ಹುಬ್ಬಳ್ಳಿ: ಇಲ್ಲಿನ ಗಿರಣಿಚಾಳದಲ್ಲಿರುವ ಶತಮಾನ ಕಂಡ ಶಾಲೆ ಕಟ್ಟಡವನ್ನು ಕಿಡಿಗೇಡಿಗಳು ಧ್ವಂಸ ಮಾಡಿದ ಘಟನೆ ನಡೆದಿದೆ. ಇದು ಉದ್ದೇಶಪೂರ್ವಕವಾಗಿ ಮಾಡಿರುವ ಕೃತ್ಯವಾಗಿದ್ದು, ಜಾಗ ಕಬಳಿಸುವ ಹುನ್ನಾರವಾಗಿದೆ ಎಂದು ಸ್ಥಳೀಯರು ಪ್ರತಿಭಟನೆ ನಡೆಸಿದರು.
ಸುಮಾರು 135 ವರ್ಷಗಳ ಇತಿಹಾಸವುಳ್ಳ ಶಾಲೆಯಾಗಿದ್ದು, ಹಳೆ ಕಟ್ಟಡವನ್ನು ಕೆಡವಿದ್ದಾರೆ. ತಡರಾತ್ರಿ ಕಿಡಿಗೇಡಿಗಳು ಕಟ್ಟಡ ಕೆಡವಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ. ಕೆಡವಿರುವ ಕಟ್ಟಡದಲ್ಲಿ 4 ಮತ್ತು 5ನೇ ವರ್ಗದ ತರಗತಿಗಳು ನಡೆಯುತ್ತಿದ್ದವು.
ಬಾಗಿಲು ಹಾಗೂ ಗೋಡೆ ಭಾಗ ಕೆಡವಿದ್ದು, ತರಗತಿಗಳು ನಡೆಯದಂತಹ ಸ್ಥಿತಿ ನಿರ್ಮಾಣವಾಗಿದೆ. ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಹಾಗೂ ಅವರ ತಂದೆ ಮತ್ತು ಮಾಜಿ ಶಾಸಕ ವೀರಭದ್ರಪ್ಪ ಹಾಲರವಿ ಕಲಿತಿರುವ ಶಾಲೆ ಇದಾಗಿದೆ.
ಜಾಗ ಕಬಳಿಸುವ ಹುನ್ನಾರ: ಈ ಶಾಲೆ ನಗರದ ಹೃದಯ ಭಾಗದಲ್ಲಿದ್ದು, ಜಾಗದ ಕುರಿತು ಹಲವು ತಂಟೆ ತಕರಾರುಗಳಿವೆ. ಹಳೆ ವಿದ್ಯಾರ್ಥಿಗಳು ಇತ್ತೀಚೆಗೆ ಕಟ್ಟಡಕ್ಕೆ ಬಣ್ಣ, ಮೈದಾನ ಸಿದ್ದಗೊಳಿಸಿದ್ದರು. ಅಭಿವೃದ್ಧಿಯಾದರೆ ಜಾಗ ದೊರೆಯುವುದಿಲ್ಲ ಎನ್ನುವ ಕಾರಣಕ್ಕೆ ಉದ್ದೇಶ ಪೂರ್ವಕವಾಗಿ ತಡರಾತ್ರಿ ಕಟ್ಟಡ ಧ್ವಂಸಗೊಳಿಸಿದ್ದಾರೆ ಎಂದು ಸ್ಥಳೀಯರು ಹಾಗೂ ಹಳೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಆಗಮಿಸಿದ ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದರು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.