Advertisement

ಚಳವಳಿಗಾರರ ಸಾಹಿತ್ಯದ ಬಗ್ಗೆ ತಪ್ಪು ಕಲ್ಪನೆ

08:29 AM Feb 07, 2019 | |

ಬೆಂಗಳೂರು: ಚಳವಳಿಗಳಲ್ಲಿ ಪಾಲ್ಗೊಂಡವರಲ್ಲಿ ಶುದ್ಧ ಸಾಹಿತ್ಯ ಇಲ್ಲ ಎಂಬ ತಪ್ಪುಕಲ್ಪನೆ ಕೆಲವರಲ್ಲಿ ಆಳವಾಗಿ ಬೇರೂರಿದೆ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಕಳವಳ ವ್ಯಕ್ತಪಡಿಸಿದರು.

Advertisement

ಅ.ನ.ಕೃ ಕನ್ನಡ ಸಂಘ ಬುಧವಾರ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ದ್ವಾರನಕುಂಟೆ ಪಾತಣ್ಣ ಅವರ ‘ಬೇಲಿ ಮೇಲಿನ ಹೂ’ ಕಥಾ ಸಂಕಲನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಚಳವಳಿಗಳ ಕುರಿತು ಕೆಲವರು ಬೇರೆ ಬೇರೆ ರೀತಿಯಲ್ಲಿ ಅರ್ಥೈಸುತ್ತಾರೆ. ಶುದ್ಧ ಮತ್ತು ಅಶುದ್ಧ ಸಾಹಿತ್ಯದ ಬಗ್ಗೆಯೂ ಮಾತನಾಡುತ್ತಾರೆ. ಆದರೆ, ಈ ಕಲ್ಪನೆ ತಪ್ಪು. ಸಾಹಿತ್ಯ ಲೋಕದಲ್ಲಿ ಶುದ್ಧ ಮತ್ತು ಅಶುದ್ಧ ಎಂಬುವುದಿಲ್ಲ ಎಂದರು.

ಚಳವಳಿಗಳ ಜತೆಯಲ್ಲೇ ಸಾಹಿತ್ಯವೂ ಕೂಡ ಸಾಗಿದೆ. ಹೀಗಾಗಿ ಸಾಹಿತ್ಯಕ್ಕೂ ಮತ್ತು ಚಳವಳಿಗೆ ನಿಕಟ ಸಂಬಂಧ ಇದೆ. ಕುವೆಂಪು ಅವರು ಎಂದೂ ಬೀದಿಗೆ ಇಳಿದು ಹೋರಾಟ ಮಾಡಲಿಲ್ಲ. ಆದರೆ, ತಮ್ಮ ವೈಚಾರಿಕ ಬರಹಗಳ ಮೂಲಕ ಸಮಾಜವನ್ನು ಎಚ್ಚರಿಸಿದರು. ಕೆಲವರು ಸತ್ಯವಲ್ಲದ ಸುಳ್ಳುಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಚಳವಳಿಗಳಿಗೆ ಸೈದ್ಧಾಂತಿಕತೆ ಇದೆ, ನೈತಿಕತೆ ಇದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಒಂದು ಬದ್ಧತೆ ಇದೆ. ಆ ಹಿನ್ನೆಲೆಯಲ್ಲಿಯೇ ಜನರು ಚಳವಳಿಗಳನ್ನು ನಂಬಿದರು. ಆದರೆ ಆ ಚಳವಳಿಗಳಲ್ಲಿ ಪಾಲ್ಗೊಂಡಿರುವವರಿಗೆ ಶುದ್ಧ ಸಾಹಿತ್ಯದ ಬರವಣಿಗೆ ಇಲ್ಲ ಎಂದು ಅಪಪ್ರಚಾರ ಮಾಡುವ ಪ್ರವೃತ್ತಿ ಸರಿಯಲ್ಲ ಎಂದು ಹೇಳಿದರು.

ದ್ವಾರನಕುಂಟೆ ಪಾತಣ್ಣ ಅವರ ಕಥಾ ಸಂಕಲನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಗ್ರಾಮೀಣ ಸೊಗಡನ್ನು ಮೇಳೈಸಿಕೊಂಡು ಕಥೆಗಳು ಒಡಮೂಡಿವೆ. ಗ್ರಾಮೀಣ ಸೊಗಡನ್ನೇ ಕೇಂದ್ರೀಕರಿಸಿ ಮತ್ತಷ್ಟು ಕೃತಿಗಳು ಹೊರಹೊಮ್ಮಲಿ ಎಂದು ಆಶಿಸಿದರು.

ಕೃತಿ ಕುರಿತು ಮಾತನಾಡಿದ ಕನ್ನಡಪರ ಚಿಂತಕ ಜಾಣಗೆರೆ ವೆಂಕಟರಾಮಯ್ಯ, ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ವ್ಯಕ್ತಿ ಎಂದು ಕೊಂಡವರು ಮುಖ್ಯ ಮಂತ್ರಿಯಾದರೂ ಈ ರಾಜ್ಯದ ಸಮಸ್ಯೆಗಳು ಪರಿಹಾರವಾಗಲಿಲ್ಲ. ಇಂತಹ ಸ್ಥಿತಿಯಲ್ಲಿ ದ್ವಾರನಕುಂಟೆ ಪಾತಣ್ಣ ಅವರ ಕಥಾ ಸಂಕಲನ ‘ಬೇಲಿ ಮೇಲಿನ ಹೂ’ ರೈತರ ಸಮಸ್ಯೆಯನ್ನು ಬಿಚ್ಚಿಡುತ್ತದೆ ಎಂದರು.

Advertisement

ಹಳ್ಳಿಯಿಂದ ನಗರಕ್ಕೆ ಬಂದು ಬದುಕು ಕಟ್ಟಿಕಟ್ಟಿಕೊಳ್ಳುವ ಮಹಿಳೆಯರ ಕಥೆಗಳು ಸ್ಫೂರ್ತಿಯ ಸೆಲೆಯಾಗಿವೆ. ಹಳ್ಳಿಯಲ್ಲಿದ್ದು ಕೊಂಡೇ ಗಂಡನ ಆಸರೆಯಿಲ್ಲದೆ ಸಂಸಾರ ಸಾಗಿಸುವ ಮಹಿಳೆಯರ ಕಥೆಗಳು ಕೂಡ ಬದುಕುವ ಚೈತನ್ಯವನ್ನು ವೃದ್ಧಿಸುತ್ತವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಮಾತನಾಡಿದರು. ಕರುನಾಡ ಸಾಹಿತ್ಯ ವೇದಿಕೆಯ ಹನುಮಂತರಾಯಪ್ಪ, ರು.ಬಸಪ್ಪ, ಸಾಹಿತಿ ದ್ವಾರನಕುಂಟೆ ಪಾತಣ್ಣ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next