Advertisement

Bangalore: ಫ್ಯಾಷನ್‌ ಡಿಸೈನರ್‌ ಪ್ರಸಾದ್‌ ಬಿದ್ದಪ್ಪ ಪುತ್ರನ ದುರ್ವರ್ತನೆ

11:16 AM Oct 28, 2023 | Team Udayavani |

ಬೆಂಗಳೂರು: ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬರಿಗೆ ಜೀವ ಬೆದರಿಕೆ ಹಾಕಿರುವ ಆರೋಪದಡಿ ಫ್ಯಾಷನ್‌ ಡಿಸೈನರ್‌ ಪ್ರಸಾದ್‌ ಬಿದ್ದಪ್ಪ ಪುತ್ರ ಆ್ಯಡಂ ಬಿದ್ದಪ್ಪ ವಿರುದ್ಧ ಯಲಹಂಕ ನ್ಯೂಟೌನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಅ.25ರಂದು ಮದ್ಯಪಾನ ಮಾಡಿ ಯಲಹಂಕದ ರೈಲ್‌ ವೀಲ್‌ ಫ್ಯಾಕ್ಟರಿ ಬಳಿ ಅಪಾಯಕಾರಿಯಾಗಿ ಕಾರು ಚಾಲನೆ ಮಾಡುತ್ತಿದ್ದರು. ಹಿಂದಿನಿಂದ ಕಾರಿನಲ್ಲಿ ಬರುತ್ತಿದ್ದ ರಾಹುಲ್‌ ಹಾರ್ನ್ ಮಾಡಿ ಆ್ಯಡಂ ಕಾರನ್ನು ಹಿಂದಿಕ್ಕಿ ಮುಂದೆ ತೆರಳಿದ್ದ. ಇದರಿಂದ ಆಕ್ರೋಶಗೊಂಡ ಆ್ಯಡಂ ಮುಂದೆ ಸಾಗುತ್ತಿದ್ದ ರಾಹುಲ್‌ ಕಾರನ್ನು ಓವರ್‌ ಟೇಕ್‌ ಮಾಡಿಕೊಂಡು ಅಡ್ಡಗಟ್ಟಿ ಗಲಾಟೆ ಆರಂಭಿಸಿದ್ದ. ನನಗೆ ಪ್ರಭಾವಿ ವ್ಯಕ್ತಿಗಳು ಗೊತ್ತು ಎಂದು ರಾಹುಲ್‌ ಗೆ ಜೀವ ಬೆದರಿಕೆ ಹಾಕಿದ್ದ. ಕೂಡಲೇ ರಾಹುಲ್‌ ಪೊಲೀಸ್‌ ಸಹಾಯವಾಣಿಗೆ ಕರೆ ಮಾಡಿ ವಿಚಾರ ತಿಳಿಸಿದ್ದ. ಸ್ಥಳಕ್ಕೆ ಬಂದ ಯಲಹಂಕ ನ್ಯೂ ಟೌನ್‌ ಪೊಲೀಸರು ಆ್ಯಡಂನ ಕಾರು ವಶಕ್ಕೆ ಪಡೆದಿದ್ದಾರೆ. ಆ ವೇಳೆ ಪೊಲೀಸರೊಂದಿಗೂ ಆ್ಯಡಂ ವಾಗ್ವಾದ ನಡೆಸಿದ್ದಾನೆ ಎನ್ನಲಾಗಿದೆ.

ತಪಾಸಣೆ ವೇಳೆ ಆ್ಯಡಂ ಮದ್ಯಪಾನ ಮಾಡಿರುವುದು ಕಂಡು ಬಂದಿದೆ. ರಾಹುಲ್‌ ದೂರಿನ ಮೇರೆಗೆ ಪೊಲೀಸರು ಆ್ಯಡಂ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ಠಾಣಾ ಜಾಮೀನಿನ ಆ್ಯಡಂ ಬಿದ್ದಪ್ಪನನ್ನು ಬಿಡುಗಡೆಗೊಳಿಸಲಾಗಿದೆ.

ನಟಿ ಸಂಜನಾ ಜತೆಗೂ ಕಿರಿಕ್‌: ನಟಿ ಸಂಜನಾ ಗಲ್ರಾನಿ ಅವರಿಗೆ ಅವಾಚ್ಯ ಪದಗಳಿಂದ ನಿಂದಿಸಿ ಮೆಸೇಜ್‌ ಕಳುಹಿಸಿದ್ದ ಆರೋಪದಡಿ ಕಳೆದ ವರ್ಷ ಮಾರ್ಚ್‌ನಲ್ಲಿ ಆ್ಯಡಂ ಬಿದ್ದಪ್ಪನನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next