ಉಡುಪಿ/ಮಂಗಳೂರು: ಉಡುಪಿ ಶ್ರೀಕೃಷ್ಣ ಮಠವೂ ಸೇರಿದಂತೆ ನಾಡಿನ ವಿವಿಧೆಡೆ ವಿವಿಧ ಮಠಾಧೀಶರು ಮಂಗಳವಾರ ಪ್ರಥಮನ ಏಕಾದಶಿಯಂದು ಭಕ್ತರಿಗೆ ತಪ್ತಮುದ್ರಾಧಾರಣೆ ನಡೆಸಿದರು.
ಶ್ರೀಕೃಷ್ಣ ಮಠದಲ್ಲಿ ಬೆಳಗ್ಗೆ ಬೇಗ ಮಹಾಪೂಜೆಯನ್ನು ಪೂರೈಸಿದ ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮತ್ತು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು 8.45 ಗಂಟೆಯಿಂದ ಮಧ್ಯಾಹ್ನ 2.15ರ ವರೆಗೆ ನಿರಂತರ ಸಾವಿರಾರು ಭಕ್ತರಿಗೆ ಮುದ್ರಾಧಾರಣೆ ನಡೆಸಿದರು.
ಮುದ್ರಾಧಾರಣೆಗಾಗಿ ಬಂದವರ ಸರದಿ ಸಾಲು ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ರಾಘವೇಂದ್ರ ಮಠದ ವರೆಗೂ ಇತ್ತು. ಮಧ್ಯಾಹ್ನದ ಬಳಿಕ ಗುಂಪು ಗುಂಪಾಗಿ ಬಂದ ಭಕ್ತರಿಗೆ ಬಡಗುಮಾಳಿಗೆಯಲ್ಲಿ ಕಿರಿಯ ಶ್ರೀಗಳು ಮುದ್ರಾಧಾರಣೆ ಮಾಡಿದರು.
ಶ್ರೀ ಕೃಷ್ಣಾಪುರ ಮಠಾಧೀಶರು ಕೃಷ್ಣಾಪುರ ಮಠದಲ್ಲಿ, ಶ್ರೀ ಶೀರೂರು ಮಠಾಧೀಶರು ಶೀರೂರು ಮಠದಲ್ಲಿ, ಶ್ರೀ ಸುಬ್ರಹ್ಮಣ್ಯ ಶ್ರೀಪಾದರು ಉಜಿರೆ, ಕೆಮ್ಮಾಯಿ, ಪುತ್ತೂರು ಕೆಮ್ಮಿಂಜೆ, ಸುಬ್ರಹ್ಮಣ್ಯ ಮಠದಲ್ಲಿ, ಶ್ರೀ ಬಾಳೆಗಾರು ಶ್ರೀಗಳು ಪೆರ್ಡೂರು, ಪಾವಂಜೆ, ಮಂಗಳೂರು, ಬನ್ನಡ್ಕ ರಾಘವೇಂದ್ರ ಮಠ, ಕಾರ್ಕಳ, ಅಜೆಕಾರು, ಪಲಿಮಾರಿನಲ್ಲಿ ತಪ್ತಮುದ್ರಾ
ಧಾರಣೆ ನಡೆಸಿದರು. ಏಕೈಕ ಗೃಹಸ್ಥರು ನಡೆಸುವ ಸ್ಥಳವಾದ ಪುತ್ತೂರು ತಾಲೂಕು ಉಪ್ಪಿನಂಗಡಿ ಸಮೀಪದ ಎರ್ಕಿ ಮಠದಲ್ಲಿ ಅರ್ಚಕ ವೆಂಕಟರಮಣ ಉಪಾಧ್ಯಾಯ ಅವರು ಮುದ್ರಾಧಾರಣೆ ನಡೆಸಿದರು.
ಮುದ್ರಾಧಾರಣೆ ಮಾಡುವ ಮುನ್ನ ವೈದಿಕರು ಸುದರ್ಶನ ಹೋಮ ನಡೆಸಿದರು. ಅದರಲ್ಲಿ ಬಿಸಿ ಮಾಡಿದ ಶಂಖ ಚಕ್ರಗಳ ಚಿಹ್ನೆಗಳನ್ನು ಮಠಾಧೀಶರು ಭಕ್ತರ ತೋಳಿನಲ್ಲಿ ಮುದ್ರಿಸಿದರು. ಬೆಂಗಳೂರು, ಮೈಸೂರು, ಹುಬ್ಬಳ್ಳಿ,ಬೆಳಗಾವಿ, ಬಳ್ಳಾರಿ ಮೊದಲಾದೆಡೆ ವಿವಿಧ ಮಠಾಧೀಶರು ಮುದ್ರಾಧಾರಣೆ ನಡೆಸಿದರು. ಏಕಾದಶಿ ಪ್ರಯುಕ್ತ ಹಲವು ದೇವಸ್ಥಾನಗಳಲ್ಲಿ, ಭಜನಾ ಮಂದಿರಗಳಲ್ಲಿ ಭಜನೆ, ಪೂಜಾದಿಗಳು ನಡೆದವು.