ಮಳೆಯ ಹನಿಗಳ ಧಾರೆ ಆತ್ಮವನ್ನೂ ದ್ರವಿಸುತ್ತದೆ’ ಎಂಬುದೊಂದು ಪ್ರಾಚೀನ ಹೇಳಿಕೆ. ಅಲ್ಲದೆ ಮಳೆಯ ಹನಿಯ ಧಾರೆಯೇ, ಜುಳುಜುಳು ನಾದ-ನಿನಾದವೇ ಪರಮಾನಂದದಾಯಕವಾಗಿದೆ. ಪಾಶ್ಚಾತ್ಯ ಸಂಸ್ಕೃತಿಯೇ ಇರಲಿ, ಪೌರಸ್ತ್ಯ ಸಂಸ್ಕೃತಿಯೇ ಇರಲಿ ಮಳೆಗಾಲ ಮತ್ತು ಸಂಗೀತದ ನಡುವೆ ಸಮ್ಮಿಳಿತವಿದೆ, ಅದೊಂದು ಅನುಸ್ವಾದನೀಯ ಅನುನಯದ ಬಂಧ- ಮಳೆ ಮತ್ತು ಸಂಗೀತದ ಅಂದ, ಆನಂದ !
ಭಾರತೀಯ ಸಂಗೀತ ವೈಭವ ಶಾಸ್ತ್ರೀಯವಿರಲಿ, ಜಾನಪದವಿರಲಿ, ತಣ್ತೀಪದಗಳಿರಲಿ, ಭಕ್ತಿರಸ ಗಾಯನವಿರಲಿ ಮಳೆ ಮತ್ತು ಮಳೆಗಾಲದಲ್ಲಿ ಕಂಡುಕೊಂಡ ರಸಪೂರ್ಣತೆ ಅತಿ ವಿಶಿಷ್ಟ. ಮಳೆಗಾಲದ ಸೌಂದರ್ಯ-ಸಂತೋಷ, ಮಳೆ ಮೋಡಗಳ ಲಾಸ್ಯ-ಲಾಲಿತ್ಯ, ಮಿಂಚು-ಗುಡುಗುಗಳ ಆರ್ಭಟ, ಗರ್ಜನೆಗಳ ಆಟ ಇವೆಲ್ಲವನ್ನೂ ಶಾಸ್ತ್ರೀಯ ಸಂಗೀತದಲ್ಲಿ ಒಂದೊಂದು ಸ್ವರಗಳಲ್ಲಿ ಆಸ್ವಾದಿಸುವಂತೆ ಹಿಡಿದಿಟ್ಟಿದ್ದಾರೆ, ಭಾರತೀಯ ಶಾಸ್ತ್ರೀಯ ಸಂಗೀತ ಕಲಾಕಾರರು. ಅದರಲ್ಲೂ ಹಿಂದೂಸ್ಥಾನಿ ಸಂಗೀತದ ಮೇರು ತಾನಸೇನ್ ಹಾಡಿದ “ಮಲ್ಹಾರ್’ ಅತೀ ಪ್ರಸಿದ್ಧ. ಮಳೆಗಾಲದ ರಾಗ ವರ್ಷಾಕಾಲವನ್ನು ಆತ್ಮನಲ್ಲಿ ದರ್ಶಿಸುವ, ಚಿತ್ರಿಸುವ, ಸ್ಪರ್ಶಿಸುವ, ಹಾಡಿಪಾಡುವ ಮಳೆ ರಾಗ !
ಮಳೆರಾಗಗಳ ಪಾರಮ್ಯ ಮಧ್ಯಕಾಲೀನ ರಜಪೂತ ರಾಜರ ಸಮಯದಲ್ಲಿ , ಮೊಗಲ್ ಸಾಮ್ರಾಟರ ಕಾಲದಲ್ಲಿ ಹಾಗೂ ಅನೇಕ ನವಾಬರ ಕಾಲದಲ್ಲಿ ಹಲವು ಪ್ರಾಂತ್ಯಗಳಲ್ಲಿ , ಪ್ರಾದೇಶಿಕ ರಾಜರ ಆಶ್ರಯದಲ್ಲಿ ವರ್ಧಿಸಿತು. ತಾನಸೇನ ಹೇಳುವಂತೆ “ಮಳೆ ಮೋಡಗಳು ಆಗಸದಲ್ಲಿ ಒಂದೆಡೆ ಮೇಳೈಸುವಾಗ ಉದ್ಭವವಾಗುವ ರಾಗ ಪ್ರತೀಕವೇ- ರಾಗ ಮೇಘ’ ತಾನಸೇನ ರಾಗಮೇಘ, ರಾಗ ಮಲ್ಹಾರ್‌ಗಳಲ್ಲಿ ಪರಿಪೂರ್ಣತೆಯನ್ನು ಸಾಧಿಸಿದ ಅಂದಿನ ಪ್ರಸಿದ್ಧ-ಸಿದ್ಧ ಗಾಯಕ ಎಂದೇ ಹೇಳಬಹುದು. ತನ್ನದೇ ವೈಶಿಷ್ಟéದಿಂದ ಒಡಗೂಡಿದ ಮಿಯಾಂಕೀ ಮಲ್ಹಾರ್ ರಾಗವನ್ನು ಹುಟ್ಟುಹಾಕಿದ್ದೂ ತಾನಸೇನ ! ಈ ರಾಗವನ್ನು ಹಾಡುತ್ತಿದ್ದರೆ, ತಾನಸೇನ ರಾಗಧಾರೆಯಲ್ಲಿ ಮುಳುಗೇಳುತ್ತಿದ್ದರೆ, ಕೇಳುಗರಿಗೆ ಸಂಗೀತ ರಸಧಾರೆಯೊಂದಿಗೆ, ಮಳೆಯ ಧಾರೆಯ ಸಿಂಚನದ ಆನಂದವೂ ದೊರೆಯುತ್ತಿತ್ತು.
ಹಾಂ! ಮಳೆರಾಗಗಳಲ್ಲಿ ವೈವಿಧ್ಯತೆ ಮತ್ತು ಪ್ರಸಿದ್ಧಿ ಹೆಚ್ಚಿದ್ದು ಭಾರತೀಯ ಸುವರ್ಣ ಯುಗದಲ್ಲಿ. ಸಂತ ಸೂರದಾಸ ಮಳೆರಾಗ ಸೂರ ಮಲ್ಹಾರ್ ಸೃಜಿಸಿದ. ಸೂರದಾಸ ಇಹವನ್ನೇ ಮರೆತು ಕೃಷ್ಣನ ಭಜನೆ ಸಂಕೀರ್ತನೆಯಲ್ಲಿ ತೊಡಗಿರುತ್ತಿದ್ದರೆ, ಸಾಕ್ಷಾತ್ ಬಾಲಕೃಷ್ಣನೇ ಕುಳಿತು ಆಸ್ವಾದಿಸುತ್ತಿದ್ದನೆಂಬ ಐತಿಹ್ಯವಿದೆ. ಸೂರದಾಸರ ತಂದೆ, ಅಂದಿನ ಶ್ರೇಷ್ಠ ಸಂಗೀತಗಾರರಲ್ಲೋರ್ವರಾದ ರಾಮದಾಸರೂ ಸಹ ರಾಮದಾಸೀ ಮಲ್ಹಾರ್ ಎಂಬ ಮಳೆರಾಗವನ್ನು ಸೃಜಿಸಿ ಹಾಡಿ ರಂಜಿಸುತ್ತಿದ್ದರು.
ಈ ಮುಖ್ಯ ಮಳೆಯ ರಾಗಗಳೊಂದಿಗೆ ಮೇಳೈಸಿ ಜನಮನವನ್ನು ಅಂದಿನಿಂದ ಇಂದಿನವರೆಗೂ ರಂಜಿಸುತ್ತಿರುವ ಇತರ ಮಳೆರಾಗಗಳೆಂದರೆ ಗೌಡ ಮಲ್ಹಾರ್, ಮಿಶ್ರಮೇಘ ಮಲ್ಹಾರ್, ಧುಲಿಯಾ ಮಲ್ಹಾರ್, ಮಧು ಮಲ್ಹಾರ್. ಮಲ್+ಹರ್ ಅಥವಾ ಮಲ+ಹರೀ ಎಂಬ ವುÂತ್ಪತ್ತಿಯೊಂದಿಗೆ ಮಲ್ಹರ್ ಶಬ್ದ ಉತ್ಪತ್ತಿಯಾಗಿದೆ. ಮಲ್‌ಹರ್ ಅಥವಾ ಮಲಹರೀ ಎಂದರೆ ಅರ್ಥ ಮಲ ಅಥವಾ ಕೊಳೆಯನ್ನು ತೊಳೆಯುವಂಥದ್ದು!
ಹೌದು, ಮಳೆಯು ಇಳೆಯ ಕೊಳೆಯನ್ನು ತೊಳೆಯುವಂತೆ, ಮಳೆರಾಗ ಮಲ್ಹಾರ್ ಮುಂತಾದವು ಮನಸ್ಸಿನ ಕೊಳೆ ನಿವಾರಣೆ ಮಾಡಿ ಚಿತ್ತಶುದ್ಧಿ , ಸಣ್ತೀ ಸಂಶುದ್ಧಿ ಉಂಟುಮಾಡುತ್ತದೆ. ರಾಗ್‌ಮೇಘ, ರಾಗ್ ಮಲ್ಹಾರ್ ಮುಂತಾದವುಗಳಂತೆ, ರಾಗಮಾಲ ಕೌಂಸ್, ರಾಗ್ ಸಾರಂಗ್ ಹಾಗೂ ಅವುಗಳೊಂದಿಗಿನ ವೈವಿಧ್ಯಮಯ ರಾಗಗಳು ಮಳೆಗಾಲದಲ್ಲಿ ಮನಸ್ಸನ್ನು ಮೀಯಿಸುವ ಇತರ ಮಳೆರಾಗಗಳಾಗಿವೆ.
ಡಾ. ಅನುರಾಧಾ ಕಾಮತ್