂಬೂರು ಸುಬ್ರಹ್ಮಣ್ಯ ಮಠದಲ್ಲಿ ವಿಶೇಷ ಪೂಜೆಯನ್ನು ನಡೆಸಿದ್ದರು.
ಮಾಸ್ಟರ್ಸ್ ಪದವಿ: ಅಕೌಂಟಿಂಗ್ ಮತ್ತು ಫೈನಾನ್ಸ್‌ನಲ್ಲಿ ಮಾಸ್ಟರ್ಸ್ ಪದವಿ ಪಡೆದಿರುವ ಸಿನಿ ಶೆಟ್ಟಿ ಅವರು ಪ್ರಸ್ತುತ ಮುಂಬಯಿಯ ವೈರಲ್ ಸೀಸನ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು ಸಿಎಫ್‌ಎ (ಚಾರ್ಟರ್ಡ್ ಫೈನಾನ್ಶಿಯಲ್ ಅನಾಲಿಸ್ಟ್) ಕೋರ್ಸ್ ಮಾಡುತ್ತಿದ್ದಾರೆ.
ಭರತ ನಾಟ್ಯ ಪ್ರವೀಣೆ: ಬಹುಮುಖ ಪ್ರತಿಭೆಯಾಗಿರುವ ಅವರು ಭರತ ನಾಟ್ಯ ತರಬೇತಿ ಪಡೆದಿದ್ದು ಅದರೊಂದಿಗೆ ವೆಸ್ಟರ್ನ್ ನೃತ್ಯ ಸಹಿತವಾಗಿ ವಿವಿಧ ಪ್ರಕಾರಗಳ ನೃತ್ಯಗಳನ್ನೂ ಇಷ್ಟ ಪಡುತ್ತಾರೆ. ನಾಲ್ಕನೇ ವರ್ಷದಲ್ಲಿ ನೃತ್ಯದ ಕಡೆ ಒಲವು ತೋರಿಸಿದ ಅವರು, 14ನೇ ವಯಸ್ಸಿನಲ್ಲಿ ರಂಗ ಪ್ರವೇಶ ಮಾಡಿದ್ದಾರೆ.
ಇನ್‌ಸ್ಟಾ ಗ್ರಾಂನಲ್ಲಿ ಭಾರೀ ಆಕ್ಟೀವ್: ಸಿನಿ ಶೆಟ್ಟಿ ಇನ್‌ಸ್ಟಾ ಗ್ರಾಂನಲ್ಲಿ ಅತೀ ಹೆಚ್ಚು ಕ್ರಿಯಾಶೀಲರಾಗಿದ್ದು 66,6೦೦ಮಂದಿ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಆಗಾಗ ತಮ್ಮ ಸುಂದರ ಫೋಟೋಗಳನ್ನು ಹಂಚಿಕೊಳ್ಳುತ್ತಿರುವ ಅವರು ತನ್ನು ಚೆಲುವಿನ ಮೂಲಕವಾಗಿಯೇ ಅತೀ ಹೆಚ್ಚು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.
ಊರಿನಲ್ಲಿ ಸಂತಸ: ಕಾಪು ತಾಲೂಕಿನ ಇನ್ನಂಜೆ ಸಿನಿ ಶೆಟ್ಟಿಗೆ ಮಿಸ್ ಇಂಡಿಯಾ ಅವಾರ್ಡ್ ಬಂದಿದ್ದು ಸಿನಿ ಶೆಟ್ಟಿ ಅವರ ತಂದೆಯ ಹುಟ್ಟೂರು ಇನ್ನಂಜೆಯಲ್ಲಿ ಸಂಭ್ರಮ ಮನೆ ಮಾಡಿದೆ. ಸಿನಿ ಸಾಧನೆಯನ್ನು ನೆನಪಿಸಿ ಸಂತಸ ಪಟ್ಟಿರುವ ಅವರ ಸಂಬಂಧಿಕರು ನಮ್ಮ ಮನೆಯ ಮಗಳು ವಿಶ್ವ ಸುಂದರಿ ಆಗುತ್ತಾಳೆ. ಅದಕ್ಕೆ ಎಲ್ಲಾ ದೈವ ದೇವರುಗಳ ಅನುಗ್ರಹವಿರುತ್ತದೆ ಎಂದು ಹಾರೈಸಿದ್ದಾರೆ.
ಮಗಳು ಈ ಹಂತದವರೆಗೆ ಏರುತ್ತಾಳೆ ಎಂಬ ನಿರೀಕ್ಷೆಯಿರಲಿಲ್ಲ, ಆದರೆ ಟಾಪ್ 10ರೊಳಗೆ ಸ್ಥಾನ ಪಡೆಯುತ್ತಾಳೆ ಎಂಬ ನಿರೀಕ್ಷೆಯಿತ್ತು. ಆದರೆ ಟಾಪ್ 5ಕ್ಕೆ ಆಯ್ಕೆಯಾದಾಗ ಪ್ರಶಸ್ತಿ ಸುತ್ತಿನಲ್ಲಿ ಯಾವುದಾರೂ ರನ್ನರ್ ಅಪ್ ಪ್ರಶಸ್ತಿ ಬರುವುದು ಖಚಿತವಾಗಿತ್ತು. ನಮ್ಮ ಕಣ್ಣ ಮುಂದೆಯೇ ಮಿಸ್ ಇಂಡಿಯಾ ಆಯ್ಕೆಗಾಗಿ ಟಾಪ್ 5ರ ಸ್ಪರ್ಧಾಳುಗಳ ನಡುವೆ ಅಂತಿಮ ಹಂತದ ಸ್ಪರ್ಧೆ ನಡೆದಿದ್ದು ನಾವಾಗ ಊರಿನ ನಮ್ಮ ದೈವ ದೇವರುಗಳನ್ನು ನೆನಪಿಸಿ, ಪ್ರಾರ್ಥಿಸುತ್ತಿದ್ದೆವು. ಇದೊಂದು ಅತ್ಯಮೋಘ ಕ್ಷಣವಾಗಿದ್ದು, ಮಗಳು ಗೆದ್ದ ಕೂಡಲೇ ಎದ್ದು ನಿಂತು ನಮ್ಮ ಸಂಭ್ರಮವನ್ನು ಹಂಚಿಕೊಂಡೆವು. ಅವಳ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಎನ್ನುತ್ತಾರೆ ಸಿನಿ ತಂದೆ ತಾಯಿ ಸದಾನಂದ ಬಿ. ಶೆಟ್ಟಿ ಮತ್ತು ಹೇಮಾ ಎಸ್. ಶೆಟ್ಟಿ.
ರಾಕೇಶ್ ಕುಂಜೂರು