Advertisement

ಅಂತ್ಯಸಂಸ್ಕಾರಕ್ಕೂ ಶೋಚನೀಯ ಸ್ಥಿತಿ

12:21 PM Jan 04, 2020 | Suhan S |

ಮುದ್ದೇಬಿಹಾಳ: ಪರಿಶಿಷ್ಟರು, ಜಮೀನು ಇಲ್ಲದ ಬಡಜನರು ಮೃತಪಟ್ಟರೆ ಒಂದೋ ದಾನಿಗಳು ಕೊಟ್ಟ ಜಾಗದಲ್ಲಿ ಹೂಳಬೇಕು, ಇಲ್ಲವೇ ರಸ್ತೆ ಪಕ್ಕ ಸರ್ಕಾರಿ ಜಾಗ ಹುಡುಕಿಕೊಳ್ಳಬೇಕು. ಇದೂ ಸಾಧ್ಯವಾಗದಿದ್ದಲ್ಲಿ ಕೃಷ್ಣಾ ನದಿಯಲ್ಲಿ ಶವವನ್ನು ತೇಲಿ ಬಿಡಬೇಕು. ಇದು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಗ್ರಾಮೀಣ ಪ್ರದೇಶದಲ್ಲಿ ಇರುವ ಪರಿಸ್ಥಿತಿ.

Advertisement

ಸಂಸ್ಕಾರದಲ್ಲಿ ಎರಡು ಪದ್ಧತಿ ಒಂದು ಹೂಳುವುದು, ಇನ್ನೊಂದು ಸುಡುವುದು. ಲಿಂಗಾಯತರು, ಮುಸ್ಲಿಮರು, ಪರಿಶಿಷ್ಟರು, ಕ್ರೈಸ್ತರು ಹೂಳುತ್ತಾರೆ. ಜನಿವಾರ ಧರಿಸುವ ಸಮುದಾಯದವರು ಮತ್ತು ಗಂಭೀರ ಕಾಯಿಲೆ, ದುರ್ಘ‌ಟನೆಯಲ್ಲಿ ಸಾವನ್ನಪ್ಪಿದವರನ್ನು ಸುಡುವ ಪದ್ಧತಿ ಇದೆ. ಸುಡುವವರಿಗೆ ಸಮಸ್ಯೆ ತಲೆದೋರಲ್ಲ. ಆದರೆ ಹೂಳುವವರಿಗೆ, ಅದರಲ್ಲೂ ದಲಿತರಿಗೆ ಎಲ್ಲ ಕಡೆ ಸ್ಮಶಾನ ಇಲ್ಲದಿರುವುದು ಸಮಸ್ಯೆಯ ಗಂಭೀರತೆ ಎತ್ತಿ ತೋರಿಸುತ್ತದೆ.

ಸರ್ಕಾರವು ಎಲ್ಲ ಕಡೆ ಸ್ಮಶಾನ ಒದಗಿಸಲು ವಿಫಲವಾಗಿರುವುದು ಇದಕ್ಕೆ ಮುಖ್ಯ ಕಾರಣ. ಈ ತಾಲೂಕಲ್ಲಿ ಮುದ್ದೇಬಿಹಾಳ, ನಾಲತವಾಡ ಪಟ್ಟಣ ಸೇರಿ 101 ಗ್ರಾಮಗಳು ಇವೆ. ಅಂದಾಜು 20-25 ಗ್ರಾಮಗಳು ಕೃಷ್ಣಾ ನದಿ ದಂಡೆಯಲ್ಲಿ ಬರುತ್ತವೆ. ಪಟ್ಟಣ ಪ್ರದೇಶದಲ್ಲಿ ಶವ ಸಂಸ್ಕಾರಕ್ಕೆ ಸಮಸ್ಯೆ ಇಲ್ಲ. ಅವರವರ ಧರ್ಮ, ಪದ್ಧತಿಗೆ ಅನುಸಾರವಾಗಿ ಪ್ರತ್ಯೇಕ ಸ್ಮಶಾನ ಒದಗಿಸಲಾಗಿದೆ. ಸಮಸ್ಯೆ ಗಂಭೀರವಾಗಿರುವುದು ಗ್ರಾಮೀಣ ಭಾಗದಲ್ಲಿ. ಅದರಲ್ಲೂ ಪರಿಶಿಷ್ಟರಿಗೆ, ಜಮೀನು ಇಲ್ಲದ ಕೆಳವರ್ಗದ ಕಡುಬಡವರಿಗೆ ಹೆಚ್ಚಿನ ಸಮಸ್ಯೆ ಆಗಿರುವ ಘಟನೆಗಳು ನಡೆದಿವೆ.

ಕೆಲ ವರ್ಷಗಳ ಹಿಂದೆ ನದಿ ತೀರದ ಗ್ರಾಮವೊಂದರಲ್ಲಿ ದಲಿತ ವ್ಯಕ್ತಿಯೊಬ್ಬ ಮೃತಪಟ್ಟಿದ್ದ. ಆತನ ಸಂಸ್ಕಾರಕ್ಕೆ ಯಾರೂ ಜಾಗ ಕೊಡಲಿಲ್ಲ. ಅನಿವಾರ್ಯವಾಗಿ ಆತನ ಶವವನ್ನು ನದಿಯಲ್ಲಿ ತೇಲಿ ಬಿಡಲಾಗಿತ್ತು. ನಂತರ ಅದು ತಾಲೂಕಾಡಳಿತದ ಗಮನಕ್ಕೆ ಬಂದು ನದಿ ತೀರದ ಕೆಲ ಭಾಗದಲ್ಲಿ ಸ್ಮಶಾನ ವ್ಯವಸ್ಥೆ ಕಲ್ಪಿಸಲಾಗಿತ್ತು. ಗುಡದಿನ್ನಿ ಗ್ರಾಮದಲ್ಲಿ ದಲಿತ ಮಹಿಳೆಯೊಬ್ಬಳು ನಿಧನಳಾದಾಗಲೂ ಸಂಸ್ಕಾರಕ್ಕೆ ಜಾಗ ಸಿಕ್ಕಿರಲಿಲ್ಲ. ಕೊನೆಗೆ ಮುಖ್ಯರಸ್ತೆ ಪಕ್ಕದ ಸರ್ಕಾರದ ಖುಲ್ಲಾ ಜಾಗದಲ್ಲಿ ಸಮಾಧಿ ಅಗೆದು ಹೂಳಿದ ಘಟನೆಯೂ ನಡೆದಿತ್ತು. ಇವೆರಡೂ ಘಟನೆಗಳಿಂದ ಎಚ್ಚೆತ್ತುಕೊಂಡಿದ್ದ ದಲಿತ ಸಂಘಟನೆಗಳು ಹಲವು ಹೋರಾಟ ಹಮ್ಮಿಕೊಂಡು ದಲಿತರಿಗೆ ಪ್ರತ್ಯೇಕ ಸ್ಮಶಾನಕ್ಕಾಗಿ ಆಗ್ರಹಿಸಿದ್ದರು. ಇದರ ಬಿಸಿ ಸರ್ಕಾರಕ್ಕೂ ತಟ್ಟಿ ಗ್ರಾಮೀಣ ಭಾಗದಲ್ಲಿ ಸ್ಮಶಾನ ಒದಗಿಸಲು ಸಮೀಕ್ಷೆ ನಡೆಸಿ ಎಲ್ಲೆಲ್ಲಿ ಸರ್ಕಾರಿ ಜಾಗ ಇದೆಯೋ ಅಲ್ಲೆಲ್ಲ ಸ್ಮಶಾನಕ್ಕೆ ಅವಕಾಶ ಒದಗಿಸಿತ್ತು.

ಆದರೂ ಅನೇಕ ಗ್ರಾಮಗಳಲ್ಲಿ ಸರ್ಕಾರಿ ಜಮೀನು ಲಭ್ಯ ಇಲ್ಲದ್ದರಿಂದ ಸ್ಮಶಾನ ಒದಗಿಸುವುದು ತಾಲೂಕಾಡಳಿತಕ್ಕೆ ಇದುವರೆಗೂ ಸಾಧ್ಯವಾಗಿಲ್ಲ. ಖಾಸಗಿ ಜಮೀನು ಖರೀದಿಸಬೇಕೆಂದರೆ ಸರ್ಕಾರದ ನಿಗದಿಪಡಿಸುವ ದರದಲ್ಲಿ ಯಾರೂ ಜಮೀನು ಕೊಡುತ್ತಿಲ್ಲ. ಈ ಹಿಂದೆ ದೊಡ್ಡ ಹಿಡುವಳಿದಾರರು ತಮ್ಮ ಜಮೀನಿನಲ್ಲಿ ಸ್ವಲ್ಪ ಭಾಗವನ್ನು ಊರಿನ ಸ್ಮಶಾನಕ್ಕಾಗಿ ಬಿಟ್ಟು ಕೊಟ್ಟಿದ್ದರು. ಆದರೆ ಇತ್ತೀಚೆಗೆ ನೀರಾವರಿ ಸೌಲಭ್ಯ ಬರುತ್ತಿರುವುದರಿಂದ ಬಹಳ ಕಡೆ ತಮ್ಮ ಜಮೀನಿನಲ್ಲಿ ತಮ್ಮ ಸಮುದಾಯದವರನ್ನು ಹೊರತುಪಡಿಸಿ ಬೇರೆಯವರಿಗೆ ಅವಕಾಶ ನಿರಾಕರಿಸಲಾಗುತ್ತಿದೆ.

Advertisement

ನೆರಬೆಂಚಿ ಗ್ರಾಮದಲ್ಲಿ ಕೆಲ ತಿಂಗಳ ಹಿಂದೆ ದಲಿತ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಮಾಮೂಲಿನಂತೆ ಕೇರಿಪಕ್ಕದ ಗೌಡರ ಹೊಲದ ಬದುವಿನಲ್ಲಿ ಹೂಳಲು ಮುಂದಾಗಿದ್ದಾಗ ಹೊಲದ ಮಾಲಿಕರು ತಕರಾರು ತೆಗೆದು ಸಂಸ್ಕಾರ ತಡೆದಿದ್ದರು. ತಹಶೀಲ್ದಾರ್‌, ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಹೊಲದ ಮಾಲೀಕನ ಮನವೊಲಿಸಲು ಸಾಕಷ್ಟು ಹೆಣಗಬೇಕಾಯಿತು. ಕೊನೆಗೆ ಹೇಗೋ ಮನವೊಲಿಸಿ ಬದುವಿನಲ್ಲೇ ಸಂಸ್ಕಾರ ಮಾಡಲಾಗಿತ್ತು. ಆ ಘಟನೆಯಿಂದ ಪಾಠ ಕಲಿತ ತಾಲೂಕಾಡಳಿತ ಆ ಗ್ರಾಮಸ್ಥರಿಗೆ ಸ್ಮಶಾನ ಒದಗಿಸಲು ಕ್ರಮ ಕೈಗೊಂಡಿತು. ಅಲ್ಲಿ ಸರ್ಕಾರಿ ಜಮೀನು ಲಭ್ಯ ಇದ್ದುದರಿಂದ ಸಮಸ್ಯೆ ಗಂಭೀರಗೊಳ್ಳಲಿಲ್ಲ. ಆದರೆ ಈ ಪರಿಸ್ಥಿತಿ ಬೇರೆ ಗ್ರಾಮಗಳಲ್ಲಿದ್ದರೂ ಸರ್ಕಾರಿ ಜಾಗ ಲಭ್ಯ ಇಲ್ಲದಿರುವುದು ಸಮಸ್ಯೆಗೆ ಕಾರಣ ಎನ್ನುವ ಮಾತು ಕೇಳಿ ಬರುತ್ತಿದೆ.

38 ಗ್ರಾಮಗಳಲ್ಲಿ ಸರ್ಕಾರಿ ಸ್ಮಶಾನ ಇದೆ. ನದಿತೀರದ ಕೆಲ ಮುಳುಗಡೆ ಗ್ರಾಮಗಳಿಗೆ ಯುಕೆಪಿ ಪುನರ್ವಸತಿ ಕಲ್ಪಿಸಿದ್ದರಿಂದ ಅಲ್ಲೆಲ್ಲ ಪ್ರತ್ಯೇಕ ಸ್ಮಶಾನ ಒದಗಿಸಲಾಗಿದೆ. ಆದರೆ ಕೆಲವು ಕಡೆ ಸ್ಮಶಾನ ಜಾಗೆಯನ್ನೇ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿರುವ ಆರೋಪ ಕೇಳಿಬರುತ್ತಿವೆ. ಬಲಾಡ್ಯರ ಎದುರು ಅಬಲರು ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿರುವುದು ಪರಿಸ್ಥಿತಿಗೆ ಕನ್ನಡಿ ಹಿಡಿದಂತಾಗಿದೆ.

ಯರಗಲ್ಲ ಗ್ರಾಮದಲ್ಲಿ ಸರ್ಕಾರಿ ಸ್ಮಶಾನ ಇಲ್ಲದ್ದರಿಂದ ರಸ್ತೆಪಕ್ಕದ ಖಾಲಿ ಜಾಗದಲ್ಲೇ ಸರ್ವಧರ್ಮಿಯರು ಸಂಸ್ಕಾರ ಮಾಡುವ ಪರಿಸ್ಥಿತಿ ಇದೆ. ಆಲೂರ, ಗಂಗೂರ, ಕಮಲದಿನ್ನಿ, ಕುಂಚಗನೂರ, ನೇಬಗೇರಿ, ಬನೋಶಿ, ಗೋನಾಳ ಎಸ್‌ಎಚ್‌, ಬೈಲಕೂರ, ಕಂದಗನೂರ, ಯರಝರಿ, ಚಿರ್ಚನಕಲ್‌, ಮುದೂರ, ಹಂಡರಗಲ್ಲ, ಹಡಲಗೇರಿ, ಮುದ್ನಾಳ, ಗೆದ್ದಲಮರಿ, ಕಾಳಗಿ, ಹುನಕುಂಟಿ, ಗುಡದಿನ್ನಿ, ಕೊಪ್ಪ, ಬಸರಕೋಡ, ಗುಡ್ನಾಳ, ಚೊಂಡಿ, ಅಗಸಬಾಳ, ಗುಡಿಹಾಳ, ಕೇಸಾಪುರ, ಅರೇಮುರಾಳ, ಜಂಗಮುರಾಳ, ಅರಸನಾಳ, ನಾಗರಬೆಟ್ಟ, ಘಾಳಪೂಜಿ, ಅಡವಿ ಸೋಮನಾಳ, ಹಿರೇಮುರಾಳ ಗ್ರಾಮಗಳಲ್ಲಿ ಸ್ಮಶಾನವೇ ಇಲ್ಲ. ಅಲ್ಲಿನ ಬಡವರ ಕಷ್ಟ ದೇವರಿಗೇ ಪ್ರೀತಿ ಎನ್ನುವಂತಾಗಿದೆ.

ನಾಗರಾಳ, ತಂಗಡಗಿ, ಜಕ್ಕೇರಾಳ, ಗೋನಾಳ ಎಸ್‌ ಎಚ್‌, ನೆರಬೆಂಚಿ, ಅಡವಿ ಹುಲಗಬಾಳ, ಅಡವಿ ಸೋಮನಾಳ, ಚವನಭಾವಿ, ಮಲಗಲದಿನ್ನಿ, ಖ್ಯಾತನಡೋಣಿ, ಡೊಂಕಮಡು, ಜೈನಾಪುರ, ಕಿಲಾರಹಟ್ಟಿ, ಬೂದಿಹಾಳ ಪಿಎನ್‌, ನಾಗಬೇನಾಳ, ಢವಳಗಿ, ತಾರನಾಳ, ಬಳವಾಟ, ರೂಢಗಿ, ಆಲಕೊಪ್ಪರ, ಬಿದರಕುಂದಿ, ಸಿದ್ದಾಪುರ ಪಿಟಿ, ಗುಂಡಕರ್ಜಗಿ, ಜಮ್ಮಲದಿನ್ನಿ, ದೇವರ ಹುಲಗಬಾಳ, ಹಂದ್ರಾಳ, ಮಾದಿನಾಳ, ಜಟ್ಟಗಿ, ಇಂಗಳಗೇರಿ ಗ್ರಾಮಗಳಲ್ಲಿ ಸರ್ಕಾರಿ ಸ್ಮಶಾನಕ್ಕೆ ತಾಲೂಕು ಆಡಳಿತ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ನನೆಗುದಿಗೆ ಬಿದ್ದಿದೆ.

ನಮ್ಮೂರಲ್ಲಿ ಯಾರಿಗೂ ಸ್ಮಶಾನ ಇಲ್ಲ. ಹೀಗಾಗಿ ರಸ್ತೆ ಪಕ್ಕದಲ್ಲಿ ಸಂಸ್ಕಾರ ಮಾಡಲಾಗುತ್ತಿದೆ. ದಾನಿಗಳು ತಮ್ಮ ಹೊಲದಲ್ಲಿ ಅವಕಾಶ ಕೊಟ್ಟಲ್ಲಿ ಅಲ್ಲಿ ಸಂಸ್ಕಾರ ನಡೆಯುತ್ತದೆ. ಆದರೆ ಸರ್ಕಾರವೇ ಪ್ರತಿಯೊಂದು ಗ್ರಾಮದಲ್ಲಿ ಸ್ಮಶಾನ ಒದಗಿಸಿದರೆ ಯಾರಿಗೂ ಸಮಸ್ಯೆ ತಲೆ ದೋರುವುದಿಲ್ಲ.  –ನೀಲಕಂಠಪ್ಪ ಹೂಗಾರ, ಹಿರಿಯರು, ಯರಗಲ್ಲ

 

-ಡಿ.ಬಿ. ವಡವಡಗಿ

Advertisement

Udayavani is now on Telegram. Click here to join our channel and stay updated with the latest news.

Next