ಸಂಗೀತ ಸಭಾ ಉಡುಪಿ ಮತ್ತು ಮುಂಬಯಿಯ ಫಸ್ಟ್ ಎಡಿಶನ್ ಆರ್ಟ್ಸ್ ಇವರ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ಮಣಿಪಾಲದ ಗೋಲ್ಡನ್‌ಜುಬಿಲಿ ಸಭಾಂಗಣದಲ್ಲಿ ಕರ್ನಾಟಕ ಹಾಗೂ ಹಿಂದುಸ್ಥಾನಿ ಸಂಗೀತದ ಬೆಸುಗೆಯನ್ನು ಮತ್ತಷ್ಟು ಗಟ್ಟಿಯಾಗಿಸುವುದಕ್ಕಾಗಿ ಎರಡು ದಿನಗಳ “ಕ್ರಾಸ್‌ರೋಡ್ಸ್’ ಎನ್ನುವ ಸಂಗೀತೋತ್ಸವವನ್ನು ಏರ್ಪಡಿಸಲಾಗಿತ್ತು. ಕರ್ನಾಟಕ ಸಂಗೀತ ಕಾರ್ಯಕ್ರಮಗಳಲ್ಲಿ ಮೊದಲ ದಿನ ಸಂಜೆ ಯುವ ಸಂಗೀತ ಪ್ರತಿಭೆ ಚೆನ್ನೈಯ ರಾಮಕೃಷ್ಣನ್ ಮೂರ್ತಿ ಅವರ ಕಛೇರಿಯನ್ನು ಏರ್ಪಡಿಸಲಾಗಿತ್ತು.
ಉತ್ತಮ ಕಂಠ ಮಾಧುರ್ಯ, ವಿದ್ವತ್, ನಿರೂಪಣಾ ಸಾಮರ್ಥ್ಯವನ್ನು ಹೊಂದಿರುವ ಈ ಕಲಾವಿದ ಸಂಗೀತಾಸಕ್ತರು ಒಪ್ಪುವ ರೀತಿಯಲ್ಲಿ ಕಛೇರಿಯನ್ನು ತನ್ನದಾಗಿಸಿಕೊಳ್ಳುವ ಚಾಕಚಕ್ಯತೆಯನ್ನು ಹೊಂದಿದ್ದಾರೆ. ಘನ ರಾಗವಾದ ಕೇದಾರದ ಸಾಪ್ರದಾಯಿಕವಾದ ಆಲಾಪನೆಯೊಂದಿಗೆ ಶಾಂತವಾದ ಆನಂದನಟನಪ್ರಕಾಶಂ ಕೃತಿಯ ಒಳ್ಳೆಯ ಸಂಗತಿಗಳೊಂದಿಗಿನ ಪ್ರಸ್ತುತಿ,”ಸಂಗೀತವಾದ್ಯವಿನೋದ’ ಎಂಬ ಸಾಹಿತ್ಯಕ್ಕೆ ಶುದ್ಧವಾದ ನೆರವಲ್, ರಾಗ ಬದ್ಧವಾದ ಸ್ವರ ಪ್ರಸ್ತಾರ, ಮುಂದೆ ಕಾನಡ ರಾಗದಲ್ಲಿ ವಿಳಂಬ ಕಾಲ ಆದಿತಾಳದಲ್ಲಿ ಮನೋಧರ್ಮದೊಂದಿಗೆ ತ್ಯಾಗರಾಜರ “ಸುಖೀಯವ್ವರೇ’ ಕೃತಿಯ ಗಾಯನ. ಒಂದನೇ ಕಾಲದ ಸcರ ಪ್ರಸ್ತಾರದ ನಂತರ ಎರಡನೇ ಕಾಲದಲ್ಲಿ ಸಣ್ಣ ಸಣ್ಣ ಕಲ್ಪನಾ ಸ್ವರಗಳಿಗೆ ಹೋಗದೆ ನೇರವಾಗಿ ದೀರ್ಘವಾದ ವಿಸ್ತಾರವಾದ ಸ್ವರಗ ಳನ್ನು ಕಾರ್ವೈಗಳೊಂದಿಗೆ ಆಕರ್ಷಕವಾದ ಮುಕ್ತಾಯ ದೊಂದಿಗೆ ನಿರೂಪಿಸಿದರು. ಮುಂದೆ “ಶ್ರೀರಾಮ ಕರ್ಣಾಮೃತಂ’ನಿಂದ ಆಯ್ದ ನವರಸ ಶ್ಲೋಕಗಳನ್ನು ಒಂಭತ್ತು ವಿವಿಧ ರಾಗಗಳಲ್ಲಿ ಸೊಗಸಾಗಿ ಪ್ರಸ್ತುತ ಪಡಿಸಿದರು. ಮುಂದೆ ಕಾಪಿ ರಾಗದಲ್ಲಿ “ಬೃಂದಾವನದೊಳಗಾಡುವನ್ಯಾರೆ ಗೋಪಿ’ ಹಾಗೂ ಫರಜ್ ತಿಲ್ಲಾನ ಗಳೊಂದಿಗೆ ಮಂಗಳ ಹಾಡಿದರು.
ಚಾರುಲತಾ ರಘುರಾಮನ್ ನುಡಿಸಿದ ವಯೊಲಿನ್ ಪಕ್ಕವಾದ್ಯ ನೆನಪಿನಲ್ಲಿಟ್ಟುಕೊಳ್ಳುವಂತಹುದು. ಉಳಿದಂತೆ ಎನ್. ಸಿ. ಭಾರದ್ವಾಜ್ ಮೃದಂಗ, ಜಿ ಚಂದ್ರಶೇಖರ ಶರ್ಮ ಘಟಂ ಪಕ್ಕವಾದ್ಯ ನೀಡಿದರು. ಮರುದಿನ ಬೆಳಗ್ಗಿನ ಕಾರ್ಯಕ್ರಮದಲ್ಲಿ ಸಂಗೀತಾ ಶಿವಕುಮಾರ್ ಅವರ ಕಛೇರಿಯು ನೆರವೇರಿತು. ಈ ಕಲಾವಿದೆ ಒಂದು ಒಳ್ಳೆಯ ಶುದ್ಧ ಸಾಂಪ್ರದಾಯಿಕ ಕಛೇರಿಯನ್ನು ನೀಡಿ ಮನ ತಣಿಸಿದರು. ಪ್ರಾರಂಭದಲ್ಲಿ ಹರಿಕಾಂಭೋಜಿ ರಾಗದ ಆಲಾಪನೆಯೊಂದಿಗೆ ರಾಮನನ್ನುಬ್ರೋವರಾ ಕೃತಿಯಲ್ಲಿ ಮೆಪ್ಪುಲಕೈಕನ್ನತಾವು ಸಾಲನ್ನು ಚಿಕ್ಕ ಚೊಕ್ಕ ನೆರವಲ್ ಹಾಗೂ ಸ್ವರ ವಿನ್ಯಾಸಗಳೊಂದಿಗೆ ವಿಸ್ತರಿಸಿದರು. ನಂತರ ಶ್ಯಾಮಾಶಾಸ್ತ್ರಿಗಳ ಆಹಿರಿ ರಾಗದ ಮಾಯಮ್ಮವನ್ನು ವಿಳಂಬತೆಯ ಸೌಂದರ್ಯವನ್ನು ಪ್ರದರ್ಶಿಸುವಂತೆ ಹಾಡಿದರು. ವಿಸ್ತಾರಕ್ಕಾಗಿ ವರಾಳಿ ಹಾಗೂ ಭೈರವಿಯನ್ನು ಆರಿಸಿಕೊಂಡ ಕಲಾವಿದೆ, ವರಾಳಿಯಲ್ಲಿ “ಏಟಿಜನ್ಮಮು’ ಕೃತಿಯ ಭಾವಪೂರ್ಣವಾದ ಮನೋಧರ್ಮಯುಕ್ತವಾದ ನಿರೂಪಣೆ ಮಾಡಿದರು. ಭೈರವಿಯ ಬಾಲಗೋಪಾಲದ ಪರಿಕಲ್ಪನೆಯೂ ಪರಿಪಕ್ವವಾಗಿತ್ತು. ಬಾರೋಕೃಷ್ಣೆçಯ್ನಾ ದೇವರ ನಾಮದೊಂದಿಗೆ ಕಛೇರಿ ಮುಕ್ತಾಯವಾಯಿತು. ಆರ್. ಕೆ .ಶ್ರೀರಾಮ್‌ಕುಮಾರ್ ವಯೊಲಿನ್, ಮನೋಜ್ ಶಿವ-ಮೃದಂಗ ಹಾಗೂ ಅನಿರುದ್ಧ್ ಆತ್ರೇಯ ಖಂಜೀರ ಸಹಕಾರವನ್ನಿತ್ತರು.
ವಿದ್ಯಾಲಕ್ಷ್ಮೀ ಕಡಿಯಾಳಿ