ಧಾರವಾಡ: ಪ್ರಜಾಪ್ರಭುತ್ವ, ಸಂವಿಧಾನವೇ ಆಧಾರಸ್ತಂಭವಾಗಿರುವ ಭಾರತ ದೇಶವು ಒಡೆದಿಲ್ಲ. ಒಂದು ವೇಳೆ ಒಡೆದರೂ ಜೋಡಿಸಬಹುದು. ಆದರೆ ದೇಶ ಒಡೆಯದೇ ಇರುವಾಗ ಜೋಡಿಸುವ ಮಾತೇ ಇಲ್ಲ ಎಂದು ಡಾ| ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ, ಮಾಜಿ ಸಂಸದ ಪ್ರಕಾಶ ಅಂಬೇಡ್ಕರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದ ಕುರಿತು ವಿಚಾರ ಮಾಡುವ ರಾಜಕಾರಣ ಕಾಂಗ್ರೆಸ್‌ನಲ್ಲಿ ಇಲ್ಲವೇ ಇಲ್ಲ. ಕಾಂಗ್ರೆಸ್ ದಾರಿ ತಪ್ಪಿಸುವ ರಾಜಕೀಯ ಮಾಡುತ್ತಿದೆ. ಬಿಜೆಪಿಗೆ ಸಹಾಯ ಮಾಡುವ ರಾಜಕಾರಣ ಕಾಂಗ್ರೆಸ್ ಮಾಡುತ್ತಿದ್ದು, ಅದಕ್ಕಾಗಿ ಬಿಜೆಪಿಯ ಧೈರ್ಯ ಬೆಳೆಯುತ್ತಿದೆ. ಈ ಧೈರ್ಯವೇ ಅವರನ್ನು ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುವಂತೆ ಮಾಡಿದೆ ಎಂದರು.
ಆರೆಸ್ಸೆಸ್, ಬಿಜೆಪಿ ಟೇಬಲ್ ಮೇಲೆ ಸಂವಿಧಾನ ಬದಲಾವಣೆಯ ಅಜೆಂಡಾ ಇದೆ. 1950ರಲ್ಲಿ ಆರೆಸ್ಸೆಸ್ ಸಂಘಟನೆಯು ಈ ಸಂವಿಧಾನ ನಮ್ಮದಲ್ಲ ಎಂದು ಹೇಳಿತ್ತು. ನಮಗೆ ಯಾವಾಗ ಅವಕಾಶ ಸಿಗುತ್ತೋ, ಆ ದಿನ ಅದನ್ನು ಬದಲಾವಣೆ ಮಾಡುತ್ತೇವೆ ಎಂದು ಕೂಡ ಅಂದಿತ್ತು. ಬಿಜೆಪಿ ದೇಶದ ವಿವಿಧ ರಾಜ್ಯಗಳಲ್ಲಿ, ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವವರಿಗೆ ಈ ಮಾತನ್ನು ಆಡಿರಲಿಲ್ಲ. ಬಿಜೆಪಿ ಎಲ್ಲ ರಾಜ್ಯಗಳಲ್ಲಿ ರಾಜಕೀಯ ಸಂಘಟನೆ ಅಳಿಸಲು ಮುಂದಾಗಿದೆ. ತಮ್ಮ ಅಧಿಕಾರಕ್ಕಾಗಿ ಈ ರೀತಿ ಮಾಡುತ್ತಿದೆ ಎಂದು ಹೇಳಿದರು.
ಪರಿವಾರದ ಸಂರಕ್ಷಣೆ ಸಾಮಾಜಿಕ ಸಂರಕ್ಷಣೆ ಅಲ್ಲ. ಮೀಸಲಾತಿ ಇರದೇ ಇದ್ದರೆ ನಮ್ಮ ಮಕ್ಕಳು ಶಿಕ್ಷಣ ಪಡೆಯಲು ಆಗಲ್ಲ, ನೌಕರಿ ಕೂಡಾ ಸಿಗಲ್ಲ. ಸಾಮಾಜಿಕ ಜವಾಬ್ದಾರಿ ಮಾಡಬೇಕಾದರೆ ಸಂವಿಧಾನ ಉಳಿಸಬೇಕು. ಸಂವಿಧಾನ ಉಳಿಸಲು ಸಾಮಾಜಿಕ ಹೋರಾಟದ ಅವಶ್ಯಕತೆ ಇದೆ. ತಮ್ಮ ಜವಾಬ್ದಾರಿ ಮರೆತವನು ತಮ್ಮ ಮಕ್ಕಳನ್ನು ಬಂಧನದಲ್ಲಿ ಇಡುವಂತೆ ಆಗಲಿದೆ. ಅದಕ್ಕಾಗಿ ಪ್ರತಿಯೊಬ್ಬರೂ ಸಂವಿಧಾನ ಬದಲಾವಣೆ ವಿಷಯ ಬಂದಾಗ ಜಾಗೃತರಾಗಬೇಕು ಎಂದರು.
ಕಾಮಗಾರಿ ವೀಕ್ಷಣೆ-ಸಭೆ: ಮರಾಠಾ ಕಾಲೋನಿಯ ಜ್ಞಾನ ಬುದ್ಧ ವಿಹಾರ ಮತ್ತು ಡಾ| ಬಿ.ಆರ್. ಅಂಬೇಡ್ಕರ್ ಸ್ಮಾರಕ ಕಾಮಗಾರಿ ವೀಕ್ಷಣೆ ಮಾಡಿದರು. ಧಾರವಾಡದ ಡಾ| ಬಿ.ಆರ್. ಅಂಬೇಡ್ಕರ್‌ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರೂ ಆಗಿರುವ ಅವರು, ಟ್ರಸ್ಟ್ ಪದಾಧಿಕಾರಿಗಳು ಹಾಗೂ ಸದಸ್ಯರೊಂದಿಗೆ ಸಭೆ ಕೈಗೊಂಡರು.